ಚಿಕ್ಕಬಳ್ಳಾಪುರ:ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಇಡೀ ಜೀವನವನ್ನು ಸಮಾನತೆ ,ಸಾಮಾಜಿಕ ನ್ಯಾಯ, ಸಹೋದರತೆ ಹಾಗೂ ಶೋಷಿತ ವರ್ಗಗಳ ಏಳಿಗೆಗಾಗಿ ಮುಡುಪಾಗಿಟ್ಟಿದ್ದರು. ಅವರ ವಿಚಾರಧಾರೆಗಳನ್ನು ನಾವೇಲ್ಲರೂ ಪಾಲಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದರು.
ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್ ಮತ್ತು ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಜೂನಿಯರ್ ಕಾಲೇಜು ಆವರಣದ ರಂಗಮಂದಿರದಲ್ಲಿ ಆಯೋಜಿಸಿದ್ದ ಡಾ,ಬಿ.ಆರ್. ಅಂಬೇಡ್ಕರ್ ರವರ 131ನೇ ಜನ್ಮದಿನಾಚರಣೆ ಹಾಗೂ ಡಾ.ಬಾಬು ಜಗಜೀವನ್ ರಾಮ್ 115ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವತಾವಾದಿ, ಭಾರತರತ್ನ ,ಸಂವಿಧಾನಶಿಲ್ಪಿ ಅಂಬೇಡ್ಕರ್ ರವರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನಾಯಕರು, ದೇಶದ ಮಹಾನ್ ನಾಯಕರಲ್ಲಿ ಇವರು ಅಗ್ರಗಣ್ಯರಾಗಿದ್ದಾರೆ.ಅವರ ಶ್ರೇಯೋಭಿವೃದ್ಧಿಗೋಸ್ಕರ ಅವರು ಬದುಕಲಿಲ್ಲ,ಅದೃಷ್ಟ ಹಾಗೂ ಮೂಢನಂಬಿಕೆಯಲ್ಲಿ ನಂಬಿಕೆ ಇಡಬೇಡಿ ನಿಮ್ಮ ದುಡಿಮೆಯನ್ನು ನಂಬಿ .ಶಿಕ್ಷ ಣ ಪಡೆದು ಸಂಘಟಿತರಾಗಿ ನಿಮ್ಮ ಹಕ್ಕುಗಳಿಗಾಗಿ ಹೋರಾಡಿ ಎಂದು ಕರೆಕೊಟ್ಟ ಶ್ರೇಷ್ಠ ನಾಯಕರಾಗಿದ್ದರು ಸಚಿವರು ಅಭಿಪ್ರಾಯ ಪಟ್ಟರು .
ಯಾವ ಧರ್ಮ ಮನುಷ್ಯ ಮತ್ತು ಮನುಷ್ಯನ ಮಧ್ಯೆ ದ್ವೇಷದ ಗೋಡೆ ನಿರ್ಮಿಸುತ್ತದೆ ಅದು ಯಾವುದೇ ಧರ್ಮವಿರಲಿ ಅದು ಧರ್ಮವೇ ಅಲ್ಲ, ಯಾವ ಧರ್ಮ ಪ್ರೀತಿ ವಾತ್ಸಲ್ಯ ನೀಡಿ ಮಾನವನ ಏಳಿಗೆಗೆ ಪೂರಕವಾಗಿರುತ್ತದೆ ಅದನ್ನು ಮಾತ್ರ ಧರ್ಮ ಅಂತ ಕರೆಯಬಹುದು ಎಂದು ಅಂಬೇಡ್ಕರ್ ಅವರು ಹೇಳಿದ್ದಾರೆ .ಪ್ರತಿಷ್ಠಿತ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ 64ಪದವಿಗಳನ್ನು ಪಡೆದು ವಿಶ್ವದ ಜ್ಞಾನವಂತರ ಸಾಲಿನಲ್ಲಿ ಅಂಬೇಡ್ಕರ್ ಮೊದಲಿಗರಾಗಿದ್ದಾರೆ ಇಂತಹ ಹೆಮ್ಮೆಯ ಭಾರತಾಂಭೆಯ ಸುಪುತ್ರನ ಜಯಂತಿಯ ದಿನವನ್ನು(ಏ.14) ವಿಶ್ವ ಜ್ಞಾನದ ದಿನ ಅಂತ ಇಡೀ ವಿಶ್ವವೇ ಆಚರಣೆ ಮಾಡುತ್ತಿದೆ ಎಂದು ತಿಳಿಸಿದರು.
ಈ ದೇಶದ ಆತ್ಮ ಎಲ್ಲಿದೆ ಎಂದರೆ ಅದು ಸಂವಿಧಾನದಲ್ಲಿದೆ. ವಿವಿಧೆತೆಯಲ್ಲಿ ಏಕತೆಯನ್ನು ಕಂಡಂತಹ ದೇಶ. ಇಲ್ಲಿ ವಿವಿಧ ಜಾತಿ ಧರ್ಮಗಳು ,ಭಾಷಾ ಪ್ರಾಂತ್ಯಗಳನ್ನು ಹೊಂದಿದ್ದು ಇಂಥ ವೈವಿಧ್ಯತೆಯಲ್ಲಿಯೂ ಎಲ್ಲರಿಗೂ ಸಮಾನ ಅವಕಾಶವನ್ನು,ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಏಕತೆಯನ್ನು ಸಂವಿಧಾನ ನೀಡಿದೆ . ಅಲ್ಪಸಂಖ್ಯಾತರು ಕೂಡ ಈ ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆ ಪಡೆದಿದ್ದರೆ ಅದಕ್ಕೆ ಸಂವಿಧಾನ ಕಾರಣ.ಇಂತಹ ಸಂವಿಧಾನ ರಚಿಸಿದ ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ ಅಂಬೇಡ್ಕರ್ ಅವರ ಜಯಂತಿಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗಿದೆ ಎಂದು ತಿಳಿಸಿದರು.
ಹಸಿರು ಕ್ರಾಂತಿಯ ಹರಿಕಾರ ಡಾ ಬಾಬು ಜಗಜೀವನ್ ರಾಮ್ ರವರು ದೇಶದ ಆಹಾರದ ಭದ್ರತೆಗೆ ಭದ್ರ ಬುನಾದಿ ಹಾಕಿದ ದೂರದೃಷ್ಟಿಯ ನಾಯಕರು. ದೇಶಕ್ಕೆ ಆಗುವಷ್ಟು ಆಹಾರ ಧಾನ್ಯಗಳನ್ನು ಬೆಳೆದು ಮೀಸಲಿಟ್ಟು ಹೊರದೇಶಗಳಿಗೂ ರಫ್ತು ಮಾಡುವ ಸಾಮರ್ಥ್ಯವನ್ನು ದೇಶ ಬೆಳೆಸಿಕೊಂಡಿದೆ ಎಂದರೆ ಅದಕ್ಕೆ ಕಾರಣ ಬಾಬೂಜಿಯವರ ಕೃಷಿ ಕ್ಷೇತ್ರದ ದೂರದೃಷ್ಟಿ ಚಿಂತನೆ, ಅಂದು ಅವರು ತೆಗೆದುಕೊಂಡ ಹಸಿರು ಕ್ರಾಂತಿಯ ಕ್ರಮಗಳು.ಅಂಬೇಡ್ಕರ್ ಮತ್ತು ಬಾಬೂಜಿ ಅವರು ಈ ದೇಶದ ದೃವತಾರೆಗಳು .ಇಂತಹ ಮಹಾನ್ ನಾಯಕರ ಜಯಂತಿಯನ್ನು ಏಕಕಾಲದಲ್ಲಿ ಆಚರಿಸುವುದು ಸಮಂಜಸವಾಗಿದೆ ಎಂದರು.

ಒಬ್ಬ ವ್ಯಕ್ತಿಗೆ ಒಂದೇ ಮತ, ಒಂದೇ ಮೌಲ್ಯ ನೀಡಲಾಗಿದೆ. ಶೋಷಿತ ವರ್ಗಗಳಲ್ಲಿ ಇನ್ನೂ ಬಡತನ ಇದೆ ,ಸಾಮಾಜಿಕ ಸಮಾನತೆ ಸಂಪೂರ್ಣವಾಗಿ ದೊರಕಿಲ್ಲ .ಮಹಿಳಾ ಸಮಾನತೆ ,ಏಕಪೌರತ್ವ ಹಾಗೂ ಕಾರ್ಮಿಕರ ಹಿತರಕ್ಷಣಾ ಹಕ್ಕುಗಳನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದಾರೆ .ಹದಿನೆಂಟು ವರ್ಷ ತುಂಬಿದ ನಂತರ ಮಹಿಳೆಯರು ಮದುವೆಯಾಗಬೇಕು.ಕಾರ್ಮಿಕರು ದಿನದಲ್ಲಿ ಕೇವಲ 8ಗಂಟೆಗಳು ಮಾತ್ರ ಕೆಲಸ ನಿರ್ವಹಿಸಬೇಕು ಎಂಬ ಕಾನೂನುಗಳನ್ನು ರೂಪಿಸಿದವರು ಅಂಬೇಡ್ಕರ್ ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ನಾಗರಾಜು ಮಾತನಾಡಿ, ನಗರದಲ್ಲಿ ಇಂದು 30ಕ್ಕೂ ಹೆಚ್ಚು ಪಲ್ಲಕಿಗಳ ಉತ್ಸವ ಮೆರವಣಿಗೆ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಗಿದೆ.
ಇಂದಿನ ಯುವ ಪೀಳಿಗೆಗೆ ಅಂಬೇಡ್ಕರ್ ರವರು ಆದರ್ಶ ಪ್ರಾಯವಾಗಿದ್ದಾರೆ. ಅವರ ಮೌಲ್ಯಗಳನ್ನು ನಾವೆಲ್ಲರೂ ಆದರ್ಶಪ್ರಾಯವಾಗಿ ಇಟ್ಟುಕೊಳ್ಳಬೇಕು ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ, ಸೆರಮನೆವಾಸ ದಿಂದ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಅವರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿ ಗೆ ಸಾಮಾಜಿಕ ನ್ಯಾಯ,ಸಮಾನತೆ ಸಿಕ್ಕಾಗ ಮಾತ್ರ ಅಂಬೇಡ್ಕರ್ ಅವರ ಆಶಯ ಈಡೇರುತ್ತದೆ. ಎಲ್ಲಾ ದೇಶದ ಸಂವಿಧಾನ ಅವಲೋಕನ ಮಾಡಿ ನಮ್ಮ ಸಂವಿಧಾನ ರಚನೆ ಮಾಡಲಾಗಿದೆ. ಜಾತ್ಯಾತೀತ ವಾದ ರಾಷ್ಟ್ರ ನಮ್ಮ ಭಾರತ. ಶೋಷಿತರ ವರ್ಗದ ಅಭಿವೃದ್ಧಿಗೆ ಸಂವಿಧಾನದಲ್ಲಿ ಮೀಸಲಾತಿ ನೀಡಲಾಗಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ವೇಳೆ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹೊನ್ನೇನಹಳ್ಳಿ ವ್ಯಾಪ್ತಿಯ ಸರ್ವೇ ನಂಬರ್ 26ರಲ್ಲಿ ಜಿಲ್ಲಾಡಳಿತದಿಂದ 1 ಎಕರೆ 22 ಗುಂಟೆ ಜಮೀನು ಮಂಜೂರು ಮಾಡಿರುವುದನ್ನು ಸಮಾಜ ಕಲ್ಯಾಣ ಇಲಾಖೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಾಂತರ ಮಾಡಿದರು ಹಾಗೂ ನಗರ ಪ್ರದೇಶದ ಜನರಿಗೆ ಸ್ಮಾಶಾನಕ್ಕಾಗಿ ತಿಪ್ಪೇನಳ್ಳಿ ಬಳಿ ಮೂರು ಎಕರೆ ಜಾಗ ಮಂಜೂರಾತಿ ಆದೇಶದ ಪ್ರತಿಯನ್ನು ವಿತರಿಸಿದರು.ಕಾರ್ಯಕ್ರಮಕ್ಕೂ ಮುನ್ನ ಮಂಡಿಕಲ್ ಹೋಬಳಿಯ ದೊಮ್ಮಗಾನಹಳ್ಳಿಯಲ್ಲಿ 22 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ವಸತಿ ಶಾಲೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಹಾಗೂ ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನ ರಾಂ ಅವರ 115ನೇ ಜಯಂತಿ ಅಂಗವಾಗಿ ಹಮ್ಮಿಕೋಂಡಿದ್ದ ‘ಸಾಮಾಜಿಕ ನ್ಯಾಯದೆಡೆಗೆ’ ಎಂಬ ವಿನೂತನ ಕಾಲ್ನಡಿಗೆ (ವಾಕಥಾನ್) ಜಾಥಾಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ರವರು ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಿದರು.
ಜಾಥಾ ಕಾರ್ಯಕ್ರಮವು ನಗರದ ಜೈಭೀಮ್ ಬಾಲಕರ ವಿದ್ಯಾರ್ಥಿ ನಿಲಯದಿಂದ ಆರಂಭವಾಗಿ ಗೌರಿಬಿದನೂರು ರಸ್ತೆ ಮತ್ತು ಬಿ.ಬಿ ರಸ್ತೆಗಳ ಮುಖಾಂತರ ಜೂನಿಯರ್ ಕಾಲೇಜು ಆವರಣದವರೆಗೆ ಸಾಗಿತು. ಈ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಶಾಲಾ-ಕಾಲೇಜುಗಳ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿ ಸಹಬಾಳ್ವೆ, ಸಮಾನತೆ, ಸಹ ಮಾನವರೊಂದಿಗೆ ಸಹೋದರತೆ ಹಾಗೂ ಸಾಮಾಜಿಕ ನ್ಯಾಯದ ಜಾಗೃತಿ ಕುರಿತಾಗಿ ಸಚಿವರಿಂದ ಪ್ರಮಾಣ ವಚನ ಸ್ವೀಕಸಿದರು.
ಮಾಲಾರ್ಪಣೆ ಮತ್ತು ಪುಷ್ಪ ನಮನ
ಕಾಲ್ನಡಿಗೆ (ವಾಕಥಾನ್) ಜಾಥಾ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ರವರು ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ರವರ ಜಯಂತ್ಯೋತ್ಸವ ಅಂಗವಾಗಿ ನಗರದ ಜೈ ಭೀಮ್ ಪದವಿ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು ನಂತರ ಡಾ.ಬಾಬು ಜಗಜೀವನ ರಾಮ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಜೈ ಬೀಮ್ ಪದವಿ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗಾಗಿ ತೆರೆದಿರುವ 1.90 ಲಕ್ಷ ವ್ಯಚ್ಚದ ಡಿಜಿಟಲ್ ಲೈಬ್ರರಿ ಲೋಕಾರ್ಪಣೆ ಮಾಡಿದರು.

ಅದ್ಧೂರಿ ಮೆರವಣಿಗೆ
ಗ್ರಾಮ ಪಂಚಾಯ್ತಿವಾರು ಮತ್ತು ಇಲಾಖಾವಾರು ನಿರ್ಮಿಸಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಹಾಗೂ ಡಾ.ಬಾಬು ಜಗಜೀವನ ರಾಮ್ ರವರ ಭಾವಚಿತ್ರಗಳ, ಪಲ್ಲಕ್ಕಿ ರಥ, ಕಲಾತಂಡಗಳು ಸೇರಿದಂತೆ 50ಕ್ಕೂ ಹೆಚ್ಚು ಸ್ತಬ್ದಚಿತ್ರಗಳ ಅದ್ದೂರಿ ಮೆರವಣಿಗೆ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಜೈ ಬೀಮ್ ವಿದ್ಯಾರ್ಥಿನಿಲಯದ ಮುಂಭಾಗಲ್ಲಿ ಚಾಲನೆ ನೀಡಿದರು. ಈ ಸ್ತಬ್ದಚಿತ್ರಗಳ ಭವ್ಯವಾದ ಪುಷ್ಪಾಲಂಕಾರ , ಅಂಬೇಡ್ಕರ್ ಮತ್ತು ಬಾಬೂಜಿಯವರ ಸಂದೇಶ ಸಾರುವ ಚಿತ್ರಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಜಾಗೃತಿ ಮೂಡಿಸುವ ಟ್ಯಾಬ್ಲೋಗಳು ಸಾರ್ವಜನಿಕರ ಮನಸೊರೆಗೊಂಡು ಮೆಚ್ಚುಗೆಗೆ ಪಾತ್ರವಾದವು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್, ರಾಜ್ಯ ಮಾವು ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಕೆ.ವಿ.ನಾಗರಾಜು, ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ದಲಿತ ಮುಖಂಡರು, ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ವೇದಿಕೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಹಾಯಧನ ಚೆಕ್ ವಿತರಣೆ ಮಾಡಲಾಯಿತು ಮತ್ತು ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಯಿತು.ವಿವರ ಕೆಳಕಂಡಂತಿದೆ.













