ದೇಶದಲ್ಲಿ ಒಂದೊಂದಾಗಿ ಎಲ್ಲಾ ದರಗಳು ಏರಿಕೆಯಾಗುತ್ತಿದ್ದು, ಇದೀಗ ಗೋಧಿ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಇದರಿಂದ ಬ್ರೆಡ್, ಬಿಸ್ಕತ್ ಸೇರಿದಂತೆ ಬೇಕರಿ ತಿಂಡಿಗಳು ದುಬಾರಿಯಾಗಿವೆ.
ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಧಿ ಬೆಲೆ 2010ರ ಜನವರಿಯಲ್ಲಿ ಕೆಜಿಗೆ 32.38ರೂ.ಗೆ ಏರಿಕೆಯಾಗಿತ್ತು. ಆದರೆ ಇದೀಗ 32.78 ರೂ.ಗೆ ಏರಿಕೆಯಾಗಿದ್ದು, ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಪ್ರಕಾರ ದೇಶದಲ್ಲಿ ಗೋಧಿ ಹಿಟ್ಟಿನ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.9.15ಕ್ಕೆ ಏರಿಕೆಯಾಗಿದೆ. ಇದರಿಂದ ಸಹಜವಾಗಿ ಗೋಧಿ ಹಿಟ್ಟು ಬಳಕೆಯ ತಿಂಡಿಗಳ ಬೆಲೆಯಲ್ಲೂ ಏರಿಕೆಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ 2 ತಿಂಗಳು ಆದರೂ ಮುಗಿಯುವ ಸೂಚನೆ ದೊರೆಯದ ಕಾರಣ ಅತೀ ಹೆಚ್ಚು ಗೋಧಿ ಬೆಳೆಯುವ ಈ ದೇಶಗಳಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಮತ್ತೊಂದೆಡೆ ಬಿಸಿಲು ಹೆಚ್ಚಾಗಿರುವುದರಿಂದ ಗೋಧಿ ಉತ್ಪಾದನೆಯಲ್ಲಿ ಕೂಡ ಕುಂಠಿತವಾಗಿದೆ.
ಸಾಮಾನ್ಯವಾಗಿ ಬೇಕರಿಗಳಲ್ಲಿ ತಿಂಡಿ ಮಾಡಲು ಗೋಧಿಯನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದ ಬ್ರೆಡ್ ಬೆಲೆ ಶೇ.8.39ರಷ್ಟು ಹೆಚ್ಚಳ ಆಗಲಿದೆ. ಇದು ಕಳೆದ 7 ವರ್ಷಗಳಲ್ಲೇ ಗರಿಷ್ಠ ಆಗಿದೆ.
ಬಿಸ್ಕತ್ ತಯಾರಕ ಕಂಪನಿಗಳು ದೇಶದಲ್ಲಿ ಹೆಚ್ಚಾಗಿದ್ದು, ಬ್ರಿಟಾನಿಯಾ, ಪಾರ್ಲೆ ಮುಂತಾದ ಕಂಪನಿಗಳು ಬಿಸ್ಕತ್ ಮೇಲಿನ ದರವನ್ನು ಏರಿಸಲಿದೆ. ಜಮ್ ಜಮ್ ಬಿಸ್ಕತ್, ಮಾರಿ ಗೋಲ್ಡ್, ನೂಟ್ರಿ ಚೂಸ್, ಫ್ರೂಟ್ ಕೇಕ್ಸ್ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ. ಬಿಸ್ಕತ್ ಕಂಪನಿಗಳು 2022ರ ಆರಂಭದಲ್ಲೇ ದರ ಏರಿಸಿದ್ದು, ವರ್ಷದಲ್ಲಿ ಎರಡು ಬಾರಿ ಇದೇ ಮೊದಲ ಬಾರಿ ಏರಿಕೆ ಮಾಡಲಿವೆ.
ಇತ್ತೀಚೆಗೆ ಬಿಸ್ಕತ್ ಕಂಪನಿಗಳು ಗೋಧಿ ಹಿಟ್ಟು, ಸಕ್ಕರೆ, ಗೋಡಂಬಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬಿಸ್ಕತ್ ಗಳ ಬೆಲೆ ಹೆಚ್ಚಿಸಬೇಕಾಯಿತು ಎಂದು ಹೇಳಿಕೆ ನೀಡಿದ್ದವು. ಆಗಿನ ದರಕ್ಕೆ ಹೋಲಿಸಿದರೆ ಈ ಬಾರಿ ಇನ್ನೂ ಹೆಚ್ಚಾಗಿದ್ದು, ಗ್ರಾಹಕರಿಗೆ ಬರೆ ಬೀಳಲಿದೆ.