CBSE ಶಾಲೆಗಳ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳ ಪಠ್ಯದಿಂದ ಇಸ್ಲಾಂನ ಉದಯ ಅಥವಾ ಮೊಘಲ್ ಯುಗದ ಬಗೆಗಿನ ಪಾಠಗಳನ್ನು ಈ ವರ್ಷ ಕೈಬಿಟ್ಟರೆ, ಹನ್ನೊಂದನೇ ತರಗತಿಯ ಪಠ್ಯದಿಂದ ‘ಬಡತನ ಮತ್ತು ಮೂಲಸೌಕರ್ಯ’ ಪಠ್ಯವನ್ನೂ ಕೋಕ್ ನೀಡಲಾಗಿದೆ. ಕೋವಿಡ್ ಕಾಲದಲ್ಲಾದ ಶೈಕ್ಷಣಿಕ ಹಿನ್ನಡೆಗೆ ಅನುಗುಣವಾಗಿ ವಿದ್ಯಾರ್ಥಿಗಳ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ವಿದ್ಯಾರ್ಥಿಗಳ ಪಠ್ಯ ಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ನಿರ್ಧರಿಸುವ ಸರ್ಕಾರ ಸಂಸ್ಥೆಯಾದ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಶಿಫಾರಸುಗಳನ್ನು ಅನುಸರಿಸಿ ಪಠ್ಯ ಕ್ರಮ ರಚಿಸಲಾಗಿದೆ ಎಂದು ಸಿಬಿಎಸ್‌ಇ ಪ್ರಕಟಿಸಿದೆ.
ಆದರೆ ಸಿಬಿಎಸ್‌ಇಯ ಈ ಕ್ರಮಕ್ಕೆ ಶಿಕ್ಷಣ ತಜ್ಞರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು ಪ್ರಮುಖ ಐತಿಹಾಸಿಕ ಬೆಳವಣಿಗೆಗಳ ಜ್ಞಾನದಿಂದ ವಿದ್ಯಾರ್ಥಿಗಳು ವಂಚಿತರಾಗಲಿದ್ದಾರೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹನ್ನೊಂದನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ‘ದಿ ಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್ಸ್’ ಎನ್ನುವ ಅಧ್ಯಾಯವನ್ನು ತೆಗೆದುಹಾಕಲಾಗಿದ್ದು ಇದು ಇಸ್ಲಾಮ್‌ನ ಉದಯ ಮತ್ತು ಈಜಿಪ್ಟ್‌ನಿಂದ ಅಫ್ಘಾನಿಸ್ತಾನದವರೆಗೆ ಹಬ್ಬಿಕೊಂಡಿದ್ದ ಅದರ ವಿಸ್ತಾರದ ಬಗೆಗಿನ ಪಠ್ಯವಾಗಿತ್ತು. ಈ ಪ್ರದೇಶಗಳು 600 AD ನಿಂದ 1200 AD ವರೆಗಿದ್ದ ಇಸ್ಲಾಮಿಕ್ ನಾಗರಿಕತೆಯ ಪ್ರಮುಖ ಸ್ಥಳಗಳಾಗಿದ್ದವು.
ತೆಗೆದು ಹಾಕಲಾದ ಅಧ್ಯಾಯದ ಪೀಠಿಕೆಯು “ಇಸ್ಲಾಮಿಕ್ ಎನ್ನುವ ಪದವನ್ನು ಇಲ್ಲಿ ಅದರ ಶುದ್ಧ ಧಾರ್ಮಿಕ ಅರ್ಥದಲ್ಲಿ ಮಾತ್ರ ಬಳಸಲಾಗಿಲ್ಲ ಬದಲಾಗಿ ಒಟ್ಟಾರೆ ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಐತಿಹಾಸಿಕವಾಗಿ ಹೇಗೆ ಸಂಬಂಧಿಸಿದೆ ಎನ್ನುವ ಅರ್ಥದಲ್ಲಿ ಬಳಸಲಾಗಿದೆ. ಈ ಸಮಾಜದಲ್ಲಿ, ನಡೆಯುವ ಎಲ್ಲವೂ ನೇರವಾಗಿ ಧರ್ಮದಿಂದ ಹುಟ್ಟಿಕೊಂಡಿಲ್ಲ” ಎಂದಿತ್ತು. ಈಗ ಇಡೀ ಅಧ್ಯಾಯವನ್ನೇ ತೆಗೆದುಹಾಕಲಾಗಿದ್ದು ಈ ಬಗ್ಗೆ ಮಾತನಾಡಿರುವ ಶಿಕ್ಷಕರೊಬ್ಬರು ಇಸ್ಲಾಂ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳು ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಅರೇಬಿಯಾದಲ್ಲಿ ಇಸ್ಲಾಮಿನ ಉದಯ, ಇಸ್ಲಾಮಿಕ್ ಕ್ಯಾಲೆಂಡರ್, ಖಲೀಫಾತ್, ಖಲೀಫಾತ್‌ನ ಒಡೆಯುವಿಕೆ ಮತ್ತು ಸುಲ್ತಾನರ ಉದಯ, ಖುರಾನ್ ಮತ್ತು ಆ ಕಾಲದ ಅನೇಕ ಪ್ರಮುಖ ವಿದ್ಯಮಾನಗಳ ಬಗ್ಗೆ ಬೇರೆ ಯಾವುದೇ ತರಗತಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ಈ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು, ಈ ಅಧ್ಯಾಯವನ್ನು ಅಳಿಸುವುದರಿಂದ ವಿದ್ಯಾರ್ಥಿಗಳು ಇಸ್ಲಾಮಿನ ಕಲ್ಪನೆಯಿಂದ ವಂಚಿತರಾಗುತ್ತಾರೆ, ”ಎಂದು ಹೆಸರು ಹೇಳಲು ಇಷ್ಟಪಡದ ಶಿಕ್ಷಕರು ಹೇಳಿರುವುದಾಗಿ ‘ಟೆಲಿಗ್ರಾಫ್ ಇಂಡಿಯಾ’ ವರದಿ ಮಾಡಿದೆ.
ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳು ಈ ವರ್ಷ ಅಕ್ಬರ್ನಾಮ ಮತ್ತು ಪಾದ್ಶಹನಾಮದ ವಿವರಗಳನ್ನು ಒದಗಿಸುವ “ಕಿಂಗ್ಸ್ ಅಂಡ್ ಕ್ರಾನಿಕಲ್ಸ್: ದಿ ಮೊಘಲ್ ಕೋರ್ಟ್ಸ್” ಎಂಬ ಅಧ್ಯಾಯವನ್ನು ಅಧ್ಯಯನ ಮಾಡುತ್ತಿಲ್ಲ. ಯುದ್ಧಗಳು, ಮುತ್ತಿಗೆಗಳು, ದಂಡಯಾತ್ರೆಗಳು, ಕಟ್ಟಡ ನಿರ್ಮಾಣಗಳು, ನ್ಯಾಯಾಲಯದ ದೃಶ್ಯಗಳು ಮತ್ತು ಮೊಘಲ್-ಯುಗದ ಇತಿಹಾಸವನ್ನು ವಿವರಿಸುವ ಪಠ್ಯವಾಗಿತ್ತು ಇದು.
ಈ ಅಧ್ಯಾಯವು ಮೊಘಲರ ಕಾಲದ ತೆರಿಗೆ, ಆಡಳಿತಗಾರರು ತಮ್ಮ ಆದಾಯದ ಬಹುಭಾಗವನ್ನು ಕೃಷಿ ಉತ್ಪಾದನೆಯಿಂದ ಹೇಗೆ ಪಡೆಯುತ್ತಿದ್ದರು ಮತ್ತು ಆಡಳಿತದ ಏಜೆಂಟರುಗಳಾದ ಕಂದಾಯ ಮೌಲ್ಯಮಾಪಕರು, ಸಂಗ್ರಹಕಾರರು ಕೃಷಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಗ್ರಾಮೀಣ ಸಮಾಜವನ್ನು ಹೇಗೆ ನಿಯಂತ್ರಿಸುತ್ತಿದ್ದರು ಎನ್ನುವುದರ ಬಗ್ಗೆ ವಿವರಗಳನ್ನು ಹೊಂದಿತ್ತು.

ಹನ್ನೆರಡನೆಯ ತರಗತಿಯ ಅರ್ಥಶಾಸ್ತ್ರದ ‘ಬಡತನ ಮತ್ತು ಮೂಲಸೌಕರ್ಯ’ ಎನ್ನುವ ಅಧ್ಯಾಯವನ್ನು ಸಹ ಕೈಬಿಡಲಾಗಿದೆ. ಅಧ್ಯಾಯವು ಬಡತನ, ಅದರ ಕಾರಣಗಳು ಮತ್ತು ನಿವಾರಣೆ ಮತ್ತು ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಹೊಂದಿತ್ತು.
ಕೋವಿಡ್ ಬಡತನವನ್ನು ಮತ್ತಷ್ಟು ಉಲ್ಬಣಗೊಳಿಸಿರುವ ಪ್ರಸ್ತುತ ಸಂದರ್ಭದಲ್ಲಿ ಈ ವಿಷಯವು ಅತ್ಯಂತ ನಿರ್ಣಾಯಕವಾಗಿದೆ ಎಂದು ಅರ್ಥಶಾಸ್ತ್ರದ ಶಿಕ್ಷಕರೊಬ್ಬರು ಹೇಳಿದ್ದಾರೆ. ಈ ಪಠ್ಯವನ್ನು ತೆಗೆದುಹಾಕಲಾಗಿರುವುದರಿಂದ ಭಾರತದಲ್ಲಿನ ಆರ್ಥಿಕ ಸ್ಥಿತಿ ಮತ್ತು ಬಡತನ ಹಾಗೂ ಬಡತನ ನಿರ್ಮೂಲನೆ ಯೋಜನೆ ಮತ್ತು ಕ್ರಮಗಳನ್ನು ವಿದ್ಯಾರ್ಥಿಗಳು ಗ್ರಹಿಸಲು ಸಾಧ್ಯವಾಗುವುದಿಲ್ಲ. ಈ ಅಧ್ಯಾಯವನ್ನು ಉಳಿಸಿಕೊಳ್ಳಬೇಕಿತ್ತು’ ಎಂದು ಶಾಲೆಯ ಪ್ರಾಂಶುಪಾಲರೊಬ್ಬರೂ ತಿಳಿಸಿರುವುದಾಗಿ ಟೆಲಿಗ್ರಾಫ್ ವರದಿ ಹೇಳಿದೆ.
ಕೈಗಾರಿಕಾ ಕ್ರಾಂತಿಯ ಮತ್ತೊಂದು ಅಧ್ಯಾಯವು ಸಹ ಈ ವರ್ಷ ಹನ್ನೊಂದನೇ ತರಗತಿಯ ಇತಿಹಾಸ ಪಠ್ಯಕ್ರಮದ ಭಾಗವಾಗಿಲ್ಲ. ಅಧ್ಯಾಯವು 1780 ಮತ್ತು 1850 ರ ನಡುವೆ ಬ್ರಿಟನ್‌ನಲ್ಲಿನ ಪ್ರಮುಖ ಪರಿವರ್ತನಾಶೀಲ ಅಭಿವೃದ್ಧಿಯ ವಿವರಗಳನ್ನು ನೀಡುತ್ತಿತ್ತು. ಅಧ್ಯಾಯವು ಹತ್ತಿ ಮತ್ತು ಕಬ್ಬಿಣದ ಕೈಗಾರಿಕೆಗಳಲ್ಲಿನ ಬದಲಾವಣೆ, ಶಕ್ತಿಯ ಮೂಲವಾಗಿ ಉಗಿ ಮತ್ತು ಹೊಸ ಸಾರಿಗೆ ವ್ಯವಸ್ಥೆ ರೂಪುಗೊಂಡಿದ್ದು ಇತ್ಯಾದಿಗಳ ಬಗ್ಗೆ ವಿವರ ಹೊಂದಿತ್ತು.
ಈ ವರ್ಷದ ಆರಂಭದಲ್ಲಿ, ಶಿಕ್ಷಣ ಸಚಿವಾಲಯವು ಸಾಂಕ್ರಾಮಿಕ ರೋಗದಿಂದ ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ಕಲಿಕೆಯ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮವನ್ನು ಪರಿಶೀಲಿಸಲು NCERT ಗೆ ಕೇಳಿಕೊಂಡಿತ್ತು. ಇದು ಪಠ್ಯಕ್ರಮ ಪರಿಷ್ಕರಣೆಗೆ ಕಾರಣವಾಯಿತು ಎಂದು ಸಿಬಿಎಸ್‌ಇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ವಿಶ್ವದಲ್ಲಿ ಒಂದು ಬಿಲಿಯನ್‌ನ್ನೂ ಮೀರಿ ಜನಸಂಖ್ಯೆ ಇರುವ ಮತ್ತು ಭಾರತದ ಜನಸಂಖ್ಯೆಯ ಶೇಕಡಾ 14.2 ರಷ್ಟಿರುವ ಸಮಯದಾಯವೊಂದರ ಬಗೆಗಿನ ಕಲಿಕೆಯನ್ನೇ ತೆಗೆದುಹಾಕುವುದು ಭಾರತದ ಸಾಮಾಜಿಕ ಸಂರಚನೆಯಲ್ಲಿ ನಿಧಾನವಾಗಿ ಒಡಕನ್ನು ಮೂಡಿಸಲಿದೆ ಮತ್ತು ವಿವಿಧ ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನುವುದು ಭಾರತದ ಅತ್ಯಂತ ದೊಡ್ಡ ಎಜುಕೇಷನ್ ಬೋರ್ಡ್ ಆಗಿರುವ ಸಿಬಿಎಸ್ಇ ಗಮನಕ್ಕೆ ಯಾಕೆ ಬಂದಿಲ್ಲ ಎನ್ನುವ ಮೂಲಭೂತ ಪ್ರಶ್ನೆಗೆ ನಾವಿಲ್ಲಿ ಉತ್ತರ ಹುಡುಕಬೇಕಾಗುತ್ತದೆ. ಕೋವಿಡ್‌ನ ಮೊದಲನೇ ಅಲೆಯಿಂದಾಗಿ ಭಾರತದ 230 ಮಿಲಿಯನ್ ಜನರು ಮತ್ತೆ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎನ್ನುತ್ತದೆ ಅಜೀಂ ಪ್ರೇಮ್‌ಜೀ ವಿಶ್ವ ವಿದ್ಯಾಲಯದ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ವರದಿ. ಇಂತಹ ಸಮಯದಲ್ಲಿ ಭಾರತದ ಬಡತನದ ಬಗ್ಗೆ ತಿಳಿಯಲೇಬೇಕಿದ್ದ ವಿದ್ಯಾರ್ಥಿಗಳ ಪಠ್ಯದಿಂದ ಈ ಅಧ್ಯಾಯವನ್ನು ಏಕೆ ತೆಗೆದುಹಾಕಲಾಗಿದೆ ಎಂಬ ಪ್ರಶ್ನೆಗೆ ಸಮರ್ಪಕವಾಗಿ ಉತ್ತರಿಸುವ ಹೊಣೆಯೂ ಸಿಬಿಎಸ್ಇ ಮೇಲಿದೆ.