ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ದಲಿತ ಮುಖ್ಯಮಂತ್ರಿ ಕನಸು ಕಾಣುವವನು ಹುಚ್ಚ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದರು.
ಇದೀಗ ರಾಜ್ಯ ರಾಜಕಾರಣದಲ್ಲಿ ಅವರ ಹೇಳಿಕೆ ತೀವ್ರ ಸಂಚಲನ ಸೃಷ್ಟಿಸಿದ್ದು 2023ರ ರಾಜ್ಯ ವಿಧಾನಸಭೆ ಚುನಾವಣೆಗು ಮುನ್ನ ದಲಿತ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲದೆ ಸಚಿವ ಸಂಪುಟ ವಿಸ್ತರಣೆ ಮೇಲೂ ಕೂಡ ಈ ವಿಚಾರ ಪರಿಣಾಮ ಬೀರಬಹುದು ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಏಕೆಂದರೆ ಬಿಜೆಪಿಯಲ್ಲಿ ಈಗಾಗಲೇ ಮುಖ್ಯಮಂತ್ರಿಯಿದ್ದು ಬೇರೆಯವರನ್ನು ಬಿಂಬಿಸಲು ಸಾಧ್ಯವಿಲ್ಲ. ಕಾಂಗ್ರೆಸ್ನಲ್ಲಿ ಈಗಾಗಲೇ ಮುಖ್ಯಮಂತ್ರಿ ಸ್ಥಾನಕ್ಕಾಗಿ ಡಿ.ಕೆ.ಶಿವಕುಮಾರ್ ಹಾಗು ಸಿದ್ದರಾಮಯ್ಯ ನಡುವೆ ಪೈಪೋಟಿ ಏರ್ಪಟ್ಟಿದ್ದು ಬೇರೆಯವರಿಗೆ ಅವಕಾಶ ಸಿಗುವುದು ಕಷ್ಟಸಾಧ್ಯ. ಜೆಡಿಎಸ್ನಲ್ಲಿ ಪಕ್ಷದ ಮೇಲೆ ಕಟುಟಂಬದ ಬಿಗಿ ಹಿಡತವಿದ್ದು ಒಂದು ವೇಳೆ ಅವಕಾಶ ನೀಡಿದರೆ ಅಲ್ಲಿ ಸಾಧ್ಯವಾಗುತ್ತದೆ.

ಒಂದು ವೇಳೆ ದಲಿತ ಸಮುದಾಯವನ್ನು ಎರಡನೇ ಸಾಲಿನ ನಾಯಕತ್ವದಲ್ಲಿ ತೋರಿಸಲು ಮೂರು ಪಕ್ಷಗಳು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತವೆ. ಏಕೆಂದರೆ ಸಾಂಪ್ರಾದಾಯಿಕವಾಗಿ ಬಿಜೆಪಿ ಪಕ್ಷ ಲಿಂಗಾಯತ ಸಮುದಾಯದ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ತಿಳಿದು ಬಂದಿದೆ. ಜೆಡಿಎಸ್ ಪಕ್ಷವನ್ನ ಒಕ್ಕಲಿಗರ ಪಕ್ಷವಾಗಿ ನೋಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂ ವಿಚಾರಕ್ಕೆ ಬಂದರೆ ಮಲ್ಲಿಕಾರ್ಜುನ ಖರ್ಗೆ ಹಾಗು ಡಾ.ಜಿ.ಪರಮೇಶ್ವರ್ ಅವಕಾಶ ವಂಚಿತರು ಎಂದು ಹೇಳಬಹುದು.
ಈ ಕುರಿತು ಮಾತನಾಡಿರುವ ಹನ್ನೂರು ಶಾಸಕ ಮಹೇಶ್ ಬಿಜೆಪಿಯಲ್ಲಿ ಗೋವಿಂದ ಖಾರಜೋಳ ಹೊರತುಪಡಿಸಿದರೆ ಬೇರೆಲ್ಲ ಉಳಿದ ನಾಯಕರು ಇನ್ನಷ್ಟೆ ಮೊಳಕೆ ಹೊಡೆಯುತ್ತಿದ್ದಾರೆ. ಜೆಡಿಎಸ್ನಲ್ಲಿ ದಲಿತ ನಾಯಕತ್ವ ಹೊರಹೊಮ್ಮಬೇಕಾಗಿದೆ. ಕಾಂಗ್ರೆಸ್ ವಿಚಾರಕ್ಕೆ ಬಂದರೆ ದಲಿತರನ್ನು ಸೈಡ್ಲೈನ್ ಮಾಡಲಾಗಿದೆ ಎಂಬ ಆರೋಪ ಈಗಾಗಲೇ ವ್ಯಾಪಕವಾಗಿ ಕೇಳಿ ಬಂದಿದೆ ಎಂದು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಪ್ರಿಯಾಂಕ ಖರ್ಗೆ, ಮಲ್ಲಿಕಾರ್ಜುಮ ಖರ್ಗೆರವರು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ದಲಿತ ನಾಯಕತ್ವ ವಿಚಾರಕ್ಕೆ ಬಂದರೆ ಕಾಂಗ್ರೆಸ್ ತನ್ನ ಬದ್ದತೆಯನ್ನ ತೋರಿದೆ. ಬಿಜೆಪಿಯಲ್ಲಿ ಗೋವಿಂದ ಖಾರಜೋಳ ಒಬ್ಬರನ್ನು ಬಿಟ್ಟರೆ ಬೇರೆ ಯಾವ ದಲಿತ ನಾಯಕರಿಗು ಅವಕಾಶ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ನಮ್ಮ ಮೇಲಿದೆ ಬಿಜೆಪಿ ದಲಿತ ನಾಯಕರನ್ನು ಬದಿಗೊತ್ತಿದ್ದರೆ ರಾಮನಾಥ್ ಕೋವಿಂದರನ್ನು ರಾಷ್ಟ್ರಪತಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಸಚಿವ ಎಸ್ ಅಂಗಾರ ಹೇಳಿದ್ದಾರೆ.
ಇತ್ತೀಚಿಗೆ ನಡೆದ ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ 2023ರಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ದಲಿತ ಮುಖ್ಯಮಂತ್ರಿಯನ್ನು ಮಾಡಲಾಗುವುದು ಎಂದು ಹೇಳಿದ್ದರು.