2022-23ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ 8ರಷ್ಟು ಪ್ರಗತಿ ಸಾಧಿಸುತ್ತದೆ ಎಂದು ನರೇಂದ್ರ ಮೋದಿ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. ಆದರೆ ಸುತ್ತಲಿನ ವಾತಾವರಣವು ಈ ಭರವಸೆಗೆ ಪೂರಕವಾಗಿ ಕಾಣುತ್ತಿಲ್ಲ. ಭಾರತದ ನೆರೆ ರಾಷ್ಟ್ರಗಳು, ಭೂತಾನ್ ಮತ್ತು ಬಾಂಗ್ಲಾದೇಶವನ್ನು ಹೊರತುಪಡಿಸಿ, ಸತತವಾಗಿ ಕುಸಿತ ಎದುರಿಸುತ್ತಿದ್ದು, ಈ ದೇಶಗಳಲ್ಲಿನ ಆರ್ಥಿಕ ಗೊಂದಲಗಳು ಭಾರತಕ್ಕೆ ಮತ್ತಷ್ಟು ಹೊರೆಯಾಗುತ್ತಿದೆ. ಹಣದುಬ್ಬರವೇ ಪ್ರಧಾನ ಅಂಶವಾಗಿರುವುದರಿಂದ, ಭಾರತಕ್ಕೆ ಎಲ್ಲ ದಿಕ್ಕುಗಳಿಂದಲೂ ಅಪಾಯ ಎದುರಾಗುತ್ತಿದೆ. ವಿದೇಶಿ ಆಪದ್ಧನದ ಪ್ರಮಾಣ ಕಳೆದ 17 ತಿಂಗಳುಗಳ ಆಮದು ಪ್ರಮಾಣಕ್ಕೆ ಸಮನಾಗಿರಬೇಕಾಗಿದ್ದು, ಈಗ ಕೇವಲ 12 ತಿಂಗಳ ಆಮದು ಪ್ರಮಾಣಕ್ಕೆ ಸರಿದೂಗುವಂತಿದೆ. ಫೆಡರಲ್ ಬ್ಯಾಂಕ್ ದರಗಳ ಹೆಚ್ಚಳದಿಂದ ಇದು ಇನ್ನೂ ಕುಸಿಯುವ ಸಾಧ್ಯತೆಗಳಿವೆ. ಚಿಲ್ಲರೆ ಹಣದುಬ್ಬರವು ಶೇ 6.75ರಷ್ಟಿದ್ದು, ಸದ್ಯದಲ್ಲೇ ಕಡಿಮೆಯಾಗುವ ಸಾಧ್ಯತೆಗಳಿಲ್ಲ. ಏಕೆಂದರೆ ತೈಲ ಸರಬರಾಜು ವ್ಯತ್ಯಯವಾಗುವುದರಿಂದ ತೈಲ ಬೆಲೆಗಳೂ ಕಡಿಮೆಯಾಗುವುದಿಲ್ಲ. ಹಿಂದೆ ಆದಂತೆಯೇ ಇದು ಹೆಚ್ಚಾಗುತ್ತಲೇ ಹೋಗುತ್ತದೆ. ಅಮೆರಿಕದಲ್ಲಿ ಈಗಲೇ ಕಂಡುಬರುತ್ತಿರುವಂತೆ ಭಾರತದಲ್ಲೂ ಇದು ಸರ್ಕಾರದ ಆರ್ಥಿಕ ಹೊರೆಯನ್ನು ಜಾಸ್ತಿ ಮಾಡಲಿದೆ.
ರಷ್ಯಾ ವಿರುದ್ಧ ದಿಗ್ಬಂಧನ ಹೆಚ್ಚಾಗುತ್ತಿರುವಂತೆಯೇ ತೈಲ ಮತ್ತು ಬಿಡಿ ಸಲಕರಣೆಗಳ ಸರಬರಾಜು ಮಾರುಕಟ್ಟೆಯೂ ಕುಸಿಯಲಾರಂಭಿಸುತ್ತದೆ. ಭಾರತ ಈ ನಿಟ್ಟಿನಲ್ಲಿ ರಷ್ಯಾದ ಮಾರುಕಟ್ಟೆಯನ್ನೇ ಅವಲಂಬಿಸಿರುವುದರಿಂದ ಚೀನಾದ ಮೊರೆ ಹೋಗಬೇಕಾಗಿದೆ. ಚೀನಾದಿಂದ ಆಮದು ಪ್ರಮಾಣ ಹೆಚ್ಚಾಗಿರುವುದು ಇದನ್ನೇ ಸೂಚಿಸುತ್ತದೆ. ಭಾರತದಲ್ಲಿ ಕೌಟುಂಬಿಕ ಉಳಿತಾಯವೇ ಬಂಡವಾಳ ಹೂಡಿಕೆಗೆ ನಿರ್ಣಾಯಕವಾಗಿದ್ದು, ಈಗ ಜಿಡಿಪಿಯ ಶೇ 30ರಷ್ಟಕ್ಕೆ ಸೀಮಿತವಾಗಿದೆ. ಇದು ಶೇ 36ಕ್ಕೆ ಏರಿಕೆಯಾದಲ್ಲಿ ಮಾತ್ರವೇ ಭಾರತ ಶೇ 8ರಷ್ಟು ಜಿಡಿಪಿ ವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಮತ್ತೊಂದೆಡೆ ಉದ್ಯೋಗ ಸೃಷ್ಟಿಯ ಪ್ರಮಾಣದಲ್ಲೂ ಸುಧಾರಣೆ ಕಂಡುಬಂದಿಲ್ಲ. ಬೃಹತ್ ಕೈಗಾರಿಕೆಗಳಲ್ಲಿ ಹೆಚ್ಚಿನ ಪ್ರಮಾಣದ ಕೃತಕ ಬುದ್ಧಿಮತ್ತೆ ಮತ್ತು ರೋಬೋಟಿಕ್ಸ್ ಬಳಸುತ್ತಿರುವುದರಿಂದ ಉದ್ಯೋಗ ಸೃಷ್ಟಿಯ ಪ್ರಮಾಣ ಕುಸಿಯುತ್ತಿದೆ. 2021ರಲ್ಲಿ ಶ್ರಮಿಕರ ಭಾಗವಹಿಸುವಿಕೆಯ ಪ್ರಮಾಣ ಶೇ 40ರಷ್ಟಿದೆ.
ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯದ ಈ ಕೆಲವು ಸಮಸ್ಯೆಗಳನ್ನು ಗಮನಿಸಬೇಕಿದೆ :
ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಿ, ಬಳಕೆ ಹೆಚ್ಚಾಗುವುದರ ಪರಿಣಾಮ ವಾಹನ ತಯಾರಿಕಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕುಸಿಯುತ್ತವೆ. ಮುಂದಿನ ಹಲವು ವರ್ಷಗಳಲ್ಲಿ ಸಾವಿರಾರು ಕಾರ್ಮಿಕರು ತಮ್ಮ ನೌಕರಿ ಕಳೆದುಕೊಳ್ಳಲಿದ್ದಾರೆ. ಹೆಚ್ಚುತ್ತಿರುವ ವಾತಾವರಣ ಮಾಲಿನ್ಯದ ಪರಿಣಾಮ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಗಿತಗೊಳಿಸುವುದು ಭಾರತಕ್ಕೆ ಅನಿವಾರ್ಯವಾಗುತ್ತದೆ, ಇದರಿಂದ ಕಲ್ಲಿದ್ದಲು ಗಣಿಗಳೂ ಸ್ಥಗಿತವಾಗುತ್ತವೆ. ಇದು ಬೃಹತ್ ಪ್ರಮಾಣದ ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಇದನ್ನು ಸಮರ್ಪಕವಾಗಿ ಎದುರಿಸಲು ಸರ್ಕಾರ ಕ್ಷಿಪ್ರ ಗತಿಯಲ್ಲಿ ಕಾರ್ಯಪ್ರವೃತ್ತವಾಗಬೇಕಿದ್ದು ಕೈಗಾರಿಕೆಗಳೊಡನೆ, ಎಲ್ಲ ಭಾಗಿದಾರರೊಡನೆ ಸಮಾಲೋಚನೆ ನಡೆಸಬೇಕಿದೆ. ಇಲ್ಲವಾದಲ್ಲಿ ಸಾಮಾಜಿಕ ಕ್ಷೋಭೆ ಉಂಟಾಗುವ ಸಾಧ್ಯತೆಗಳಿರುತ್ತವೆ.
ಭಾರತದಲ್ಲಿ ಕೃಷಿ 144 ದಶಲಕ್ಷ ಕೃಷಿ ಕಾರ್ಮಿಕರಿದ್ದಾರೆ, ಬಹುಪಾಲು ಕಡಿಮೆ ಕೂಲಿಗೆ ದುಡಿಯುವವರಾಗಿರುತ್ತಾರೆ. ಈ ದುಡಿಮೆಗಾರರನ್ನು ಇನ್ನೂ ಹೆಚ್ಚಿನ ಉತ್ಪಾದಕೀಯತೆ ಇರುವೆಡೆಗೆ ಸಾಗಿಸುವ ಸುಗಮ ಮಾರ್ಗವನ್ನು ಸರ್ಕಾರ ಅನುಸರಿಸಬೇಕಿದೆ. ಈ ದುಡಿಮೆಗಾರರಿಗೆ ಉತ್ತಮ ವೇತನ ದೊರೆಯುವಂತೆ ಮಾಡುವ ಮೂಲಕ ಕೃಷಿ ಆಧಾರಿತ ಜನಸಂಖ್ಯೆಯನ್ನು ಈಗಿನ ಶೇ 42ರಿಂದ ಶೇ 25ಕ್ಕೆ ಮುಂದಿನ ಐದಾರು ವರ್ಷಗಳಲ್ಲಿ ಕಡಿಮೆ ಮಾಡಬೇಕಿದೆ. ಇದಕ್ಕೆ ಜಿಲ್ಲಾ ಮಟ್ಟದ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಈ 144 ದಶಲಕ್ಷ ಕೃಷಿಕರಲ್ಲಿ ಯಾರಿಗೂ ಪ್ರಯೋಜನವಾಗದ, ರೈತರಿಗೆ ವರ್ಷಕ್ಕೆ ಆರು ಸಾವಿರ ರೂ ನೀಡುವ ಯೋಜನೆಗಿಂತಲೂ ಇಂತಹ ಯೋಜನೆಯಿಂದ ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದು.

ದೇಶದಲ್ಲಿ ರಾಜ್ಯಗಳ ನಡುವಿನ ತಲಾ ಆದಾಯದ ಪ್ರಮಾಣದಲ್ಲಿರುವ ವ್ಯತ್ಯಾಸಗಳು ಚಿಂತೆಗೀಡುಮಾಡುವಂತಿವೆ. ಬಿಹಾರದ ತಲಾ ಆದಾಯ 50,733 ರೂಗಳಷ್ಟಿದ್ದರೆ, ಸಿಕ್ಕಿಂನಲ್ಲಿ 5.2 ಲಕ್ಷ ರೂಗಳಷ್ಟಿದೆ. ದೇಶದ 14 ರಾಜ್ಯಗಳಲ್ಲಿ ತಲಾ ಆದಾಯ 3000 ಡಾಲರ್‌ಗಿಂತಲೂ ಹೆಚ್ಚಾಗಿದ್ದು, 14 ರಾಜ್ಯಗಳಲ್ಲಿ 2000 ಡಾಲರ್‌ಗಿಂತಲೂ ಕಡಿಮೆ ಇದೆ.
ಆದಾಯದಲ್ಲಿನ ತಾರತಮ್ಯಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ, ಯಾವುದೇ ಆರ್ಥಿಕ ಸಮೀಕ್ಷೆಗಳಲ್ಲೂ ಈ ಅಸಾಮಂಜಸ್ಯವನ್ನು ಪರಿಗಣಿಸಲಾಗಿಲ್ಲ. ಇದರಿಂದ ವಲಸೆ ಹೆಚ್ಚಾಗುವುದೇ ಅಲ್ಲದೆ ವಲಸೆಯಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳೂ ಉಲ್ಬಣಿಸುವುದನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಹಣಕಾಸು ಆಯೋಗಗಳೂ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು, ಈ ರಾಜ್ಯಗಳಲ್ಲಿನ ಆಡಳಿತ ದೋಷವನ್ನು ತೋರಿಸುತ್ತದೆ. ಸಚಿವರು ಗಲಭೆಯನ್ನು ಪ್ರಚೋದಿಸುವಂತಹ ಭಾಷೆ ಮತ್ತು ಧಾರ್ಮಿಕ ವಿಚಾರಗಳಿಗಿಂತಲೂ ಈ ವಿಚಾರಗಳಿಗೆ ಹೆಚ್ಚಿನ ಗಮನ ನೀಡಬೇಕಿದೆ.
ಆದಾಯದಲ್ಲಿನ ಅಸಮಾನತೆ ಹೆಚ್ಚಾದಷ್ಟೂ ಮಾವೋವಾದಿ ಚಳುವಳಿಯಂತಹ ಸಂಘಟನೆಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಅಸಮಾನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಭಾರತದಲ್ಲಿ ಅಸಮಾನತೆ ಹೆಚ್ಚಾಗಲು ಅವಕಾಶ ಮಾಡಿಕೊಡಲಾಗುತ್ತಿದೆ.
ವೈವಿಧ್ಯಮಯ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳನ್ನೊಳಗೊಂಡ ಭಾರತದಲ್ಲಿ ರಾಜ್ಯಗಳಲ್ಲಿ ಯಾವುದೇ ಪಕ್ಷಗಳು ಅಧಿಕಾರದಲ್ಲಿದ್ದರೂ ಅಸ್ಮಿತೆಯ ರಾಜಕಾರಣವನ್ನೇ ಮಾಡುತ್ತವೆ. ಆದರೆ ಸಮಸ್ತ ಜನರನ್ನು ಬಾಧಿಸುವಂತಹ ಶಿಕ್ಷಣ ಅಥವಾ ಕೃಷಿ ನೀತಿಯಲ್ಲಿ ಪ್ರಮುಖ ಸುಧಾರಣೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲೂ ರಾಜ್ಯಗಳ ನೈಜ ಭಾವನೆಗಳನ್ನೂ ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಲೇ ಇದೆ. ರಾಜಕೀಯ ಕ್ಷೋಭೆ ಮತ್ತು ಅಸಮಾಧಾನಗಳು ಶೀಘ್ರ ಅಭಿದ್ಧಿಗೆ ಕಂಟಕಪ್ರಾಯವಾಗುತ್ತವೆ.
ಈ ಹಿನ್ನೆಲೆಯಲ್ಲಿ ನಾನು ಕೆಲವು ಕ್ರಮಗಳನ್ನು ಸೂಚಿಸುತ್ತೇನೆ :
ಕಳೆದ ವರ್ಷದ ಸರಾಸರಿ ಮಾರಾಟ ಬೆಲೆಯನ್ನು ಆಧರಿಸಿ, 25 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ ಶೇರುಗಳನ್ನು ಹೊಂದಿರುವ ಎಲ್ಲ ವ್ಯಕ್ತಿ ಮತ್ತು ಸಂಸ್ಥೆಗಳ ಮೇಲೆ ಶೇ 3ರಷ್ಟು ಸಂಪತ್ತಿನ ತೆರಿಗೆ ವಿಧಿಸಬೇಕು. ವ್ಯಕ್ತಿಗಳು, ಸಂಸ್ಥೆಗಳು ಹೊಂದಿರುವ ಎಲ್ಲ ರೀತಿಯ ಆಸ್ತಿಗಳನ್ನೂ ಈ ತೆರಿಗೆಯ ವ್ಯಾಪ್ತಿಗೊಳಪಡಿಸಿ, 50 ಸಾವಿರ ರೂಗಳಿಗೂ ಹೆಚ್ಚು ವಾರ್ಷಿಕ ಸಂಪತ್ತಿನತೆರಿಗೆ ಪಾವತಿಸುವವರಿಗೂ ಇದನ್ನು ವಿಸ್ತರಿಸಬೇಕು. ಇದರಿಂದ ಸರ್ಕಾರಕ್ಕೆ ಒಂದು ಲಕ್ಷ ಕೋಟಿ ರೂ ಆದಾಯ ಬರುತ್ತದೆ. ಈ ಮೊತ್ತವನ್ನು ಬಳಸಿ, ಕೃಷಿ ಕಾರ್ಮಿಕರನ್ನು ಇನ್ನೂ ಹೆಚ್ಚಿನ ಉತ್ಪಾದಕೀಯ ಕೆಲಸಗಳಲ್ಲಿ ತೊಡಗಿಸಬಹುದು.
ಹಾಗೆಯೇ ವೃತ್ತಿಪರ ಶಿಕ್ಷಣದ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸಬಹುದು. ಗ್ರಾಮೀಣ ಪ್ರದೇಶಗಳ ಆರೋಗ್ಯ ಸೌಲಭ್ಯಗಳನ್ನು ಉತ್ತಮಗೊಳಿಸಬಹುದು. ಆದಾಯದಲ್ಲಿನ ತಾರತಮ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಕ್ಕೂಟ ಸರ್ಕಾರವು ಬಡ ರಾಜ್ಯಗಳಲ್ಲಿ ಆರ್ಥಿಕ ಸುಧಾರಣೆಯನ್ನು ಸಾಧಿಸಬೇಕು.
ರಾಜ್ಯ ಸರ್ಕಾರಗಳು ಮತ್ತು ವಾಣಿಜ್ಯ ಸಮೂಹಗಳನ್ನೊಳಗೊಂಡ ಆಯೋಗಗಳನ್ನು ರಚಿಸುವ ಮೂಲಕ ಕೇಂದ್ರ ಸರ್ಕಾರವು, ಔದ್ಯೋಗಿಕ ವಲಯದಲ್ಲಿನ ಮತ್ತು ಇಂಧನ ಕ್ಷೇತ್ರದಲ್ಲಿನ ಮನ್ವಂತರದಿಂದ ಉಂಟಾಗಬಹುದಾದ ಸಾಮೂಹಿಕ ನಿರುದ್ಯೋಗದ ಸಮಸ್ಯೆಯನ್ನು ಪರಿಹರಿಸಲು ಯತ್ನಿಸಬೇಕು. ವಾಹನಗಳಲ್ಲಿ ಶಾಖೋತ್ಪತ್ತಿ ಮಾಡುವ ಇಂಜಿನ್ನುಗಳ ಬದಲಿಗೆ ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ ನೀಡುವುದರಿಂದ ಮತ್ತು ಕಲ್ಲಿದ್ದಲು ಘಟಕಗಳು ಮುಚ್ಚಲ್ಪಟ್ಟು, ಕಲ್ಲಿದ್ದಲು ಗಣಿಗಾರಿಕೆ ಸ್ಥಗಿತಗೊಳ್ಳುವುದರಿಂದ ನಿರುದ್ಯೋಗ ಸಮಸ್ಯೆ ಉಲ್ಬಣಿಸುವುದನ್ನು ಸರ್ಕಾರ ಗಮನದಲ್ಲಿಡಬೇಕು.
ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿ ಲಭ್ಯವಿರುವ ಭೂಮಿಯನ್ನು ಸೌರಶಕ್ತಿ ಉತ್ಪಾದನೆಗಾಗಿ ಬಳಸುವ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ರೈಲ್ವೆ ಇಲಾಖೆಗೆ ಅಗತ್ಯವಾದ ಇಂಧನವನ್ನು ಉತ್ಪಾದಿಸಬಹುದು.
ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ತಾಣಗಳನ್ನು ಎಲ್ಲ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಗದಿತ ವೇಳೆಯಲ್ಲಿ ಸ್ಥಾಪಿಸಬೇಕು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಉರುವಲು ಇಂಧನ ಬಳಕೆಯನ್ನು ಕನಿಷ್ಠ ಶೇ 10ರಷ್ಟು ತಗ್ಗಿಸಲು ಕ್ರಮ ಜರುಗಿಸುವ ಮೂಲಕ ಇತರ ದೇಶಗಳಿಗೆ ಮಾದರಿಯಾಗಬೇಕು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಖಾಲಿ ಇರುವ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಬೇಕು.
ಕಡೆಯದಾಗಿ ಮತ್ತು ಬಹುಮುಖ್ಯವಾಗಿ, ರಾಷ್ಟ್ರ ಮಟ್ಟದಲ್ಲಿ ಪ್ರಭಾವ ಬೀರುವಂತಹ ವಿಷಯಗಳನ್ನು ನಿರ್ಧರಿಸುವ ಮುನ್ನ ರಾಜ್ಯ ಸರ್ಕಾರಗಳನ್ನೂ ನಿರ್ಧಾರದ ಪ್ರಕ್ರಿಯೆಯಲ್ಲಿ ಒಳಗೊಳ್ಳಬೇಕು.
ಜಿಎಸ್‌ಟಿ ಸಮಿತಿಯನ್ನು ರಚಿಸಿದಂತೆಯೇ, ರಾಜ್ಯ ಸಚಿವರುಗಳನ್ನೊಳಗೊಂಡ ಒಂದು ರಾಷ್ಟ್ರೀಯ ಸಮಿತಿಯನ್ನು ಕೃಷಿ, ಕೈಗಾರಿಕೆ, ರಫ್ತು ಉದ್ದಿಮೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ರಚಿಸಬೇಕು. (ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ರಚಿಸಲಾಗಿದ್ದ ಮೊದಲ ರಾಜ್ಯ ಹಣಕಾಸು ಸಚಿವರುಗಳ ಸಮಿತಿಯನ್ನು ಆಯೋಜಿಸುವಾಗ ಲೇಖಕರು ಕಂದಾಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು). ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವುದರಿಂದ ರಾಜ್ಯ ಸರ್ಕಾರಗಳು ಕೇಂದ್ರದೊಡನೆ ಕಲಹದಲ್ಲಿ ತೊಡಗದೆ, ನಿರ್ಣಾಯಕವಾದ ರಾಷ್ಟ್ರೀಯ ವಿಚಾರಗಳಲ್ಲಿ ಸಹಮತ ಮೂಡಿಸಲು ಇದು ನೆರವಾಗಬಹುದು.
“ ಇಂದು ಮಾಡಬೇಕಾದ ಕೆಲಸವನ್ನು ನಾಳೆಗೆಂದು ಉಳಿಸಬೇಡ ” ಎಂಬ ಗಾದೆ ಮಾತಿನಂತೆ ಸಮಯ ಯಾರನ್ನೂ ಕಾಯುವುದಿಲ್ಲ. ಹಾಗಾಗಿ ಮೋದಿ ಸರ್ಕಾರವು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗುವ ಮುನ್ನವೇ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಿದೆ.
(ಲೇಖಕರಾದ ಎಂ ಆರ್ ಶಿವರಾಮನ್ ಐಎಎಸ್ ನಿವೃತ್ತ ಕಂದಾಯ ಕಾರ್ಯದರ್ಶಿ ಭಾರತ ಸರ್ಕಾರ) ಕೃಪೆ ಇಂಡಿಯನ್ ಎಕ್ಸ್‌ಪ್ರೆಸ್.









