ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಅರ್ಧಶತಕಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ಗಳಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಬಗ್ಗುಬಡಿದು ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಅಹಮದಾಬಾದ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 6 ವಿಕೆಟ್ ಗೆ 160 ರನ್ ಗೆ ನಿಯಂತ್ರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಡೆಲ್ಲಿ ತಂಡ 12 ಪಂದ್ಯಗಳಿಂದ 6 ಜಯ ಹಾಗೂ 6 ಸೋಲಿನೊಂದಿಗೆ 12 ಅಂಕ ಸಂಪಾದಿಸಿ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದೆ. ರಾಜಸ್ಥಾನ್ ರಾಯಲ್ಸ್ 12 ಪಂದ್ಯಗಳಿಂದ 7 ಜಯ ಹಾಗೂ 5 ಸೋಲಿನೊಂದಿಗೆ 14 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ.

ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭದಲ್ಲೇ ಶ್ರೀಕರ್ ಭಟ್ (0) ವಿಕೆಟ್ ಕಳೆದುಕೊಂಡರೂ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ 2ನೇ ವಿಕೆಟ್ ಗೆ 144 ರನ್ ಜೊತೆಯಾಟ ನಿಭಾಯಿಸಿ ಗೆಲುವು ಖಚಿತಪಡಿಸಿದರು.
ಮಿಚೆಲ್ ಮಾರ್ಷ್ 62 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್ ಸೇರಿದ 89 ರನ್ ಗಳಿಸಿ ಔಟಾದರೆ, ವಾರ್ನರ್ 41 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 52 ರನ್ ಬಾರಿಸಿ ಔಟಾಗದೇ ಉಳಿದರು.











