ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಜಾತ್ರೆ ಹಾಗೂ ಧಾರ್ಮಿಕ ಉತ್ಸವಗಳ ವೇಳೆ ಹಿಂದೂಯೇತರ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬಾರದೆನ್ನುವ ವಿಚಾರದಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಸುತ್ತೋಲೆಯೊಂದನ್ನು ಮುಸ್ಲಿಂ ಮಸೀದಿಗಳ ಧಾರ್ಮಿಕ ಮುಖಂಡರು ಹೊರಡಿಸಿದ್ದಾರೆ.
ಜಾಮೀಯಾ ಮಸೀದಿಯ ಮುಖ್ಯ ಧಾರ್ಮಿಕ ಗುರುಗಳಾದ ಮೌಲಾನಾ ಡಾ.ಮಸೂದ್ ಇಮ್ರಾನ್ ಅವರು ಎಲ್ಲಾ ಮಸೀದಿಗಳಿಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದು ಸುತ್ತೋಲೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಅಡ್ಡಿಪಡಿಸದಂತೆ ಸೂಚಿಸಲಾಗಿದೆ.
ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿಗಳ ವ್ಯಾಪ್ತಿಯಲ್ಲಿ ನೂರಾರು ಹಿಂದು ಬಾಂಧವರು ಹಣ್ಣು-ಬಟ್ಟೆ ಸೇರಿದಂತೆ ವಿವಿಧ ರೀತಿಯ ವ್ಯಾಪಾರ ಮಾಡುತ್ತಾರೆ.ಅವರ ವ್ಯಾಪಾರಕ್ಕೆ ಧಕ್ಕೆ ತರುವ ರೀತಿಯಲ್ಲಿ ಯಾರು ವರ್ತಿಸಸಬಾರದು. ಅವರು ಎಂದಿನಂತೆ ವ್ಯಾಪಾರ ಮಾಡಲು ಅವಕಾಶ ಹಾಗೂ ಸಹಕಾರ ನೀಡಬೇಕೆನ್ನುವ ಸಂಗತಿಗಳು ಅಡಕವಾಗಿವೆ.
ಹಿಂದು ದೇವಸ್ಥಾನಗಳ ವ್ಯಾಪ್ತಿಯಲ್ಲಿ ಹಿಂದುಯೇತರ ವ್ಯಾಪಾರಿಗಳ ಅವಕಾಶ ನಿರಾಕರಿಸುವಂತ ನಿರ್ದಾರ ಕೈಗೊಳ್ಳಬೇಕೆಂದು ಬೊಬ್ಬೆ ಹೊಡೆಯುತ್ತಿರುವ ಕೆಲ ಹಿಂದು ಧಾರ್ಮಿಕ ಸಂಘಟನೆಗಳ ನಡುವೆ ಮುಸ್ಲಿಂ ಧಾರ್ಮಿಕ ಮುಖಂಡರು ಹೊರಡಿಸಿರುವ ಈ ಆದೇಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.