ಬಿಜೆಪಿಯ ಸಂಸದರೊಬ್ಬರು ಜನಸಂಖ್ಯೆ ನಿಯಂತ್ರಣಕ್ಕಾಗಿ ಮಂಡಿಸಿದ ಖಾಸಗಿ ಮಸೂದೆಯನ್ನು ಕೇಂದ್ರ ಆರೋಗ್ಯ ಸಚಿವ ಮಾನ್ಸುಖ್ ಮಾಂಡವಿಯ ವಿರೋಧಿಸಿದ್ದಾರೆ. ಜನಸಂಖ್ಯೆ ನಿಯಂತ್ರಣಕ್ಕಾಗಿ ಬಲವಂತ ಮಾಡುವ ಬದಲು ಆರೋಗ್ಯ ಇಲಾಖೆಯು ಈ ಕುರಿತಾಗಿ ಜಾಗೃತಿ ಹಾಗೂ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮಾಂಡವಿಯ ಹೇಳಿದ್ದಾರೆ.
ದೇಶದಲ್ಲಿ ಎರಡು ಮಕ್ಕಳ ನೀತಿಯನ್ನು ಜಾರಿ ಮಾಡಬೇಕು, ತಪ್ಪಿದಲ್ಲಿ ಕಠಿಣ ಶಿಕ್ಷೆ ವಿಧಿಸುವ ಮಸೂದೆಯನ್ನು 2019ರಲ್ಲಿ ಸಂಸದ ರಾಕೇಶ್ ಸಿನ್ಹಾ ಪರಿಚಯಿಸಿದ್ದರು. ಮಾಂಡವಿಯ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಶುಕ್ರವಾರದಂದು ಮಸೂದೆಯನ್ನು ಹಿಂಪಡೆಯಲಾಗಿದೆ.
ರಾಷ್ಟ್ರೀಯ ಕುಟುಂಬ ಸ್ವಾಸ್ಥ್ಯ ಸಮೀಕ್ಷೆಯ (NFHS) ವರದಿಯನ್ನು ಆಧಾರಿಸಿ ಭಾರತದ ಜನಸಂಖ್ಯಾ ಪ್ರಮಾಣ ನಿಗದಿತ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದನ್ನು ಮಾಂಡವಿಯ ಸದನದಲ್ಲಿ ವಿವರಿಸಿದರು.
“NFHS ಹಾಗೂ ಜನಗಣತಿಯು ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತಿರುವುದನ್ನು ತೋರಿಸುತ್ತಿದೆ. 1971ರಲ್ಲಿ ದೇಶದ ಜನಸಂಖ್ಯೆ ಸರಾಸರಿ 2.20ರಷ್ಟು ಏರಿಕೆಯಾಗುತ್ತಿತ್ತು. 1991ರಲ್ಲಿ ಈ ಸಂಖ್ಯೆ 2.14ಕ್ಕೆ ಇಳಿಕೆಯಾಯಿತು. 2001ರಲ್ಲಿ 1.97 ಹಾಗೂ 2011ರಲ್ಲಿ 1.64ರಷ್ಟು ಜನಸಂಖ್ಯಾ ಪ್ರಮಾಣ ಇಳಿಕೆ ಕಂಡಿದೆ. 1960-1980ರವರೆಗಿನ ಜನಸಂಖ್ಯೆ ಏರಿಕೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇದೊಂದು ಉತ್ತಮ ಚಿಹ್ನೆ,” ಎಂದು ಮಾಂಡವಿಯ ಹೇಳಿದ್ದಾರೆ.
ದೇಶದಲ್ಲಿ ಹದಿಹರೆಯ ಯುವತಿಯರ ಗರ್ಭಧರಿಸುವ ಪ್ರಮಾಣ ಶೇ. 6.8ರಷ್ಟು ಇಳಿಕೆಯಾಗಿದೆ. ಬಾಲ್ಯವಿವಾಹ ಪ್ರಮಾಣ ಶೇ. 23.3ರಷ್ಟು ಇಳಿಕೆ ಕಂಡಿದೆ. ಇದರರ್ಥ, ಯಾವುದೇ ಬಲವಂತದ ನಿಯಮಗಳನ್ನು ಹೇರದೆ ಸರ್ಕಾರದ ನೀತಿಗಳಿಂದ ಜನಸಂಖ್ಯೆಯನ್ನು ನಿಯಂತ್ರಿಸಲಾಗುತ್ತಿದೆ. ಹೀಗಾಗಿ, ಸದನದ ಮುಂದಿಡಲಾದ ಮಸೂದೆಯನ್ನು ಹಿಂಪಡೆಯಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ, ಎಂದು ಸಚಿವರು ಹೇಳಿದರು.
ಮಸೂದೆಯನ್ನು ವಾಪಸ್ ಪಡೆಯುವ ವೇಳೆ ಮಾತನಾಡಿದ ರಾಕೇಶ್ ಸಿನ್ಹಾ, ಸಾಂವಿಧಾನಿಕವಾಗಿ ಜನಸಂಖ್ಯೆಯನ್ನು ನಿಯಂತ್ರಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಯಾವುದೇ ಜಾತಿ, ಧರ್ಮ, ಭಾಷೆಗೂ ಮೀರಿ ಜನಸಂಖ್ಯೆಯನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯ. ನಮಗೆ ಇನ್ನೊಂದು ತುರ್ತುಪರಿಸ್ಥಿತಿಯ ಅಗತ್ಯವಿಲ್ಲ, ಎಂದು ಹೇಳಿದರು.

ಮಸೂದೆಯನ್ನು ಹಿಂಪಡೆಯುವ ಮುನ್ನ ಮಸೂದೆಯ ಪರವಾಗಿ ಬಿಜೆಪಿ ಸಂಸದರಾದ ಕೆ ಜೆ ಅಲ್ಫೋನ್ಸ್, ವಿಜಯ್ ಪಾಲ್ ಸಿಂಗ್ ತೋಮರ್ ಮತ್ತು ಹರ್ಷವರ್ಧನ್ ಸಿಂಗ್ ಅವರು ಮಾತನಾಡಿದರು. ದೇಶದಲ್ಲಿ ಒಂದು ನಿರ್ದಿಷ್ಟ ಸಮುದಾಯದ ಜನಸಂಖ್ಯೆ ಹೆಚ್ಚುತ್ತಿರುವ ಕುರಿತು ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಇನ್ನೆರಡು ತಲೆಮಾರುಗಳವರೆಗೆ ಜನಸಂಖ್ಯೆಯು ಸ್ಥಿರವಾಗಲಿದೆ. ಆ ಬಳಿಕ ಜನಸಂಖ್ಯಾ ಪ್ರಮಾಣವು ಇಳಿಕೆಯನ್ನು ಕಾಣಲಿದೆ. ಈ ಮಸೂದೆಯು ಯಾವುದೇ ವೈಜ್ಞಾನಿಕ ಆಧಾರದ ಮೇಲೆ ಮಂಡಿಸಲಾಗಿಲ್ಲ. ಇದು ಸಂಪೂರ್ಣವಾಗಿ ಊಹೆಯಿಂದ ಕೂಡಿದ ಮಸೂದೆಯಾಗಿದೆ, ಎಂದರು.
ಮಸೂದೆಯನ್ನು ವಿರೋಧಿಸಿದ ಟಿಎಂಸಿ ಸಂಸದ ಜವಾಹರ್ ಸಿರ್ಕರ್, ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುವುದು ಜನಸಂಖ್ಯಾ ನಿಯಂತ್ರಣಕ್ಕಿರುವ ಉತ್ತಮ ಉಪಾಯ. ಇದರ ಬದಲು ಕಠಿಣ ನಿಯಮಗಳನ್ನು ಜಾರಿಗೆ ತರಲು ಹೋದರೆ, ಅವುಗಳ ದುರ್ಬಳಕೆಯೇ ಹೆಚ್ಚಾಗುತ್ತದೆ ವಿನಃ ಸದ್ಬಳಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.