ಮುಸ್ಲಿಮರ ಅಝಾನ್ ವಿರುದ್ಧ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸುಪ್ರಭಾತ ನಡೆಸುವ ಅಭಿಯಾನ ಕೈಗೊಂಡರು. ಎರಡು ಬಾರಿ ಗಡುವು ಕೊಟ್ಟು ದೇವಸ್ಥಾನಗಳಲ್ಲಿ ಮೈಕ್ ಕಟ್ಟಿ ರಾಮಜಪ, ಹನುಮಾನ ಚಾಲೀಸ ಪಠಣೆ ಮಾಡಿದರು. ಸರ್ಕಾರ ಕೂಡ ಇದಕ್ಕೆ ಸ್ಪಂದಿಸಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿತು. ಇದೀಗ ಸರ್ಕಾರ ಧ್ವನಿ ವರ್ಧಕಗಳ ಬಳಕೆ ಬಗ್ಗೆ ಕಾನೂನು ರೂಪಿಸಿದ್ದು, ಇಂತಿಷ್ಟೇ ಮಾದರಿಯಲ್ಲಿ ಶಬ್ಧ ಮಾಡಬೇಕೆಂದು ಆದೇಶಿಸಿದೆ.
ಆದೇಶದಲ್ಲಿ ಪ್ರಮುಖವಾಗಿ ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರೆಗೆ ಇಂತಿಷ್ಟೇ ಡೆಸಿಬಲ್ ನಿಗದಿ ಮಾಡಿ ಆದೇಶ ಮಾಡಿದೆ. ಕೈಗಾರಿಕಾ ಝೋನ್ – 75 dB – 70 dB, ಕಮರ್ಷಿಯಲ್ ಝೋನ್ – 65 dB – 55 dB, ರೆಸಿಡೆನ್ಸಿಯಲ್ ಝೋನ್ – 55 dB – 45 dB, ಸೈಲೆಂಟ್ ಝೋನ್ – 50 dB – 40 dB ಅಷ್ಟೇ ಶಬ್ದ ಇರಬೇಕು ಎಂದು ಸುತ್ತೋಲೆ ಹೊರಡಿಸಿದೆ. ಇದರ ಜೊತೆಗೆ ರಾತ್ರಿ 10 ರಿಂದ ಬೆಳಗ್ಗೆ 6ರ ವರೆಗೆ ಎಲ್ಲಾ ರೀತಿಯ ಧ್ವನಿ ವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ಕಡಿವಾಣ ಹಾಕಲಾಗಿದೆ.ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಅನುಮತಿ ಸಿಗಲಿದೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ವಾಹನಗಳು ಹಾರ್ನ್ ಮೂಲಕ ಕಿರಿಕಿರಿ ಮಾಡುವಂತಿಲ್ಲ, ಸಾರ್ವಜನಿಕರಿಂದ ದೂರು ಬಂದರೆ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ. ಮನೆಯಲ್ಲಿ ನಡೆಸುವ ಕಾರ್ಯಕ್ರಮ ಹಾಗೂ ಇತರೆ ಖಾಸಗಿ ಕಾರ್ಯಕ್ರಮ ಶಬ್ಧ 5dB ಮೀರದಂತೆ ಇರಬೇಕು ಎಂದು ಹೇಳಿದೆ.
ಹೀಗೆ ನಿರ್ದಿಷ್ಟ ಡೆಸಿಬಲ್ ಅಷ್ಟೇ ಶಬ್ದ ಇರಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ ಇಲ್ಲಿ ಗಮನಿಸಬೇಕಾದ ಒಂದು ವಿಚಾರ ಎಂದರೆ, ಈ ಮೂಲಕ ಕೇವಲ ಮುಸ್ಲಿಮರ ಅಝಾನ್ ಮಾತ್ರವಲ್ಲದೆ ಜಾತ್ರೆ, ಭಜನೆ, ಗಣೇಶ ಚತುರ್ಥಿ, ಕ್ರೈಸ್ತರ ಉತ್ಸವ ಹೀಗೆ ಎಲ್ಲದಕ್ಕೂ ಕಡಿವಾಣ ಬಿದ್ದಿದೆ. ಆಗಾಗ್ಗೆ ಗೆಳೆಯರಲ್ಲಾ ಸೇರಿ ಸಂಭ್ರಮಿಸುವ ನೆರೆಹೊರೆಯ ಮದುವೆ, ಇತರೆ ಕಾರ್ಯಕ್ರಮಗಲ್ಲಿನ ಧ್ವನಿ ವರ್ಧಕಗಳ ಬಳಕೆಗೆ ಬ್ರೇಕ್ ಬಿದ್ದಿದೆ. ಇದು ಶೂದ್ರರು ಸಂಭ್ರಮಿಸುವುದನ್ನು ಸಹಿಸಿದ ಮೇಲ್ಜಾತಿ ಬ್ರಾಹ್ಮಣ್ಯದ ಒಂದು ಭಾಗವೇ ಎಂದು ಈ ಮೂಲಕ ಸಾಬೀತಾಗಿದೆ.

ಬಹುತೇಕ ಕಡೆಗಳಲ್ಲಿ ಜಾತ್ರೆ ಎಂದರೆ ಶೂದ್ರರ ಸಂಭ್ರಮ. ಇತ್ತೀಚೆಗೆ ನೀವು ಒಂದು ಸುದ್ದಿ ಗಮನಿಸರಬಹುದು. ಕೊರಗ ಸಮುದಾಯದ ಕುಟುಂಬವೊಂದು ಮದುವೆ ಸಂಭ್ರಮದಲ್ಲಿ ಡಿಜೆ ಹಾಕಿದ್ದಕ್ಕೆ ಹಿಂದೂ ಸಂಘಟನೆಗಳು ದಾಳಿ ಮಾಡಿ ಮಾರಣಾಂತಿಕ ಹಲ್ಲೆ ಮಾಡಿತ್ತು. ಇದರ ಮುಂದುವರೆದ ಭಾಗವೇ ಇದು. ಇಂಥಾ ತುಳಿಯಲ್ಪಟ್ಟ ಜಾತಿಗಳು ಮೈ ಮುರಿದು ದುಡಿದು ಒಂದು ದಿನ ಸಂಭ್ರಮಿಸಿದರೆ ಬ್ರಾಹ್ಮಣ್ಯ ಸಹಿಸಿಕೊಳ್ಳುವುದಿಲ್ಲ. ಈಗ ಅವರ ಸಂಭ್ರಮಕ್ಕೆ ಹಾಡು ಹಾಕಬೇಕೋ ಬೇಡವೋ ಎಂದು ಪ್ರಮೋದ್ ಮುತಾಲಿಕ್ ರಂಥಾ ಬ್ರಾಹ್ಮಣರು ಕಾನೂನಿನ ಸಹಾಯದೊಂದಿಗೆ ನಿರ್ಧರಿಸಿದರು. ಇದಕ್ಕೆ ಇವರು ಬಳಸಿದ್ದು ಮುಸ್ಲಿಮರನ್ನು. ಅಸಲಿಗೆ ಇವರಿಗೆ ಮುಸ್ಲಿಮರ ಅಝಾನ್ ನಿಲ್ಲಿಸುವುದು ಒಂದು ಮಾತ್ರವಲ್ಲ ಉದ್ದೇಶ. ಮುಸ್ಲಿಮರನ್ನು ಶೂದ್ರರ ವಿರುದ್ಧ ಎತ್ತಿಕಟ್ಟಿ ಬ್ರಾಹ್ಮಣ್ಯದ ಅಸ್ಪೃಶ್ಯ ಆಚರಣೆಗಳನ್ನು ಜಾರಿ ಮಾಡುವುದು.
ಸದ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಯಾವುದೇ ಮನೆಗಳಲ್ಲಿ ಎಂಥದ್ದೇ ಕಾರ್ಯಕ್ರಮಕ್ಕೂ ಧ್ವನಿ ವರ್ಧಕ ಬಳಸುವಂತಿಲ್ಲ ಎಂದಿದೆ. ತಮಟೆ ಬಡಿಯುವುದು ನಿಷೇಧ ಎಂದು ಹೇಳಿದೆ. ಸಾವಿನ ಮನೆಯಲ್ಲಿ ತಮಟೆ ಬಡಿಯುವುದು ಬ್ರಾಹ್ಮಣರ ಆಚರಣೆಯೇ..? ಅಲ್ಲವಲ್ಲ. ಅಂಥಾ ಶೂದ್ರರ ಆಚರಣೆಗೂ ಪ್ರಮೋದ್ ಮುತಾಲಿಕ್ ರಂಥವರು ನಯವಾಗಿ ಕೊಳ್ಳಿ ಇಟ್ಟರು. ಇಸ್ಲಾಮೋಫೋಬಿಯಾವನ್ನು ಬಳಸಿಕೊಂಡು ಹಿಂದೂ ಪರ ಸಂಘಟನೆಗಳು ಶೂದ್ರ ಹಿಂದೂಗಳ ಸ್ವಾತಂತ್ರ್ಯಕ್ಕೇ ಕೊಳ್ಳಿ ಇಟ್ಟಿದ್ದಾರೆ. ಇದಕ್ಕೆ ಬೆಂಬಲಿಸಿದ ಎಲ್ಲಾ ಶೂದ್ರರು ಈಗ ಪ್ರಮೋದ್ ಮುತಾಲಿಕ್ ರಂಥಾ ಬ್ರಾಹ್ಮಣರ ಕಾಲಿಗೆರಗಿ ಧನ್ಯತಾ ಭಾವ ಧಕ್ಕಿಸಿಕೊಳ್ಳಬೇಕು.