ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಬಾರಿಸಿದ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ಸತತ 8 ಸೋಲುಗಳ ನಂತರ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಅಹಮದಾಬಾದ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವನ್ನು 20 ಓವರ್ ಗಳಲ್ಲಿ 6 ವಿಕೆಟ್ ಗೆ 158 ರನ್ ಗೆ ನಿಯಂತ್ರಿಸಿದ ಮುಂಬೈ ಇಂಡಿಯನ್ಸ್ 19.2 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ನಾಯಕ ರೋಹಿತ್ ಶರ್ಮ (2) ಮತ್ತು ಇಶಾನ್ ಕಿಶನ್ (26) ವಿಫಲರಾದರೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ 3ನೇ ವಿಕೆಟ್ ಗೆ 81 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಆಧರಿಸಿದರು.

ಸೂರ್ಯಕುಮಾರ್ ಯಾದವ್ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿ ಔಟಾದರೆ, ತಿಲಕ್ ವರ್ಮಾ 30 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 35 ರನ್ ಬಾರಿಸಿದರು.
ಇವರಿಬ್ಬರು ತಂಡ ಗೆಲುವಿನ ಹೊಸ್ತಿಲಲ್ಲಿದ್ದಾಗ ಔಟಾಗಿ ಒತ್ತಡಕ್ಕೆ ಸಿಲುಕಿತು. ಆದರೆ ಟಿಮ್ ಡೇವಿಡ್ 8 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿ ತಂಡದ ಗೆಲುವು ಖಚಿತಪಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಅರ್ಧಶತಕದ ಹೊರತಾಗಿಯೂ ಸಾಧಾರಣ ಮೊತ್ತಕ್ಕೆ ಕುಸಿಯಿತು.






