ಸಿಲಿಕಾನ್ ಸಿಟಿಯಲ್ಲಿ ಸಂಚಾರಕ್ಕೆ ಮೆಟ್ರೋ ದಿ ಬೆಸ್ಟ್ ಚಾಯ್ಸ್. ಇದೀಗ ನಮ್ಮ ಮೆಟ್ರೋ ಮತ್ತೊಂದು ಹೆಜ್ಜೆ ಮುಂದೆ ಇಡುತ್ತಿದೆ. ಐಟಿ ಕಂಪನಿಗಳ ಸಹಭಾಗಿತ್ವದಲ್ಲಿ ದೇಶದಲ್ಲಿ ಮೊದಲ ಬಾರಿಗೆ ನಿಯೋ ರೈಲು ಆರಂಭಿಸಲು ಮುಂದಾಗಿದೆ. ಅಷ್ಟಕ್ಕೂ ನಿಯೋ ರೈಲು ಎಂದರೇನು.? ಹೇಗಿರುತ್ತೆ ಈ ಪುಟ್ಟ ರೈಲು.? ಇಲ್ಲಿದೆ ಮಾಹಿತಿ.
ಸದ್ಯದಲ್ಲೆ ಬೆಂಗಳೂರಿಗೆ ಬರಲಿದೆ ಮೆಟ್ರೋ ನಿಯೋ ರೈಲು !
ಸಿಲಿಕಾನ್ ಸಿಟಿ ಬೆಂಗಳೂರಿಗೆ ಸದ್ಯದಲ್ಲೆ ಮೆಟ್ರೋ ನಿಯೋ ರೈಲು ಎಂಟ್ರಿಯಾಗಲಿದೆ. ಈಗಾಗಲೇ ವಿದೇಶಗಳಲ್ಲಿ ಚಾಲ್ತಿಯಲ್ಲಿರುವ ಈ ನಿಯೋ ರೈಲು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನ ಮೊದಲ ಸಂಚಾರವನ್ನ ಆರಂಭಿಸಲಿದೆ. ಮೂರು ಬಸ್ ಜಾಯಿಂಟ್ ಗಳಷ್ಟು ಉದ್ದವಿರುವ ಮೆಟ್ರೊ ನಿಯೋ ರೈಲು ವಿದ್ಯುತ್ ಮೂಲಕ ರಸ್ತೆಯಲ್ಲಿ ಸಂಚಾರ ಮಾಡಲಿದೆ. ನೋಡಲು ಬಸ್ ಥರ ಕಾಣುವ ಈ ರೈಲಿನಿಂದ ಎಂಜಿನ್ ಮೂಲಕ ಎತ್ತರದ ಎಲೆಕ್ಟ್ರಿಕ್ ಲೈನ್ ಗೆ ಕನೆಕ್ಷನ್ ನೀಡಲಾಗುತ್ತದೆ. ಆ ವಿದ್ಯುತ್ ಆಧಾರದ ಮೇಲೆ ರೈಲು ಸಂಚಾರ ಮಾಡಲಿದೆ. ನಮ್ಮ ಮೆಟ್ರೋ ರೀತಿಯೇ ಇದೊಂದು ಗ್ರೀನ್ ಟೆಕ್ನಾಲಜಿಯಾಗಿದ್ದು ಮೆಟ್ರೋ ನಿಯೋ ರೈಲಿಗೆ ಡೆಡಿಕೇಟೆಡ್ ಕಾರಿಡಾರ್ ಮೀಸಲಿರಿಸಲಾಗುತ್ತದೆ. ಮೆಟ್ರೋ ನಿಯೋ ರೈಲು ಸಂಚಾರಕ್ಕೆ ಕಾರಿಡಾರ್ ನಿರ್ಮಾಣ ಮಾಡಲು ಒಂದು ಕಿಲೋಮೀಟರ್ ಗೆ 120 ಕೋಟಿ ವೆಚ್ಚ ತಗುಲಲಿದ್ದು ಏಕಕಾಲದಲ್ಲಿ 250 ಪ್ರಯಾಣಿಕರನ್ನ ಹೊತ್ತು ಸಾಗುವ ಸಾಮರ್ಥ್ಯ ಹೊಂದಿದೆ ಎಂದು ನಿಗಮದ ಎಂಡಿ ಅಂಜು ಫರ್ವೇಜ್ ಮಾಹಿತಿ ನೀಡಿದ್ದಾರೆ.
ನಿಯೋ ರೈಲಿನ ನೀಲಿ ನಕ್ಷೆ ರೆಡಿ ಮಾಡಿದ ಮೆಟ್ರೋ ನಿಗಮ !
ನಗರದಲ್ಲಿ ಹೆಚ್ಚು ಟ್ರಾಫಿಕ್ ಹಾಗೂ ಐಟಿ ಉದ್ಯೋಗಿಗಳು ಇರುವ ಏರಿಯಾಗಳಲ್ಲಿ ಮೆಟ್ರೋ ನಿಯೋ ರೈಲು ಆರಂಭ ಮಾಡುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಸುತ್ತ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲು ಓಡಾಡಲಿದ್ದು ಪ್ರತಿ 500 ಮೀಟರ್ ಗೆ ಒಂದು ಸ್ಟೇಷನ್ ಬರಲಿದೆ. ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್ ಶಿಪ್ ಅಥಾರಿಟಿಯಿಂದ ಮೆಟ್ರೋ ನಿಯೋ ರೈಲು ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಇದು ಮೆಟ್ರೋ ಫೀಡರ್ ಆಗಿಯೂ ಕೂಡ ಕಾರ್ಯ ನಿರ್ವಹಿಸಲಿದೆ. ಇದ್ರಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವಂತಹ ಕಂಪನಿಗಳು ಹಣ ಹೂಡಿಕೆ ಮಾಡುತ್ತಿದೆ. ಬಿಎಂಆರ್ ಸಿ ಎಲ್ ನಿಯೋ ರೈಲಿಗೆ ಬೇಕಾದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಕಂಪನಿಗಳ ಎಂಪ್ಲಾಯಿಸ್ ಗೆ ಉಚಿತ ಪ್ರಯಾಣ ನೀಡಲಾಗುತ್ತದೆ ಅಂತ ಮೆಟ್ರೋ ಎಂಡಿ ತಿಳಿಸಿದರು. ಈ ಮೆಟ್ರೋ ನಿಯೋ ರೈಲಿಗೆ ಈಗಾಗಲೇ ಡಿಪಿಆರ್ ಸಿದ್ದ ಮಾಡಲಾಗುತ್ತಿದೆ. ಅಂದುಕೊಂಡಂತೆ ಎಲ್ಲಾ ಆದರೆ ಸದ್ಯದಲ್ಲೆ ಮೆಟ್ರೋ ನಿಯೋ ರೈಲು ಬೆಂಗಳೂರಲ್ಲಿ ಸಂಚಾರ ಮಾಡಲಿದೆ.