ರಾಜ್ಯ ರಾಜಧಾನಿ ಬೆಂಗಳೂರು ಹಲವು ಕಾರಣಗಳಿಗೆ ಹೆಸರುವಾಸಿ. ನಗರದ ಟ್ರಾಫಿಕ್, ಮೂಲಸೌಕರ್ಯಗಳ ಅಸಮರ್ಪಕತೆ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದರೂ ಭಾರತದ ಇತರೆ ಮೆಟ್ರೋ ನಗರಗಳಿಗೆ ಹೋಲಿಸಿದರೆ ಉದ್ಯಾನನಗರಿಯ ಹವಾಮಾನಕ್ಕೆ ಬೇರೆ ಸಾಟಿಯಿಲ್ಲ. ಅದರಲ್ಲೂ ಹೊಸ ಉದ್ದಿಮೆಗಳಿಗೆ ಬೆಂಗಳೂರು ಅಚ್ಚುಮೆಚ್ಚು. ಬೆಂಗಳೂರಿನಲ್ಲಿದ್ದಷ್ಟು ಸ್ಟಾರ್ಟ್ ಅಪ್ ಗಳು ಭಾರತದ ಬೇರೆ ಯಾವ ನಗರದಲ್ಲೂ ಇಲ್ಲ ಎನ್ನುವುದೇ ಅದಕ್ಕೆ ಸಾಕ್ಷಿ.
ಅಲ್ಲದೆ, ನಗರದ ಒಳಗೊಳ್ಳುವಿಕೆಯ ಸಾಮಾಜಿಕ ಸಂಸ್ಕೃತಿಯು ಬೆಂಗಳೂರಿನಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆಗೆ ಮುಂದೆ ಬರಲು ಮಹತ್ವದ ಕಾರಣವಾಗಿದೆ. ಉದ್ಯಮ ಆರಂಭಿಸುವವರಿಗೆ ಹಾಗೂ ಕೆಲಸ ಹುಡುಕುವವರಿಗೆ ಒಂದು ಕಾಲದಲ್ಲಿ ಕನಸಿನ ನಗರವಾಗಿದ್ದ, ಮಾಯಾನಗರಿ ಮುಂಬೈ ಸ್ಥಾನವನ್ನು ಬೆಂಗಳೂರು ಪಡೆದುಕೊಂಡಿದೆ. ಉತ್ತರ ಭಾರತದ ನಗರಗಳು, ಚೆನ್ನೈ, ಹೈದರಾಬಾದ್ ಗೆ ಹೋಲಿಸಿದರೂ ತಾಪಮಾನದಲ್ಲಿ ಬೆಂಗಳೂರೆ ಬೆಟರ್..
ಒಂದು ಕಾಲದಲ್ಲಿ ತೀವ್ರವಾದ ಭಾಷಾಂಧತೆಯ ರಾಜಕಾರಣದಿಂದ ಮುಂಬೈ ತನ್ನ ಗತ ವೈಭವವನ್ನು ಕಳೆದುಕೊಂಡಂತೆ ಬೆಂಗಳೂರು ತನ್ನ ವೈಭವವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ವಿಪರೀತದ ಕೋಮು ಧ್ರುವೀಕೃತ ರಾಜಕಾರಣ ಬೆಂಗಳೂರಿನ ಉದ್ದಿಮೆಗಳಿಗೆ ಶಾಪವಾಗುವ ಸಾಧ್ಯತೆ ಇದೆ.
ಹಲಾಲ್ ವಿರೋಧಿ ಅಭಿಯಾನ, ಮುಸ್ಲಿಂ ವರ್ತಕರಿಗೆ ಬಹಿಷ್ಕಾರ, ಹಿಜಾಬ್ ವಿರೋಧೀ ಪ್ರತಿಭಟನೆಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಗಂಭೀರವಾಗಿ ಗಮನಿಸುತ್ತಿವೆ ಎಂದು ಹೇಳಲಾಗಿದೆ. ಪರಿಸ್ಥಿತಿ ಹೀಗೇ ಹೋದರೆ, ಅದು ಬೆಂಗಳೂರು ನಗರದ ಅಭಿವೃದ್ಧಿಗೆ ಮಾರಕವಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಶಾಂತಿ ಇಲ್ಲದ ನಗರದಲ್ಲಿ ಎಂತಹ ಉದ್ಯಮ ಕಟ್ಟಬಹುದು ಹೇಳಿ?
ಇತ್ತೀಚೆಗೆ ಬಯೋಟೆಕ್ ಉದ್ಯಮಿ ಕಿರಣ್ ಮಜುಮ್ದಾರ್ ಶಾ ವ್ಯಕ್ತಪಡಿಸಿದ ಕಳವಳವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಧ್ರುವೀಕರಣವನ್ನು ನಿಲ್ಲಿಸಲು ಸಿಎಂ ಬೊಮ್ಮಾಯಿ ಮಧ್ಯಪ್ರವೇಶಿಸುವಂತೆ ಅವರು ಕೋರಿದನ್ನು ಇದೇ ಹಿನ್ನೆಲೆಯಲ್ಲಿ ಇಟ್ಟು ಗಮನಿಸಬೇಕು.
ಆದರೆ, ಮುಂದಿನ ವರ್ಷ ಚುನಾವಣೆಗೆ ಬಿಜೆಪಿಯ ಬತ್ತಲಿಕೆಯಲ್ಲಿ ಕೋಮು ವಿಭಜನೆ ಮಾತ್ರವಲ್ಲದೆ ಬೇರೆ ಯಾವ ಅಸ್ತ್ರವೂ ಉಳಿದಿಲ್ಲ. ಶಾಸಕರನ್ನು ಖರೀದಿಸಿ, ಭರ್ತಿ ಮಾಡಿ ಹೇಗಾದರೂ ಕಷ್ಟಪಟ್ಟು ರಚನೆಯಾದ ಸರ್ಕಾರ, ಅದರಲ್ಲೂ ನಡುವೆ ಸಿಎಂ ಬದಲಾವಣೆ, ಆಂತರಿಕ ಭಿನ್ನಮತ, ದುರ್ಬಲ ರಾಜ್ಯ ನಾಯಕತ್ವ… ಬಿಜೆಪಿ ಬಳಿ ಸರ್ಕಾರ ಒಂದು ಇದೆ ಅಂತ ಬಿಟ್ಟರೆ ಇನ್ನೇನೂ ಇಲ್ಲ. ಅದರಲ್ಲೂ ಮುಂದಿನ ಬಾರಿ ಬಿಜೆಪಿ ಸೋಲುವ ಬಗ್ಗೆ ಆರ್ಎಸ್ಎಸ್ ಗೆ ಮಾಹಿತಿ ಸಿಕ್ಕಿದೆ ಎಂಬ ಸುದ್ದಿಯೂ ರಾಜ್ಯ ರಾಜಕಾರಣದಲ್ಲಿ ಇದೆ. ಮಾತ್ರವಲ್ಲ, 40 % ಕಮಿಷನ್, ಕೊರೋನಾ ಅವ್ಯವಹಾರ ಮೊದಲಾದ ಹಗರಣಗಳು ಸಾಮಾನ್ಯರೆಡೆ ಸರ್ಕಾರಕ್ಕೆ ಒಳ್ಳೆಯ ಹೆಸರನ್ನೇನೂ ತಂದುಕೊಟ್ಟಿಲ್ಲ. ಹಾಗಾಗಿ, ಬಿಜೆಪಿಗೆ ಉತ್ತರ ಪ್ರದೇಶದಲ್ಲಿ, ಗುಜರಾತಿನಲ್ಲಿ ಚಲಾವಣೆ ಆದಂತಹ ತೀವ್ರ ಕೋಮು ವಿಭಜನೆ ಬಿಟ್ಟರೆ ಬೇರೆ ಆಯ್ಕೆಯಿಲ್ಲ.
ಹಾಗಾಗಿ ಹಿಂದೂ-ಮುಸ್ಲಿಂ ವಿಭಜನೆಯನ್ನು ಮುಂದೆ ತಂದು, ಬಹುಸಂಖ್ಯಾತ ಹಿಂದೂಗಳನ್ನು ತುಷ್ಟೀಕರಿಸಿ, ಹಿಂದೂ ವೋಟ್ ಬ್ಯಾಂಕ್ ಭದ್ರಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಹಲಾಲ್ ನಿಷೇಧ ಅಭಿಯಾನದಲ್ಲಿ ತೊಡಗಿರುವ ಬಿಜೆಪಿ ಬೆಂಬಲಿತ ಹಿಂದೂ ಸಂಘಟನೆಗಳಿಗೆ ಸರ್ಕಾರದ ಸಚಿವೆ ಶಶಿಕಲಾ ಜೊಲ್ಲೆ ಅವರೇ ಬಹಿರಂಗವಾಗಿ ಬೆಂಬಲ ನೀಡುವುದರ ಮೂಲಕ ಸರ್ಕಾರದ ನಿಲುವೇನು ಎನ್ನುವುದನ್ನು ಬಹಿರಂಗಪಡಿಸಿದ್ದಾರೆ.
ದಕ್ಷಿಣದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಾಗ ಪಕ್ಷವನ್ನು ಅಧಿಕಾರ ತಂದದ್ದು ಯಡಿಯೂರಪ್ಪ, ಅವರನ್ನು ಮೂಲೆಗುಂಪು ಮಾಡಿಯಾಗಿದೆ. ಈಗ ಹೇಗಾದರೂ ಮತ್ತೆ ಗೆಲ್ಲಲೇ ಬೇಕಾದ ಅನಿವಾರ್ಯತೆ ರಾಜ್ಯದಲ್ಲಿ ಬಿಜೆಪಿಗಿದೆ. ಹಾಗಾಗಿ, ರಾಜ್ಯದಲ್ಲಿ ಅಭಿವೃದ್ಧಿಗೆ ತೊಡಕಾಗುತ್ತದೋ, ಉದ್ಯಮಗಳು ರಾಜ್ಯದಿಂದ ವಿಮುಖಗೊಳ್ಳುತ್ತದೆ, ಇಲ್ಲಿನ ಯುವಜನತೆಗೆ ಉದ್ಯೋಗಗಳು ಇನ್ನಷ್ಟು ಕ್ಷೀಣಿಸುತ್ತದೋ ಎನ್ನುವುದು ಬಿಜೆಪಿಯ ಕಾಳಜಿ ಅಲ್ಲ. ಇದು ಒಟ್ಟಾರೆಯಾಗಿ, ರಾಜ್ಯದ ಅಭಿವೃದ್ಧಿಗೆ ತೀವ್ರ ತೊಡಕಾಗುತ್ತದೆ.
ಮೇಲೆ ಹೇಳಿರುವಂತೆ, ಶಾಂತಿ-ಸಮಾಧಾನ ಇಲ್ಲದ ನಾಡಿನಲ್ಲಿ ಯಾರು ಉದ್ಯಮ ಕಟ್ಟಲು ಬರುತ್ತಾರೆ? ಕನ್ನಡಿಗರು ಇದನ್ನು ಯೋಚಿಸಬೇಕು. ಯಾರದರೂ ಪಾಕಿಸ್ತಾನದಲ್ಲಿ ಬ್ಯುಸಿನೆಸ್ ಆರಂಭಿಸಲು ಹೋದಾರ? ತಮಿಳರ ವಿರುದ್ಧ ಧ್ವೇಷ ರಾಜಕಾರಣ ಮಾಡಿದ ಸಿಂಹಳೀಯ ಶ್ರೀಲಂಕನ್ನರ ಅವಸ್ಥೆಯನ್ನು ನಾವು ಈಗ ಕಣ್ಣಾರೆ ನೋಡುತ್ತಿದ್ದೇವೆ.. ಆಹಾರಕ್ಕೂ ತಾತ್ವಾರ ಅಲ್ಲಿ ಎದುರಾಗಿದೆ. ಇನ್ನು ಅಲ್ಲಿ ಯಾರಾದರೂ ಉದ್ದಿಮೆಗಳನ್ನು ಆರಂಭಿಸೋಕೆ ಹೋಗುತ್ತಾರ? ಅಥವಾ ಜನಾಂಗೀಯ ಧ್ವೇಷದಿಂದ ಉರಿಯುತ್ತಿರುವ ಮ್ಯಾನ್ಮಾರಿನಲ್ಲಿ ಹೊಸ ಉದ್ದಿಮೆಗಳನ್ನು ಆರಂಭಿಸಲು ಸನ್ನದ್ಧರಾಗುತ್ತಾರ? ಇಲ್ಲ.. !
ಅದೇ ದುಬೈಯನ್ನು ನೋಡಿ.. ಅಲ್ಲಿ ಯಾವ ಜನಾಂಗದವರಿಗೂ, ಭಾಷಿಕರಿಗೂ ವರ್ಣಬೇಧ ನೀತಿಯಿಲ್ಲ.. ಹಾಗಾಗಿಯೇ ಅದು ಉದ್ದಿಮೆಗಳನ್ನು ಆಕರ್ಷಿಸುತ್ತಿದೆ. ಬಹುತೇಕ ಮುಂದುವರೆದ ನಗರಗಳೆಲ್ಲವೂ ಹೀಗೆಯೇ.. ಅಲ್ಲಿನ ಶಾಂತಿ ಸಮಾಧಾನವೇ ಅಲ್ಲಿ ಹೊಸ ಹೊಸ ಉದ್ದಿಮೆಗಳು ಬರುವಂತೆ ಪ್ರಚೋದಿಸುತ್ತವೆ. ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಆ ಮೂಲಕ ಕ್ರಮೇಣ ಅಭಿವೃದ್ಧಿಯ ಹಾದಿಗೆ ತೆರೆಯುತ್ತದೆ. ಬೆಂಗಳೂರಿಗೆ ಅಂತಹ ಎಲ್ಲಾ ಸಾಧ್ಯತೆ ಇದೆ, ಆದರೆ, ಹಿಂದುತ್ವ ರಾಜಕಾರಣದ ಸ್ವಯಂಕೃತ ಅಪರಾಧವು ಬೆಂಗಳೂರಿಗೆ ಕಳಂಕವನ್ನು ತಂದಿಟ್ಟಿದೆ.