ಇತ್ತೀಚೆಗಷ್ಟೇ ನ್ಯಾಯಾಲಯದಲ್ಲಿ ಮಹಿಳೆಯರ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಸಿಜೆಐ ಆಗ್ರಹಿಸಿದ್ದರು. ಇದೀಗ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ ಅವರು ಸಹ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದಿದ್ದಾರೆ. ಅದೇ ಸಮಯದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಮತದಾನ ಮಾಡಲು ಬರುವ ಮಹಿಳೆಯರ ಸಂಖ್ಯೆಯಲ್ಲಿನ ಹೆಚ್ಚಳವಾಗಿರುವುದನ್ನೂ ಸೂಚಿಸಿದ್ದಾರೆ. ಅಲ್ಲದೆ ಸಂಸತ್ತಿನಲ್ಲಿ ಅಡಚಣೆ, ಪ್ರತಿಭಟನೆಗಳಿಂದಾಗಿ ಸಮಯ ವ್ಯರ್ಥವಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
ಸಂಸದ್ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಸುಶೀಲ್ ಚಂದ್ರ ಅವರು ಮೊದಲ ಲೋಕಸಭೆಯಲ್ಲಿ 15 ಮಹಿಳಾ ಸಂಸದರಿದ್ದರು ಮತ್ತು 17ನೇ ಲೋಕಸಭೆಯಲ್ಲಿ 78 ಮಂದಿ ಸಂಸದರಿದ್ದಾರೆ ಎಂದಿದ್ದಾರೆ. “ಆದರೆ ಈ ಪ್ರಗತಿ ಇನ್ನೂ ನಿಧಾನವಾಗಿಯೇ ಇದೆ. ಸಂಸತ್ತು ಎಲ್ಲರನ್ನೂ ಒಳಗೊಳ್ಳಬೇಕು” ಎಂದು ಅವರು ಹೇಳಿದರು.
ಸಂವಿಧಾನವು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದ ಮೀಸಲಾತಿಯನ್ನು ಖಾತರಿಪಡಿಸುತ್ತದೆ. ಅಲ್ಲದೆ ಅನೇಕ ತಳಮಟ್ಟದ ಮಹಿಳಾ ನಾಯಕರು ತಮ್ಮ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದಾರೆ ಮತ್ತು ಸಮುದಾಯಗಳಲ್ಲಿ ಗೋಚರ ಬದಲಾವಣೆಗಳನ್ನು ತಂದಿದ್ದಾರೆ ಎಂದು ಗಮನ ಸೆಳೆದಿರುವ CEC ಅವರು ಶಾಸಕರು ಮತ್ತು ಜನರ ನಡುವೆ ಸಂಪರ್ಕವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. COVID-19 ಸಾಂಕ್ರಾಮಿಕವು ದೈಹಿಕ ಪ್ರಚಾರಕ್ಕೆ ಕಡಿವಾಣ ಹಾಕಿದ ನಂತರ ಕೆಲವು ನಾಯಕರು ಸುದೀರ್ಘ ಅಂತರದ ನಂತರ ತಮ್ಮ ಮನೆ ಬಾಗಿಲಿಗೆ ಬಂದರು ಎಂದು ಮತದಾರರು ಹೇಳಿದ್ದನ್ನೂ ತಮ್ಮ ಭಾಷಣದಲ್ಲಿ ನೆನಪಿಸಿಕೊಂಡಿದ್ದಾರೆ.
ಸಂಸತ್ತಿನ ಕಲಾಪದಲ್ಲಿನ ಅಡಚಣೆಗಳ ಕುರಿತು ಮಾತನಾಡಿದ ಸುಶೀಲ್ ಚಂದ್ರ ಅವರು, ಪ್ರಬುದ್ಧ ವಾದಗಳು, ಚರ್ಚೆಗಳು ಮತ್ತು ಭಾಷಣಗಳು ದೃಢವಾದ ಸಂಸತ್ತಿನ ಮಾಪನಗಳಾಗಿದ್ದು, ಆಗಾಗ್ಗೆ ಕಲಾಪಕ್ಕೆ ಅಡ್ಡಿಪಡಿಸುವುದು, ವಾಕ್‌ಔಟ್ ಮಾಡುವುದು ಮತ್ತು ಉಪವಾಸ ಸತ್ಯಾಗ್ರಹ ಮಾಡುವುದು ಸರಿಯಲ್ಲ ಎಂದಿದ್ದಾರೆ. ಅಡಚಣೆಗಳಿಂದಾಗಿ ಸಂಸತ್ತಿನ ಸಮಯ ವ್ಯರ್ಥವಾಗುವುದು ಕಳೆದ ಕೆಲವು ವರ್ಷಗಳಲ್ಲಿ ನಾಟಕೀಯ ಹೆಚ್ಚಳವನ್ನು ಕಂಡಿದೆ. ಕೆಲವು ಅವಧಿಗಳು ಸಂಪೂರ್ಣ “ವಾಶ್ ಔಟ್” ಗೆ ಸಾಕ್ಷಿಯಾಗಿದೆ. ಇದು ದೃಢವಾದ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದರು.

“ಸಂಸತ್‌ನಲ್ಲಿ ಭಾಗವಹಿಸುವುದು, ಪ್ರಶ್ನೋತ್ತರ ಅವಧಿ ಮತ್ತು ಶೂನ್ಯ ವೇಳೆಯ ಮೂಲಕ ನಿರ್ಣಾಯಕ ಪ್ರಾಮುಖ್ಯತೆಯ ವಿಷಯಗಳನ್ನು ಪ್ರಸ್ತಾಪಿಸುವುದು ಸ್ಥಾಪಿತ ಸಂಸದೀಯ ಅಭ್ಯಾಸಗಳು. ಈ ಅಮೂಲ್ಯ ಅವಕಾಶವನ್ನು ನಾಟಕೀಯವಾಗಿ ಅಥವಾ ಘೋಷಣೆ ಕೂಗಿ ಅಥವಾ ಸದನದ ಬಾವಿಗೆ ನುಗ್ಗಿ ವ್ಯರ್ಥ ಮಾಡಬಾರದು” ಎಂದು ಸಿಇಸಿ ಸಲಹೆ ನೀಡಿದ್ದಾರೆ.
ಸಂಸದೀಯ ಸ್ಥಾಯಿ ಸಮಿತಿಗಳ ಪಾತ್ರದ ಕುರಿತೂ ಮಾತನಾಡಿದ ಅವರು ವಿವಾದಾತ್ಮಕ ವಿಷಯಗಳು ಅಥವಾ ವಿವಾದಾತ್ಮಕ ಶಾಸನಗಳ ಬಗ್ಗೆ ಪಕ್ಷಗಳ ನಡುವೆ ಒಮ್ಮತ ಮೂಡಿಸಲು ಸ್ಥಾಯಿ ಸಮಿತಿಯನ್ನು ವೇದಿಕೆಯಾಗಿ ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಸಮಿತಿ ಸಭೆಗಳಲ್ಲೂ ಹಾಜರಾತಿ ಕಡಿಮೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು, ಸಂಸದರು ಈ ಚರ್ಚೆಗಳಲ್ಲಿ ಉತ್ಸಾಹದಿಂದ ಮತ್ತು ಪಕ್ಷಾತೀತವಾಗಿ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಡೇಟಾವನ್ನು ಹಂಚಿಕೊಂಡಿರುವ ಸಿಇಸಿ ಅವರು ಈ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಅಂದರೆ ಗೋವಾ, ಉತ್ತರಾಖಂಡ, ಮಣಿಪುರ ಮತ್ತು ಉತ್ತರ ಪ್ರದೇಶಗಳಲ್ಲಿ ಮಹಿಳಾ ಮತದಾರರ ಮತದಾನವು ಪುರುಷ ಮತದಾರರ ಮತದಾನದ ಪ್ರಮಾಣವನ್ನು ಮೀರಿದೆ ಮತ್ತು ಇದು ಪಂಜಾಬ್‌ನಲ್ಲಿ ಸರಿಸುಮಾರು ಸಮಾನವಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಐದು ರಾಜ್ಯಗಳಲ್ಲಿ ಲಿಂಗಾನುಪಾತ ಹೆಚ್ಚಾಗಿದೆ. ಉತ್ತರ ಪ್ರದೇಶವೊಂದರಲ್ಲೇ ಇದು 29 ಅಂಕಗಳಷ್ಟು ಏರಿಕೆಯಾಗಿದೆ ಎಂದು ಚಂದ್ರು ಹೇಳಿದರು.
ಭಾರತೀಯ ಚುನಾವಣಾ ವ್ಯವಸ್ಥೆಯ ಬಗ್ಗೆಯೂ ಒಂದು ಸ್ಥೂಲ ಅವಲೋಕನವನ್ನು ಮುಂದಿಟ್ಟ ಅವರು, ದೇಶದಲ್ಲಿ 1951 ರಲ್ಲಿ ಮೊದಲ ಲೋಕಸಭೆ ಚುನಾವಣೆಯನ್ನು ನಡೆಸಿದಾಗ 17.3 ಕೋಟಿ ಮತದಾರರಿದ್ದರು ಮತ್ತು ಮತದಾನದ ಪ್ರಮಾಣವು ಶೇಕಡಾ 45.6 ರಷ್ಟಿತ್ತು ಮತ್ತು 2019 ರ ಸಂಸತ್ತಿನ ಚುನಾವಣೆಯಲ್ಲಿ, ಮತದಾರರ ಸಂಖ್ಯೆ ಸುಮಾರು 91.2 ಕೋಟಿಯಷ್ಟಿತ್ತು ಮತ್ತು ಮತದಾನದ ಪ್ರಮಾಣವು 66.4 ಪ್ರತಿಶತದಷ್ಟಿತ್ತು ಎಂದಿದ್ದಾರೆ. “ಪ್ರಸ್ತುತ, 95.3 ಕೋಟಿಗೂ ಹೆಚ್ಚು ಮತದಾರರಿದ್ದು, ಅವರಲ್ಲಿ 49.04 ಕೋಟಿ ಪುರುಷರು ಮತ್ತು 46.09 ಕೋಟಿ ಮಹಿಳೆಯರು” ಎಂದು ಸುಶೀಲ್ ಚಂದ್ರ ಹೇಳಿದರು.








