ನೀರು ಬರ್ತಿಲ್ಲ ಅಂದರೆ ಜಲಮಂಡಳಿಗೆ ಫೋನ್ ಮಾಡಬೇಕು. ಕರೆಂಟ್ ಹೋದ್ರೆ ಬೆಸ್ಕಾಂಗೆ ಫೋನ್ ಮಾಡಬೇಕು. ಮನೆ ಮುಂದೆ ಬೈಕ್ ಕಳ್ಳತನ ಆದ್ರೆ ಪೊಲೀಸರಿಗೆ ಫೋನ್ ಮಾಡಬೇಕು. ಬೀದಿ ದೀಪ ವರ್ಕ್ ಆಗ್ತಿಲ್ಲ ಅಂದ್ರೆ ಬಿಬಿಎಂಪಿಗೆ ಪೋನ್ ಮಾಡಬೇಕು. ಆದ್ರೆ, ಒಂದೇ ಮನೆಯಲ್ಲಿ ಇಷ್ಟೂ ಸಮಸ್ಯೆಗಳು ಒಂದೇ ಬಾರಿಗೆ ಕಾಣಿಸಿಕೊಂಡ್ರೆ. ಜನರು ಫೋನ್ ಮಾಡಿ ಮಾಡಿನೇ ಪ್ರಾಣ ಕಳೆದುಕೊಂಡುಬಿಡ್ತಾರೆ. ಆದರೆ, ಇನ್ಮುಂದೆ ಹತ್ತಾರು ಇಲಾಖೆಗಳ ಕೆಲಸ ಒಂದೇ ಒಂದು ಕರೆಯಲ್ಲಿ ಆಗಲಿದೆ ಅನ್ನುತ್ತೆ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಈ ಹೊಸ ಸಾಹಸ.
ನಗರದ ಪ್ರಮುಖ 14 ಇಲಾಖೆಗಳ ಸೇವೆ ಒಂದೇ ಸೂರಿನಡಿ.!!
ರಾಜಧಾನಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ Integrated Command Center ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸಿದ್ದಗೊಳ್ತಿರೋ ಈ ಕಾಲ್ ಸೆಂಟರ್ 100 ದಿನಗಳೊಳಗೆ ಕಾರ್ಯಪ್ರವೃತ್ತವಾಗಲಿದೆ. ಕಾರ್ಪೋರೇಶನ್ ವೃತ್ತದಲ್ಲಿರುವ ಬಿಬಿಎಂಪಿ ಕೇಂದ್ರ ಕಚೇರಿಯ 6ನೇ ಮಹಡಿಯಲ್ಲಿ Integrated Command Centerನ ಕಚೇರಿ ತಲೆಯೆತ್ತಲಿದ್ದು, 30 ಕ್ಕೂ ಅಧಿಕ ಸಿಬ್ಬಂದಿ ಈ ಕಾಲ್ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ನಗರದ ಪ್ರಮುಖ 14 ಇಲಾಖೆಗಳ ಸೇವೆಯನ್ನು ಒಂದೇ ಸೂರಿನಡಿ ಸಿಗುವಂತೆ ಮಾಡುವುದೇ Integrated Command Centerನ ಉದ್ದೇಶವಾಗಿದೆ. ಬರೊಬ್ಬರಿ 90 ಕೋಟಿ ರೂಪಾಯಿ ವೆಚ್ಚದ ಈ Integrated Command Center ಅನ್ನು ಪ್ರಾರಂಭಿಕವಾಗಿ ಸ್ಮಾರ್ಟ್ ಸಿಟಿ ನಡೆಸಲಿದ್ದು, 3 ವರ್ಷಗಳ ನಂತರ ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತೆ ಎನ್ನಲಾಗಿದೆ.
ನೀರು ಬರ್ತಿಲ್ಲ, ಕರೆಂಟ್ ಹೋಯ್ತು, ಸಿಗ್ನಿಲ್ ಜಂಪ್ ಮಾಡದಿದ್ರೂ ಮನೆಗೆ ನೋಟೀಸ್ ಬಂದಿದೆ, ಬೀದಿ ದೀಪ ಕಾರ್ಯನಿರ್ವಹಿಸುತ್ತಿಲ್ಲ. ಹೀಗೆ ನಾನಾ ಕಾರಣಗಳಿಂದ ಜನರು ಪ್ರತಿನಿತ್ಯ ಒಂದಲ್ಲಾ ಒಂದು ಇಲಾಖೆಗೆ ಫೋನ್ ಮಾಡ್ತಾರೆ. ಫೋನ್ ರಿಸೀವ್ ಆಗದಿದ್ರೆ ಇ-ಮೇಲ್ ಕಳಿಸ್ತಾರೆ. ಅದಕ್ಕೂ ರಿಪ್ಲೈ ಬರ್ಲಿಲ್ಲ ಅಂದಾಗ ನೇರವಾಗಿ ಕಚೇರಿಗೇ ಭೇಟಿ ನೀಡ್ತಾರೆ. ಮತ್ತೊಂದೆಡೆ, ಒಂದೇ ರಸ್ತೆಯಲ್ಲಿ ಹಲವಾರು ಇಲಾಖೆಗಳಿಂದ ಸಮಸ್ಯೆಗಳು ಎದುರಾಗಿದ್ರೆ, ಎಲ್ಲ ಇಲಾಖೆಗಳಿಗೂ ಪ್ರತ್ಯೇಕವಾಗಿ ಕರೆ ಮಾಡಿ ದೂರು ನೀಡಬೇಕಿತ್ತು. ಆದ್ರೆ ಈ Integrated Command Center ತಲೆಯೆತ್ತಿದ್ದ ಮೇಲೆ ಕೇವಲ ಒಂದೇ ಫೋನ್‌ಗೆ ಎಲ್ಲ ಇಲಾಖೆಗಳೂ ಎಚ್ಚೆತ್ತುಕೊಳ್ತಾವೆ ಅನ್ನೋದು ಸ್ಮಾರ್ಟ್ ಸಿಟಿ ಎಂಡಿ ಅಭಿಪ್ರಾಯ.
ನಗರದ ಪ್ರಮುಖ 14ರಿಂದ 20 ಇಲಾಖೆಗಳಿಗೆ ಕರೆ ಮಾಡಲು ಸಿಂಗಲ್ ವಿಂಡೋ ಸಿಸ್ಟಂ ಮಾದರಿಯಲ್ಲಿ ಕಾಲ್ ಸೆಂಟರ್ ಸಿದ್ದವಾಗ್ತಿದೆ. ಯಾವುದೇ ಇಲಾಖೆ ಯಾವುದೇ ವಾರ್ಡ್‌ನಲ್ಲಿ ಕೆಲಸ ಮಾಡಿದ್ರೂ ಈ Integrated Command Centerನ ಡೇಟಾಬೇಸ್‌ನಲ್ಲಿ ದಾಖಲಾಗಲಿದೆ. ಆಗ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡೋದಕ್ಕೆ ಅನುಕೂಲವಾಗುತ್ತೆ ಅನ್ನೋದು ಕೂಡ ಇದರ ಪ್ರಮುಖ ಉದ್ದೇಶವಾಗಿದೆ. ಮತ್ತೊಂದೆಡೆ, ದಿನದ 24 ಗಂಟೆಯೂ ಈ ವಿಭಾಗ ಕಾರ್ಯನಿರ್ವಹಿಸಬೇಕು ಅನ್ನೋದು ಜನಸಾಮಾನ್ಯರ ಆಸೆಯಾಗಿದೆ. ಅದೇನೇ ಇರಲಿ, ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಟ್ರಾಫಿಕ್ ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಸಂಯೋಜಿತ ವೇದಿಕೆ ಜನರಿಗೆ ಸೇವೆ ನೀಡುವಲ್ಲಿ ಪೂರ್ಣಪ್ರಮಾಣದಲ್ಲಿ ಯಶ್ವಸಿಯಾಗಿ, ಇತರೆ ನಗರಗಳಿಗೆ ಮಾದರಿಯಾಗಬೇಕಿದೆ.