ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲಿ ತೀವ್ರ ಸಂಚಲನ ಹಾಗೂ ಗದ್ದಲ ಎಬ್ಬಿಸಿರುವ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ನೇತೃತ್ವದಲ್ಲಿ ಗೃಹ ಸಚಿವ ಅಮಿತ್ ಷಾ ನಿವಾಸದೆದುರು ಪ್ರತಿಭಟನೆಯನ್ನ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ 8 ವರ್ಷಗಳ ಹಿಂದೆ ನಾ ಖಾವೂಂಗ ಖಾನೆ ದೂಂಗಾ ಎಂದು ಹೇಳಿ ಅಧಿಕಾರಕ್ಕೆ ಬಂದವರು ಬಿಜೆಪಿಯವರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ತುಂಬಾ ತಿಂದು ಬೇರೆಯವರನ್ನು ಸಾಯಲು ಬಿಡಿ ಎಂದು ಕಿಡಿಕಾರಿದ್ದಾರೆ.

ಮುಂದುವರೆದು, ಇಷ್ಟೆಲ್ಲಾ ಆದರು ಸಹ ಕರ್ನಾಟಕದ ಮುಖ್ಯಮಂತ್ರಿ ಯಾಕೆ ಮೌನ ವಹಿಸಿದ್ದಾರೆ ಯಾರನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ 40% ಕಮಿಷನ್ ಆಸೆಯಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನೊಬ್ಬ ನೇಣು ಹಾಕಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ನನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಪತ್ರದಲ್ಲಿ ಬರೆದು ಸತ್ತಿದ್ದಾರೆ ಆದರೆ, ಇನ್ನು ಸಹ ಸಚಿವರ ಬಂಧನವಾಗಿಲ್ಲ ಯಾಕೆ. ಇದು ಬಿಜೆಪಿ ಹಾಗೂ ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ದೂರಿದ್ದಾರೆ. ಈ ಕೂಡಲೇ ಸಚಿವ ಸಂಪುಟದಿಂದ ಈಶ್ವರಪ್ಪರನ್ನು ವಜಾ ಮಾಡಬೇಕು ಹಾಗೂ ಪೊಲೀಸರು ತಮ್ಮ ವಶಕ್ಕೆ ಪಡೆಯಬೇಕು ಸುಪ್ರೀಂ ಕೋರ್ಟ್ ಹಾಲಿ ನ್ಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.






