ಅಸ್ಸಾಂ ಪೊಲೀಸರು ಬುಧವಾರ ತಡರಾತ್ರಿ ವಡ್ಗಾಮ್ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾನಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ, “ಗೋಡ್ಸೆಯನ್ನು ದೇವರಂತೆ ಪರಿಗಣಿಸುವ” ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನಲ್ಲಿ ಕೋಮು ಘರ್ಷಣೆಗಳ ವಿರುದ್ಧ ಶಾಂತಿ ಮತ್ತು ಸೌಹಾರ್ದತೆಗಾಗಿ ಮನವಿ ಮಾಡಬೇಕು ಎಂದು ಕೆಲವು ಟ್ವೀಟ್ಗಳನ್ನು ಮಾಡಿದ ಹಿನ್ನೆಲೆಯಲ್ಲಿ ಅವರ ಬಂಧನವಾಗಿದೆಯೆಂದು ಹೇಳಲಾಗಿದೆ.
ಅಸ್ಸಾಂನ ನಾಲ್ವರು ಪೊಲೀಸರ ತಂಡವು ಬನಸ್ಕಾಂತದ ಪಾಲನ್ಪುರ ಸರ್ಕ್ಯೂಟ್ ಹೌಸ್ನಲ್ಲಿ ಮೇವಾನಿ ಅವರನ್ನು ವಶಕ್ಕೆ ತೆಗೆದುಕೊಂಡಿತು. ಆರಂಭದಲ್ಲಿ ಅಪರಾಧದ ವಿವರಗಳನ್ನು ನೀಡದ ಪೊಲೀಸರು, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಮೇವಾನಿ ಬೆಂಬಲಿಗರ ಗುಂಪು ವಿರೋಧವನ್ನು ವ್ಯಕ್ತಪಡಿಸಿದ ನಂತರವೇ, ಮೇವಾನಿ ಅವರ ಟ್ವೀಟ್ಗಳಿಗಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ ಎಂದು ಮೇವಾನಿ ಅವರ ಆಪ್ತರು ಹೇಳಿದ್ದಾರೆ.
ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಭಬಾನಿಪುರದ ನಿವಾಸಿ ಅನುಪ್ ಕುಮಾರ್ ಡೇ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಮೇವಾನಿ ವಿರುದ್ಧ ಸೆಕ್ಷನ್ 120 ಬಿ (ಅಪರಾಧ ಪಿತೂರಿ), ಸೆಕ್ಷನ್ 153 (ಎ) (ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ), 295(A) (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಗಾಯಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 506 (ಅಪರಾಧ ಬೆದರಿಕೆ) ಮತ್ತು IT ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ನೀಡಿದ ದಾಖಲೆ ತೋರಿಸುತ್ತದೆ.
ಮೇವಾನಿ ಅವರು ಏಪ್ರಿಲ್ 18 ರಂದು ಮಾಡಿದ ಟ್ವೀಟ್ನಲ್ಲಿ ಅವರು “ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ‘ಗೋಡ್ಸೆ’ಯನ್ನು ಪೂಜಿಸುತ್ತಾರೆ ಮತ್ತು ದೇವರಂತೆ ಪರಿಗಣಿಸುತ್ತಾರೆ ಎಂದು ಬರೆದಿದ್ದಾರೆ ಎಂದು ದೂರುದಾರರು ಉಲ್ಲೇಖಿಸಿದ್ದಾರೆ. ಏಪ್ರಿಲ್ 20 ರಂದು ಗುಜರಾತ್ಗೆ ಭೇಟಿ ನೀಡಿದಾಗ ಕೋಮುಗಲಭೆ ನಡೆದ ಹಿಮ್ಮತ್ನಗರ, ಖಂಭತ್ ಮತ್ತು ವೆರಾವಲ್ನಂತಹ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಸಾರ್ವಜನಿಕರಿಗೆ ಪ್ರಧಾನಿ ಮನವಿ ಮಾಡಬೇಕೆಂದು ಮೇವಾನಿ ಟ್ವೀಟ್ ಮಾಡಿದ್ದರು ಎಂದು ಹೇಳಲಾಗಿದೆ.
ಗುಜರಾತ್ನ ವಡ್ಗಾಮ್ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವ ಜಿಗ್ನೇಶ್, ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಕನ್ಹಯ್ಯಾ ಕುಮಾರ್ ಜತೆಗೆ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ಜಿಗ್ನೇಶ್ ಅವರು ಕಾಂಗ್ರೆಸ್ಗೆ ಬೆಂಬಲ ಪ್ರಕಟಿಸಿದ್ದರು. ಈ ವರ್ಷದ ಅಂತ್ಯದಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಈ ಬಂಧನ ನಡೆದಿರುವುದರಿಂದ ಇದರ ಹಿಂದೆ ಧ್ವೇಷ ರಾಜಕಾರಣ ಇದೆಯೇ ಎಂದೂ ವಿಶ್ಲೇಷಣೆಗಳು ನಡೆಯುತ್ತಿದೆ.
ಜಿಗ್ನೇಶ್ ಟ್ವೀಟ್ ಮಾಡಿದಂತೆ ನರೇಂದ್ರ ಮೋದಿ ಗೋಡ್ಸೆಯ ಆರಾಧಕನಲ್ಲ ಎಂದಾದರೆ ಮೋದಿ ಗೋಡ್ಸೆಯನ್ನು ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಎಂದು ಕರೆಯಬಹುದೇ? ಅವರು ಬಿಜೆಪಿ ಸದಸ್ಯೆ, ಗೋಡ್ಸೆ ಭಕ್ತೆ ಸಾಧ್ವಿಯನ್ನು ಸಂಸದೆಯಾಗಿ ಮುಂದುವರೆಯದಂತೆ ತೆಗೆದು ಹಾಕಬಹುದೇ? ಈಗಲೇ ಜಿಗ್ನೇಶ್ ಬಿಡುಗಡೆ ಮಾಡಿ ಎಂದು ಕಮ್ಯುನಿಸ್ಟ್ ಪಾಲಿಟ್ ಬ್ಯೂರೋ ಸದಸ್ಯೆ ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.