ಸಂಘಟಿತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟಿ-20 ಪಂದ್ಯದಲ್ಲಿ 91 ರನ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದೆ.
ಅಹಮದಾಬಾದ್ ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 208 ರನ್ ಕಲೆ ಹಾಕಿತು. ಬೃಹತ್ ಮೊತ್ತ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 17.4 ಓವರ್ ಗಳಲ್ಲಿ 117 ರನ್ ಗೆ ಆಲೌಟಾಯಿತು.
ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಮಿಚೆಲ್ ಮಾರ್ಷ್ (25) ಮತ್ತು ನಾಯಕ ರಿಷಭ್ ಪಂತ್ (21) ಮತ್ತು ಡೇವಿಡ್ ವಾರ್ನರ್ (19) ಹೊರತುಪಡಿಸಿ ಉಳಿದವರು ಎರಡಂಕಿಯ ಮೊತ್ತವನ್ನು ಗಳಿಸದೇ ನಿರ್ಗಮಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಪಿನ್ನರ್ ಮೊಯಿನ್ ಅಲಿ 3, ಮುಖೇಶ್ ಚೌಧರಿ, ಸಿಮರ್ಜಿತ್ ಸಿಂಗ್ ಮತ್ತು ಡ್ವೈನ್ ಬ್ರಾವೊ ತಲಾ 2 ವಿಕೆಟ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ತಂಡ ಡೆವೊನ್ ಕಾನ್ವೆ ಮತ್ತು ಋತುರಾಜ್ ಗಾಯಕ್ವಾಡ್ ಮೊದಲ ವಿಕೆಟ್ ಗೆ 110 ರನ್ ಪೇರಿಸಿ ಭರ್ಜರಿ ಆರಂಭ ನೀಡಿದರು. ಡೆವೊನ್ ಕಾನ್ವೆ 49 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ 87 ರನ್ ಸಿಡಿಸಿದರೆ, ಋತುರಾಜ್ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 41 ರನ್ ಗಳಿಸಿದರು.