• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ?

ನಾ ದಿವಾಕರ by ನಾ ದಿವಾಕರ
April 28, 2022
in ಅಭಿಮತ
0
ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ?
Share on WhatsAppShare on FacebookShare on Telegram

ADVERTISEMENT

ಕಳೆದ ವಾರ ಸಾಮಾಜಿಕ ತಾಣವೊಂದರಲ್ಲಿ, ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ಧ್ವಂಸ ಮಾಡಲಾಗಿದ್ದ ಕಟ್ಟಡವೊಂದರ ಮುಂದೆ ಅಸಹಾಯಕನಾಗಿ ನಿಂತಿದ್ದ ವಾಸಿಮ್‌ ಶೇಖ್‌ ಎಂಬ ವ್ಯಕ್ತಿಯ ಫೋಟೋ ಬಿತ್ತರಿಸಲಾಗಿತ್ತು. ವಾಸಿಮ್‌ನ ಸಣ್ಣ ಕಿರಾಣಿ ಅಂಗಡಿಯನ್ನು ಏಪ್ರಿಲ್‌ 11ರಂದು ಸರ್ಕಾರ ನಡೆಸಿದ ಧ್ವಂಸ ಕಾರ್ಯಾಚರಣೆಯಲ್ಲಿ ನೆಲಸಮ ಮಾಡಲಾಗಿತ್ತು. ಇದಕ್ಕೂ ಮುನ್ನ ನಡೆದ ಕೋಮು ಗಲಭೆಗಳಲ್ಲಿ ಕಲ್ಲು ತೂರಾಟ ನಡೆಸಿದ ಆರೋಪವನ್ನು ವಾಸಿಮ್‌ ಶೇಖ್ ಮೇಲೆ ಹೊರಿಸಲಾಗಿತ್ತು. ಆದರೆ ವಾಸಿಮ್‌ ಎರಡೂ ಕೈಗಳನ್ನು ಕಳೆದುಕೊಂಡಿರುವ ವಿಕಲಾಂಗ. 2005ರ ಅಪಘಾತವೊಂದರಲ್ಲಿ ವಾಸಿಮ್‌ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದ. ಆದರೆ ಇದು ಗಣನೆಗೆ ಬರುವುದಿಲ್ಲ ಏಕೆಂದರೆ, ಮುಸ್ಲಿಂ ಸಮುದಾಯಕ್ಕೆ ಸೇರಿದ ವಾಸಿಮ್‌ ವಾಸಿಸುತ್ತಿದ್ದುದು ಕೋಮು ಗಲಭೆ ನಡೆದ ಪ್ರದೇಶದಲ್ಲಿ. ಆಡಳಿತ ವ್ಯವಸ್ಥೆಗೆ ಅವನ ಜೀವನೋಪಾಯದ ಏಕೈಕ ಮಾರ್ಗವನ್ನು ಕಸಿದುಕೊಳ್ಳಲು ಈ ಕಾರಣವೊಂದೇ ಸಾಕಾಗಿತ್ತು. ಇದು ಭಾರತ ನಡೆಯುತ್ತಿರುವ ಹಾದಿ. ಅಥವಾ ಈಗಾಗಲೇ ತಲುಪಿರುವ ತಾಣ ಎನ್ನಬಹುದು. ಮಾನವೀಯತೆಯ ಸ್ಪರ್ಶವೇ ಇಲ್ಲದ ಹಿಂಸಾತ್ಮಕ ಸಮಾಜದಲ್ಲಿ, ಕಾನೂನು ಕಟ್ಟಳೆಗಳನ್ನೂ ಮೀರಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ.

ನವ ಭಾರತದಲ್ಲಿ ಇಂದು ಕಲ್ಪಿತ ಅನ್ಯರ ವಿರುದ್ಧ ದ್ವೇಷ ಕಾರುವ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಇಲ್ಲಿ ಸರ್ಕಾರಗಳು ಕಾನೂನು ನಿರ್ವಹಣೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಉಲ್ಲಂಘನೆ ಮಾಡುತ್ತವೆ. ದೇಶದೆಲ್ಲೆಡೆ ಕೆಲವು ಗುಂಪುಗಳು ಮುಸ್ಲಿಮರಲ್ಲಿ ಭೀತಿ ಹುಟ್ಟಿಸುವುದರಲ್ಲಿ ತೊಡಗಿವೆ.ಯಾವುದೇ ಗಲಭೆ ಸಂಭವಿಸಿದ ಕೂಡಲೇ ಆಡಳಿತ ವ್ಯವಸ್ಥೆಯು ಮುಸ್ಲಿಮರ ಮನೆಗಳನ್ನು, ಅಂಗಡಿ ಮುಗ್ಗಟ್ಟುಗಳನ್ನು, ವ್ಯಾಪಾರದ ನೆಲೆಗಳನ್ನು ನಾಶಪಡಿಸುತ್ತದೆ. ಒಂದು ರಾಜಕೀಯ ಪಕ್ಷದ ನಾಯಕತ್ವ ಮೌನ ವಹಿಸುತ್ತದೆ. ಏಕೆಂದರೆ ಈ ಹಿಂಸಾತ್ಮಕ ಬೆಳವಣಿಗೆಗಳು ದ್ವೇಷ ರಾಜಕಾರಣವನ್ನು ಕ್ರೋಢೀಕರಿಸುವ ಮೂಲಕ ಚುನಾವಣೆಯಲ್ಲಿ ಲಾಭ ಗಳಿಸಲು ಸಾಧ್ಯವಾಗುತ್ತದೆ. ಇಲ್ಲಿ ಪೊಲೀಸರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಯಾವುದೇ ಸಲಹೆ ಪಡೆಯುವುದಿಲ್ಲ ಬದಲಾಗಿ ರಾಜಕೀಯ ವಾತಾವರಣಕ್ಕನುಗುಣವಾಗಿ ಪಡೆಯುತ್ತಾರೆ. ಈ ವ್ಯವಸ್ಥೆಯಲ್ಲಿ ಹಿಂಸೆಗೊಳಗಾದ ಸಂತ್ರಸ್ತರನ್ನೇ ಶಂಕಿತರನ್ನಾಗಿ ಪರಿಗಣಿಸಿ ಜಾಮೀನು ರಹಿತವಾಗಿ ಸೆರೆಮನೆಗೆ ತಳ್ಳಲಾಗುತ್ತದೆ. ನ್ಯಾಯಾಲಯಗಳು ವಾಸ್ತವಕ್ಕೆ ವಿಮುಖವಾಗಿರುತ್ತವೆ. ಅಥವಾ ಹೆಚ್ಚೆಂದರೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತವೆ. ನಾವು ಸಾಮಾನ್ಯವಾಗಿ ಸಂಭಾವಿತರೆಂದು ಭಾವಿಸುವ ಬಹುತೇಕ ಎಲ್ಲ ವರ್ಗಗಳ ಜನರಲ್ಲೂ ಅನೇಕರು ಈ ಬೆಳವಣಿಗೆಗಳ ಬಗ್ಗೆ ಸಂತೃಪ್ತರಾಗಿರುತ್ತಾರೆ. ತಮ್ಮ ಸಹಜೀವಿಗಳ ಮೇಲೆ ನಡೆಯುವ ಹಲ್ಲೆಗಳನ್ನು ಸಂಭ್ರಮಿಸುತ್ತಾರೆ. ಸ್ವಾತಂತ್ರ್ಯೋತ್ಸವದ 75ನೆಯ ವರ್ಷದಲ್ಲಿ ಭಾರತ ಇಲ್ಲಿಗೆ ಬಂದು ನಿಂತಿದೆ.

ಬುಲ್ಡೋಜರ್‌ ಪ್ರೇರಿತ ಹಿಂಸೆಯು ತರ್ಕಸಮ್ಮತಿಯನ್ನು ಪಡೆದು, ಅತಿಕ್ರಮಣ ಮತ್ತು ಒತ್ತುವರಿಯನ್ನು ಕೊನೆಗೊಳಿಸುವ ನೆಪದಲ್ಲಿ ಧ್ವಂಸ ಕಾರ್ಯಾಚರಣೆಯು ಕಾಯ್ದೆಯಾಗಿಯೇ ಜಾರಿಯಾಗುತ್ತಿದೆ. ನಕಲಿ ಸುದ್ದಿಗಳು ಮತ್ತು ವಾಟ್ಸಾಪ್‌ ವಿಶ್ವವಿದ್ಯಾಲಯದ ಪಂಡಿತರ ದೃಷ್ಟಿಯಲ್ಲಿ ಇದು ಕಾನೂನು ತನ್ನ ಕರ್ತವ್ಯವನ್ನು ನಿರ್ವಹಿಸುವಂತೆಯೇ ತೋರುತ್ತದೆ. ಈ ರೀತಿಯ ಆಡಳಿತವೇ ಉತ್ತರಪ್ರದೇಶ ಮುಖ್ಯಮಂತ್ರಿಯನ್ನು ಜನಪ್ರಿಯರನ್ನಾಗಿ ಮಾಡಿದೆ. ಈಗ ಇತರ ರಾಜ್ಯಗಳಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಇನ್ನು 18 ತಿಂಗಳಲ್ಲಿ ಚುನಾವಣೆಗಳನ್ನು ಎದುರಿಸಲಿರುವ ಗುಜರಾತ್‌ ಮತ್ತು ಮಧ್ಯಪ್ರದೇಶಗಳಲ್ಲಿ ಈ ನೀತಿಯನ್ನು ಈಗಾಗಲೇ ಅನುಕರಿಸಲಾಗುತ್ತಿದೆ. ಈ ಹೊಸ ಅಸ್ತ್ರವು ರಾಜಧಾನಿ ದೆಹಲಿಯನ್ನೂ ತಲುಪಿದ್ದು, ದೆಹಲಿ ಆಡಳಿತವು ಸುಪ್ರೀಂಕೋರ್ಟ್‌ ಆದೇಶವನ್ನೂ ಲೆಕ್ಕಿಸದೆ ಕೆಲವು ಗಂಟೆಗಳ ಕಾಲ ತನ್ನ ಧ್ವಂಸ ಕಾರ್ಯಾಚರಣೆಯನ್ನು ನಡೆಸಿದೆ.

ದೇಶಾದ್ಯಂತ ಕೋಮು ಗಲಭೆಗಳಿಗೆ ಪರೋಕ್ಷ ಪ್ರೋತ್ಸಾಹ ನೀಡುವ ಸರ್ಕಾರಗಳ ಒಂದು ಹೊಸ ಆಯಾಮವನ್ನು ಬುಲ್ಡೋಜರ್‌ ಹಿಂಸೆಯಲ್ಲಿ ಕಾಣುತ್ತಿದ್ದೇವೆ. ಇದು ದಿನೇ ದಿನೇ ಹದಗೆಡುತ್ತಿದ್ದು ಇಂದು ಆಘಾತಕಾರಿಯಾಗಿ, ಅಚ್ಚರಿದಾಯಕವಾಗಿ ಕಾಣುವುದು ಮರುದಿನವೇ ವಾಸ್ತವವಾಗಿರುತ್ತದೆ. ಗುಂಪು ಥಳಿತ ಮತ್ತು ಆರ್ಥಿಕ ಬಹಿಷ್ಕಾರಗಳು ಈಗ ನೆನೆಗುದಿಗೆ ಬಿದ್ದಿವೆ. 2015ರಲ್ಲಿ ದಾದ್ರಿಯಲ್ಲಿ ಗುಂಪು ಥಳಿತಕ್ಕೆ ಬಲಿಯಾದ ಮೊಹಮ್ಮದ್ ಅಕ್ಲಾಖ್‌ನನ್ನು ಯಾರು ನೆನಪಿಸಿಕೊಳ್ಳುತ್ತಾರೆ ? ಅಥವಾ 2017ರ ಈದ್‌ ಸಂದರ್ಭದಲ್ಲಿ ತನ್ನ ಹಳ್ಳಿಗೆ ತೆರಳುತ್ತಿದ್ದ 17 ವರ್ಷದ ಜುನೈದ್‌ ಕೊಲೆಯಾದುದನ್ನು ಯಾರು ಸ್ಮರಿಸುತ್ತಾರೆ ? ಏಳು ತಿಂಗಳ ಹಿಂದೆ ಅಸ್ಸಾಂನಲ್ಲಿ ಅತಿಕ್ರಮಿತ ಪ್ರದೇಶವನ್ನು ತೆರವು ಮಾಡುವ ಕಾರ್ಯಾಚರಣೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಮೊಯಿನುಲ್‌ ಹಕ್‌ನನ್ನಾಗಲಿ, ಆತನ ಶವದ ಮೇಲ್ ಸಂಭ್ರಮಿಸಿ ನರ್ತನ ಮಾಡಿದ ಪತ್ರಿಕಾ ಛಾಯಾಗ್ರಾಹಕನನ್ನಾಗಲೀ ಯಾರು ನೆನಪಿಸಿಕೊಳ್ಳುತ್ತಾರೆ ?

ಈಗ ಮುಸ್ಲಿಮರ ಹತ್ಯೆಗೆ ಮುಕ್ತವಾಗಿ ಕರೆ ಕೊಡುವುದು ಸಾಮಾನ್ಯವಾಗಿಹೋಗಿದೆ. ಕಳೆದ ವರ್ಷ ಇಂತಹ ಒಂದು ಘಟನೆ ಮೊದಲ ಬಾರಿಗೆ ನಡೆದಾಗ ಪೊಲೀಸರು ಅರೆಮನಸ್ಸಿನಿಂದಲೇ ಕಾರ್ಯಪ್ರವೃತ್ತರಾಗಿದ್ದರು. ಈಗ ದೆಹಲಿ ಪೊಲೀಸರು, ಸಮೂಹ ಕೊಲೆಗೆ ಮುಕ್ತ ಕರೆ ನೀಡಿರುವುದು ಕೇವಲ ಒಂದು ಧರ್ಮದ ರಕ್ಷಣೆಗಾಗಿ ಎಂದು ಸಮಜಾಯಿಷಿ ನೀಡುತ್ತಿದ್ದಾರೆ. ನಾವು ಸಾಮೂಹಿಕ ಹತ್ಯೆಯ ಭೀತಿಗೊಳಗಾಗಬೇಕೇ ? ಅನೇಕ ವಿಶ್ಲೇಷಕರು ಹೇಳಿರುವಂತೆ, ದಿನಕ್ಕೊಂದು ಗಲಭೆಯನ್ನು ಸೃಷ್ಟಿಸುತ್ತಾ ಹೋಗುವುದೇ ಆದಲ್ಲಿ ಒಂದೇ ಘಟನೆಯಲ್ಲಿ ಸಾವಿರಾರು ಜೀವ ಹರಣ ಮಾಡುವ ಅವಶ್ಯಕತೆಯಾದರೂ ಏನಿದೆ ? ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ, ಈಗ ಕರ್ನಾಟಕದಲ್ಲೂ ಸಹ ಕಿರುಕುಳ ನೀಡುವ, ಭೀತಿಗೊಳಪಡಿಸುವ ಮತ್ತು ಹತ್ಯೆ ಮಾಡುವ ಕೃತ್ಯಗಳನ್ನು ಹೊರಗುತ್ತಿಗೆ ನೀಡಲಾಗಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರದ ಈ ದುಷ್ಕರ್ಮಿಗಳು ಸರ್ವ ಸ್ವತಂತ್ರರಾಗಿ ಕಾರ್ಯ ನಿರ್ವಹಿಸುತ್ತಾರೆ. ಇವರಿಗೆ ಯಾವುದೇ ರಾಜಕೀಯ ಪಕ್ಷದ ಮಾರ್ಗದರ್ಶನವೂ ಅಗತ್ಯವಿರುವುದಿಲ್ಲ. ಆದರೂ ಮತಾಂಧತೆಯ ವಿಷಬೀಜದಿಂದ ಆವೃತರಾಗಿರುವ ಇವರು ತಮ್ಮ ಕಾರ್ಯನಿರ್ವಹಿಸುತ್ತಿರುತ್ತಾರೆ. ( https://tinyurl.com/2p8d6cn9).

ಯಾವುದೇ ಸಮಾಜದಲ್ಲಿ ತೀವ್ರವಾಗುತ್ತಿರುವ ಅಸಹಿಷ್ಣುತೆ ಅಥವಾ ಹಿಂಸಾತ್ಮಕ ಧೋರಣೆಯ ಬಗ್ಗೆ ಅಲ್ಲಿನ ಬುದ್ಧಿಜೀವಿಗಳು ಮೊದಲು ಜಾಗೃತರಾಗುತ್ತಾರೆ. ಮುಂದೆ ಒದಗಬಹುದಾದ ಅನಾಹುತಗಳ ಬಗ್ಗೆ ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಾರೆ. ಇದು ಎಲ್ಲ ಸಮಾಜಗಳಲ್ಲೂ, ಎಲ್ಲ ಸಮಯದಲ್ಲೂ ಕಾಣಬಹುದಾದಂತಹ ಒಂದು ವಿದ್ಯಮಾನ. ಭಾರತದಲ್ಲಿ ಸಹ ಇದನ್ನು ಗುರುತಿಸಬಹುದು. 2016ರ ಅಕ್ಟೋಬರ್ 6ರಂದು ಖ್ಯಾತ ಲೇಖಕಿ ನಯನತಾರಾ ಸೆಹಗಲ್ ( ಜವಹರಲಾಲ್ ನೆಹರೂ ಸೋದರಿ ವಿಜಯಲಕ್ಷ್ಮಿ ಪಂಡಿತ್ ಅವರ ಪುತ್ರಿ ) ತಮಗೆ ನೀಡಲಾದ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು. ವಿಚಾರವಾದಿಗಳಾದ ಗೋವಿಂದ್ ಪನ್ಸಾರೆ, ನರೇಂದ್ರ ಧಬೋಲ್ಕರ್, ಎಂ ಎಂ ಕಲಬುರ್ಗಿ ಅವರ ಹತ್ಯೆ ಮತ್ತು ದಾದ್ರಿ ಗುಂಪು ಥಳಿತದ ಹಿನ್ನೆಲೆಯಲ್ಲಿ “ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ, ಪ್ರತಿರೋಧದ ಹಕ್ಕನ್ನು ಪ್ರತಿಪಾದಿಸಿ ” ಈ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಇದು ಬುದ್ಧಿಜೀವಿ ವರ್ಗಗಳಲ್ಲಿ ಸಂಚಲನ ಉಂಟುಮಾಡಿತ್ತು. ಹಾಗೆಯೇ ಈ ಬುದ್ಧಿಜೀವಿ ವರ್ಗಗಳನ್ನು ಲೇವಡಿ ಮಾಡುವ, ಅಪಹಾಸ್ಯ ಮಾಡುವ ಮಧ್ಯಮ ವರ್ಗಗಳ ಒಂದು ಸಮೂಹವೂ ಸಹ ಇತ್ತು .ಇಂದು ಈ ಅಸಹಿಷ್ಣುತೆಯ ವಿಭಿನ್ನ ಆಯಾಮಗಳನ್ನು ನಾವು ಕಾಣುತ್ತಿದ್ದೇವೆ. – ಅನು

ಈ ಕಾವಲುಪಡೆಗಳ ಕಾರ್ಯಾಚರಣೆಗಳು ಅನ್ಯಮತ ದ್ವೇಷವನ್ನು ಹೆಚ್ಚಿಸುವುದೇ ಅಲ್ಲದೆ ರಾಜಕೀಯವಾಗಿ ಚುನಾವಣೆಗಳಲ್ಲಿ ಲಾಭದಾಯಕವಾಗಿ ಪರಿಣಮಿಸುತ್ತದೆ. ಚುನಾವಣೆಗಳ ಫಲಿತಾಂಶಗಳಲ್ಲಿ ನಿರ್ಣಾಯಕವಾಗುವುದು ಕಲ್ಯಾಣ ಯೋಜನೆಗಳ ಲಾಭಾರ್ಥಿ ಅಥವಾ ಫಲಾನುಭವಿಗಳಲ್ಲ. ಕೋಮು ಆಧಾರಿತ ಮತ ಧೃವೀಕರಣವೇ ಆಗಿರುತ್ತದೆ. ಇದು ಸ್ಪಷ್ಟ. ಚುನಾವಣೆಗಳಲ್ಲಿ ಉಪಯುಕ್ತವಾಗಲೆಂದೇ ಸೃಷ್ಟಿಸಲಾಗಿರುವ ಈ ರಾಜಕೀಯ ವಾತಾವರಣವನ್ನು ಗಮನಿಸಿಯೂ, ಸಮೂಹ ಹಿಂಸೆಯ ವಿರುದ್ಧ ರಾಜಕೀಯ ಪಕ್ಷಗಳು ದನಿ ಎತ್ತಬೇಕು ಎಂದು ಹೇಗೆ ಅಪೇಕ್ಷಿಸಲು ಸಾಧ್ಯ ? ಇಂದು ಗುಂಪುಗಳು ಒಂದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಹಲ್ಲೆ ನಡೆಸಲು ಮುಕ್ತ ಅವಕಾಶ ಹೊಂದಿದ್ದರೆ ಮುಂಬರುವ ದಿನಗಳಲ್ಲಿ ಇತರ ಸಮುದಾಯಗಳೂ ಹಲ್ಲೆಗೊಳಗಾಗುತ್ತವೆ. ಮುಂದೆ ಯಾವ ಮತೀಯ ಅಲ್ಪಸಂಖ್ಯಾತರು ಗುರಿಯಾಗುತ್ತಾರೆ ? ಯಾವ ಕೆಳಜಾತಿಗಳು ಗುರಿಯಾಗುತ್ತವೆ ? ಸರ್ಕಾರಗಳ ಕಣ್ಣೆದುರಿನಲ್ಲೇ ನಡೆಯುತ್ತಿರುವ ಮತೀಯ ಕಾವಲುಪಡೆಗಳ ಈ ಹಿಂಸೆಯನ್ನು ನಿಯಂತ್ರಿಸಲೂ ಸಾಧ್ಯವಾಗುವುದಿಲ್ಲ. ಒಂದು ಹಂತದಲ್ಲಿ ಈ ಪಡೆಗಳು ತಮ್ಮ ನಿರ್ವಾಹಕರ ನಿಯಂತ್ರಣವನ್ನೂ ಮೀರಿ ಮುನ್ನಡೆದಿರುತ್ತವೆ. ಆಗ ಭಾರತ ಈ ಭೀಕರ ಸುಂಟರಗಾಳಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ನಾವು ಎದುರು ನೋಡುತ್ತಿರುವ ಮಹಾವಿನಾಶದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬಹುದು ಎಂದು ನನ್ನಂತಹ ಕೆಲವು ಲೇಖಕರು ಭಾವಿಸಿರಬಹುದು. ಆದರೆ ಅದು ಸಾಧ್ಯವಾಗದಿರಬಹುದು.. ಸೈದ್ಧಾಂತಿಕ ದ್ವೇಷ, ಬಲಾಢ್ಯ ರಾಷ್ಟ್ರೀಯತೆ ಮತ್ತು ಅಮಾನುಷತೆಯಿಂದ ಕೂಡಿದ ಈ ಬೃಹತ್‌ ಅಲೆಯ ಮುಂದೆ ನಾವು ನಿರ್ವೀರ್ಯರಾಗುತ್ತೇವೆ. ಚಾರಿತ್ರಿಕ ಪ್ರಮಾದಗಳನ್ನು ಸರಿಪಡಿಸುವ ನೆಪದಲ್ಲಿ ಎಲ್ಲವೂ ನಡೆಯುತ್ತದೆ. ಶತಮಾನಗಳ ಕಾಲ ದಲಿತರ ವಿರುದ್ಧ ನಡೆದ ಹಿಂಸೆಯ ಮತ್ತೊಂದು ಸ್ವರೂಪವನ್ನು ಈಗ ಮುಸಲ್ಮಾನರ ವಿರುದ್ಧ ನಡೆಯುತ್ತಿರುವ ದ್ವೇಷ ಕಾರ್ಯಾಚರಣೆಯಲ್ಲಿ ಕಾಣುತ್ತಿದ್ದೇವೆ. ಈ ಬೆಳವಣಿಗೆಗಳ ನಡುವೆಯೇ ನಾವು ಸಮ್ಮತಿಸಲಾರದಂತಹ ಭಾರತದ ಒಂದು ಮುಖವನ್ನು ನೋಡಲು ಅಣಿಯಾಗಬೇಕಿದೆ. ಇತಿಹಾಸಕಾರ ಉಪಿಂದರ್‌ ಸಿಂಗ್‌ ಅವರ ಮಾತುಗಳನ್ನೇ ಕೊಂಚ ಬದಲಿಸಿ ಹೇಳುವುದಾದರೆ, ಮಹಾವೀರ, ಬುದ್ಧ, ಅಶೋಕ ಮತ್ತು ಗಾಂಧಿ ಮುಂತಾದವರ ಶಾಂತಿಯ ಸಂದೇಶಗಳು, ಸಾವಿರಾರು ವರ್ಷಗಳ ಕಾಲ ಇದ್ದ ಹಿಂಸಾತ್ಮಕ ಸಮಾಜದಲ್ಲಿ ಕೇವಲ ಅಪವಾದಗಳಷ್ಟೇ. ಈಗ 21ನೆಯ ಶತಮಾನದಲ್ಲಿ ನಾವು ಭಾರತದ ಹಿಂಸಾತ್ಮಕ ಸ್ವರೂಪವನ್ನು, ಶ್ರೇಷ್ಠ ಸಂವಿಧಾನದ ಅಡಿಯಲ್ಲಿ ಆಳಲ್ಪಟ್ಟಿರುವ ಭಾರತದಲ್ಲಿ, ಪೂರ್ಣ ರೂಪದಲ್ಲಿ ಕಾಣುತ್ತಿದ್ದೇವೆ.

ಆದಾಗ್ಯೂ ಕೆಲವು ಅಪವಾದಗಳಿರುವುದು ಸಮಾಧಾನಕರವಾಗಿ ಕಾಣುತ್ತದೆ. ಈ ಕೂಪದಿಂದ ಪಾರಾಗಲು ನಾವು ಇಂತಹ ಕೆಲವು ಮಾನವೀಯತೆಯ ತೊರೆಗಳನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕಿದೆ. ಉದಾಹರಣೆಗೆ ಮುಸ್ಲಿಮರನ್ನು ಹುಡುಕಿಕೊಂಡು ಬಂದ ಒಂದು ಗುಂಪನ್ನು ದಿಟ್ಟತನದಿಂದ ಎದುರಿಸಿದ್ದೇ ಅಲ್ಲದೆ 12 ಮುಸಲ್ಮಾನರನ್ನು ರಕಿಸಿದ ರಾಜಸ್ಥಾನದ ಹಿಂದೂ ಮಹಿಳೆ ಕರೌಲಿಯ ಮಧುಲಿಕಾ ರಜಪೂತ್‌ ನಮಗೆ ಕಾಣಬೇಕಿದೆ.

(https://tinyurl.com/yu2b5sb8). ಅಥವಾ ದೆಹಲಿಯ ಜಹಂಗೀರ್‌ಪುರಿಯಲ್ಲಿ ಹಿಂದೂ ಅಂಗಡಿಯ ಮಾಲಿಕನೊಬ್ಬನ “ ನಾನು ಒಬ್ಬ ಹಿಂದೂ, ಆತ ಮುಸ್ಲಿಂ,,,, ನಾವು ಸ್ನೇಹಿತರು, ಸಂಕಷ್ಟದ ಸಮಯದಲ್ಲಿ ನಾವು ಪರಸ್ಪರ ನೆರವಾಗುತ್ತೇವೆ,,,,ಈ ಗುಂಪುಗಳು ನಮ್ಮ ಬದುಕನ್ನು ಹಾಳುಮಾಡಲು ಹೊರಟಿವೆ. ನಾನು ಏಕಾಂಗಿಯಾದರೂ ಸರಿ, ಮಸೀದಿಯನ್ನು ಕೆಡವಲು ಬುಲ್ಡೋಜರ್‌ ಬಂದರೆ ಅದರ ಎದುರು ನಿಂತು ಮಸೀದಿಯನ್ನು ರಕ್ಷಿಸುತ್ತೇನೆ.” (https://tinyurl.com/262fum2r) ಎಂಬ ಮಾತುಗಳಲ್ಲಿ ಭರವಸೆ ಇಡಬೇಕಿದೆ.

ಇಂತಹ ಹಿಂದೂ ಸೋದರ ಸೋದರಿಯರ ಮೇಲೆ ಭರವಸೆ ಇಟ್ಟು ನಾವು ಮುನ್ನಡೆಯಬೇಕಿದೆ.

(ಲೇಖಕ ಸಿ ರಾಮಮನೋಹರ್‌ ರೆಡ್ಡಿ ದ ಇಂಡಿಯಾ ಫೋರಂನ ಸಂಪಾದಕರು)

ಅನುವಾದ : ನಾ ದಿವಾಕರ

Tags: BJPCongress PartyCovid 19ನರೇಂದ್ರ ಮೋದಿಬಿಜೆಪಿ
Previous Post

ಹಿಂದಿ ಎಂದಿಗೂ ನಮ್ಮ ರಾಷ್ಟ್ರ ಭಾಷೆಯಾಗುವುದಿಲ್ಲ : ನಾನು ಹೆಮ್ಮೆಯ ಕನ್ನಡಿಗ : ಅಜಯ್ ದೇವಗನ್ಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ

Next Post

ಬೆಸ್ಕಾಂ ನಿರ್ಲಕ್ಷ್ಯಕ್ಕೆ ನಗರದಲ್ಲಿ ಸಾಲು ಸಾಲು ಸಾವು : ಈಗ ಪರಿವರ್ತಕಗಳ ಸರ್ವೇಗಿಳಿದ ಮಂಡಳಿ!

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಬೆಸ್ಕಾಂ ನಿರ್ಲಕ್ಷ್ಯಕ್ಕೆ ನಗರದಲ್ಲಿ ಸಾಲು ಸಾಲು ಸಾವು : ಈಗ ಪರಿವರ್ತಕಗಳ ಸರ್ವೇಗಿಳಿದ ಮಂಡಳಿ!

ಬೆಸ್ಕಾಂ ನಿರ್ಲಕ್ಷ್ಯಕ್ಕೆ ನಗರದಲ್ಲಿ ಸಾಲು ಸಾಲು ಸಾವು : ಈಗ ಪರಿವರ್ತಕಗಳ ಸರ್ವೇಗಿಳಿದ ಮಂಡಳಿ!

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada