ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿ ಇದ್ದಂತಹ ತೆಲುಗು ದೇಶಂ ಪಾರ್ಟಿಯು ಇಸ್ರೇಲ್ ಮೂಲದ ಕುಖ್ಯಾತ ಪೆಗಾಸಸ್ ತಂತ್ರಾಂಶವನ್ನು ಖರೀದಿಸಿ ಅದನ್ನು ಬಳಸಿಕೊಂಡಿದೆಯೇ ಎಂಬುದರ ಕುರಿತು ಕೂಲಂಕುಷ ತನಿಖೆ ನಡೆಸುವ ಸಲುವಾಗಿ ಸಮಿತಿಯನ್ನು ರಚಿಸಲು ಆಂಧ್ರ ವಿಧಾನ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿಯ ಶಾಸಕರು ಪೆಗಾಸಸ್ ಕುರಿತಾಗಿ ಸದನದಲ್ಲಿ ದನಿ ಎತ್ತಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚಿಗೆ ಈ ಕುರಿತು ಹೇಳಿಕೆ ನೀಡಿದ್ದರು. ಟಿಡಿಪಿ ನೇತೃತ್ವದ ಸರ್ಕಾರ ಅಸ್ಥಿತ್ವದಲ್ಲಿ ಇದ್ದಾಗ ಪೆಗಾಸಸ್ ತಂತ್ರಾಂಶವನ್ನು ಬಳಸಲಾಗಿತ್ತು. ರೂ.25 ಕೋಟಿಗೆ ತಮ್ಮೊಂದಿಗೂ ವ್ಯವಹಾರ ಕುದುರಿಸುವ ಪ್ರಯತ್ನ ನಡೆಸಲಾಗಿತ್ತು, ಎಂದು ಬ್ಯಾನರ್ಜಿ ಹೇಳಿದ್ದರು.
ಈ ಕುರಿತಾಗಿ ಮಾತನಾಡಿರುವ ಆಂಧ್ರದ ವಿತ್ತ ಸಚಿವ ಬಿ ರಾಜೇಂದ್ರನಾಥ್,“ಹಿರಿಯ ನಾಯಕಿ ಹಾಗೂ ಮುಖ್ಯಮಂತ್ರಿಯೂ ಆಗಿರುವ ಮಮತಾ ಬ್ಯಾನರ್ಜಿ ಸುಖಾಸುಮ್ಮನೆ ಆರೋಪ ಹೊರೆಸುವವರಲ್ಲ.2014 ರಿಂದ 2019ರ ವರೆಗಿನ ಅವಧಿಯಲ್ಲಿ ಟಿಡಿಪಿಯು ಪೆಗಾಸಸ್ ಅನ್ನು ಬಳಸಿರುವ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಕೇವಲ ವಿರೋಧ ಪಕ್ಷದ ನಾಯಕರಷ್ಟೇ ಅಲ್ಲದೇ, ಎಲ್ಲಾ ತರಹದ ಮತದಾರರ ಮೇಲೂ ಕಣ್ಗಾವಲಿಟ್ಟಿರುವ ಸಾಧ್ಯತೆಗಳಿವೆ,” ಎಂದು ಹೇಳಿದ್ದಾರೆ.
2017ರಲ್ಲಿ ಅಂದಿನ ರಾಜ್ಯ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಎ ಬಿ ವೆಂಕಟೇಶ್ವರ ರಾವ್ ಅವರು, ತಮ್ಮ ಮಗನ ಕಂಪೆನಿಯ ಮೂಲಕ ಇಸ್ರೇಲ್ ಮೂಲದ ಕಂಪೆನಿಯಿಂದ ‘ಡ್ರೋನ್ ಕಣ್ಗಾವಲು’ ವ್ಯವಸ್ಥೆಯನ್ನು ಪರಿಚಯಿಸಲು ಪ್ರಯತ್ನಪಟ್ಟಿದ್ದರು. ಇದಕ್ಕಾಗಿ ಎರಡು ಬಾರಿ ಇಸ್ರೇಲ್’ಗೆ ಭೇಟಿ ನೀಡಿದ್ದರು ಕೂಡಾ. ಟಿಡಿಪಿ ಸರ್ಕಾರ ಕಣ್ಗಾವಲು ವ್ಯವಸ್ಥೆಯ ಪರಿಕರಿಗಳ ಖರೀದಿಗೆ ಅನುದಾನವನ್ನು ನೀಡಿತ್ತು. ನಂತರ ಏಕಾಏಕಿ ಯೋಜನೆಯನ್ನು ಕೈಬಿಡಲಾಯಿತು, ಎಂದಿದ್ದಾರೆ.
ಈ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿರುವ ವೆಂಕಟೇಶ್ವರ ರಾವ್,2019ರ ಮೇ ತಿಂಗಳವರೆಗೆ ಯಾವುದೇ ಸರ್ಕಾರಿ ಏಜೆನ್ಸಿಗಳು ಪೆಗಾಸಸ್ ಖರೀದಿಸಿಲ್ಲ ಎಂದು ನಾನು ದೃಢವಾಗಿ ಹೇಳುತ್ತೇನೆ. ಯಾವುದೇ ಫೋನ್ ಟ್ಯಾಪಿಂಗ್ ಕೂಡಾ ನಡೆದಿಲ್ಲ. ಆದರೆ, ಟಿಡಿಪಿ ಅಧೀಕಾರ ಕಳೆದುಕೊಂಡ ಬಳಿಕ ಏನು ನಡೆದಿದೆ ಎಂದು ನನಗೆ ತಿಳಿದಿಲ್ಲ, ಎಂದಿದ್ದಾರೆ.
ಆಂಧ್ರ ವಿಧಾನಸಭಾ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಸದಸ್ಯರ ಮನವಿಯನ್ನು ಪುರಸ್ಕರಿಸಿ ಇನ್ನೆರಡು ದಿನಗಳಲ್ಲಿ ತನಿಖಾ ಸಮಿತಿ ರಚಿಸಿ ಕೂಲಂಕುಷವಾದ ತನಿಖೆಯನ್ನು ನಡೆಸಲು ಸೂಚಿಸಿದ್ದಾರೆ.
ಟಿಡಿಪಿ ಸರ್ಕಾರವಿದ್ದಾಗ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಲೋಕೇಶ್ ಅವರು ಆರೋಪಗಳ ಕುರಿತು ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿಯವರಿಗೆ ಯಾರೋ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಒಂದು ವೇಳೆ ನಾವು ಪೆಗಾಸಸ್ ಬಳಸಿದ್ದಿದ್ದರೆ 2019ರಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಪಕ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ, ಎಂದು ಹೇಳಿದ್ದಾರೆ.
ನಾಲ್ವರು ಟಿಡಿಪಿ ಸದಸ್ಯರ ಅಮಾನತು
ಆಂಧ್ರ ಪ್ರದೇಶ ವಿಧಾನಸಭೆ ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿಯ ನಾಲ್ವರು ಸದಸ್ಯರನ್ನು ಬಜೆಟ್ ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಜಂಗಾರೆಡ್ಡಿಗುಡೆಂ ಪಟ್ಟಣದಲ್ಲಿ ಅಕ್ರಮ ಮದ್ಯ ಸೇವನೆಯಿಂದ ಸಾವುಗಳು ಸಂಭವಿಸಿವೆ ಎಂಬ ವಿಷಯದ ಚರ್ಚೆಗೆ ಒತ್ತಾಯಿಸಿ ಟಿಡಿಪಿ ಸದಸ್ಯರು ಸದನದಲ್ಲಿ ಗದ್ದಲ ಎಬ್ಬಿಸಿದರು. ಆಗಾಗಿ ಅಶೋಕ್ ಬೆಂದಾಲಂ, ವೆಲಗಪುಡಿ ರಾಮಕೃಷ್ಣ ಬಾಬು, ಮಂಟೆನಾ ರಾಮರಾಜು ಮತ್ತು ಅನಗಣಿ ಸತ್ಯ ಪ್ರಸಾದ್ ಈ ನಾಲ್ವರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ.
ತಮ್ಮ ಅಶಿಸ್ತಿನ ವರ್ತನೆಯ ಮೂಲಕ ಸದನಕ್ಕೆ ಅಪಖ್ಯಾತಿ ತಂದ ನಾಲ್ಕು ಸದಸ್ಯರನ್ನು ಹೆಸರಿಸಿ, ಅಧಿವೇಶನದ ಮುಂದಿನ ಅವಧಿಯಲ್ಲಿ ಪಾಲ್ಗೊಳ್ಳದಿರುವಂತೆ ಆದೇಶಿಸಿದ್ಧಾರೆ.