ರಾಜ್ಯ ಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ಮೇಲೆ ಗಂಭೀರ ಅರೋಪವೊಂದನ್ನು ಮಾಡಿದ್ದಾರೆ. ಪಂಚರಾಜ್ಯ ಚುನಾವಣೆ, ಉಕ್ರೇನ್ – ರಷ್ಯಾ ಯುದ್ಧ ಈ ಬೆನ್ನಲ್ಲೇ ದೇಶದಲ್ಲಿ ಮತ್ತೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಲಿ ಎಂಬ ಚರ್ಚೆಗಳು ಬಲು ಜೋರಾಗೇ ಶುರುವಾಗಿದೆ. ಈತನ್ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೈಲ ಬೆಲೆ ವಿಚಾರದಲ್ಲಿ ಮೋದಿ ಸರ್ಕಾರದ ಮೇಲೆ ಹರಿಹಾಯ್ದಿದ್ದು, ತೈಲ ಬೆಲೆ ಏರಿಕೆ ಮಾಡುವ ಮೂಲಕ ಬಡವರನ್ನು ಲೂಟಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಇಂಧನ ಬೆಲೆ ಏರಿಸಿ ಮೋದಿ ಸರ್ಕಾರ 10 ಸಾವಿರ ಕೋಟಿ ಲೂಟಿ : ಖರ್ಗೆ ಆರೋಪ!
ಇಂಧನ ಬೆಲೆ ಹೆಚ್ಚಿಸಿ, ಬಡವರನ್ನು ಲೂಟಿ ಮಾಡುವ ಮೂಲಕ ಮೋದಿ ಸರ್ಕಾರ 10 ಸಾವಿರ ಕೋಟಿ ರೂಪಾಯಿ ಗಳಿಸುತ್ತಿದೆ. ಬೆಲೆ ಏರಲು ಉಕ್ರೇನ್-ರಷ್ಯಾ ಎಂದು ಹಲವರು ಹೇಳುತ್ತಾರೆ. ಆದರೆ ಇಂಧನ ಸಚಿವಾಲಯದ ಪ್ರಕಾರ ಭಾರತ 1% ನಷ್ಟೂ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿಲ್ಲ ಎಂದು ರಾಜ್ಯ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದಿನ ತೈಲ ಬೆಲೆ ನೋಡುವುದಾದರೆ, ಪೆಟ್ರೋಲ್ಗೆ 101.42 ರೂ. ಇದ್ದರೆ ಡಿಸೇಲ್ ಗೆ 85.80 ರೂ. ಇದೆ. ನಿನ್ನೆಗಿಂತ ಇಂದು 0.84 ಪೈಸೆ ಪೆಟ್ರೋಲ್ಗೆ ಹಾಗೂ 0.79 ಪೈಸೆ ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಮೂರು ತಿಂಗಳ ಬಳಿಕ ಇದೇ ಮೊದಲ ಬಾರಿಗೆ 80 ಪೈಸೆಯಷ್ಟು ತೈಲ ಬೆಲೆಯಲ್ಲಿ ಇದೀಗ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕೂ ಮೀರಿ ತೈಲ ಬೆಲೆ ಏರಿಕೆಯಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

ಕರ್ನಾಟಕದ ಮಟ್ಟಿಗೆ ಒಟ್ಟು 47 ರೂಪಾಯಿ ತೆರಿಗೆ ಹೇರಲಾಗುತ್ತಿದೆ. 48.23 ರೂಪಾಯಿ ಕನಿಷ್ಠ ತೈಲ ಬೆಲೆ. ಇದರ ಹೊರತಾಗಿ 3.5 ರೂ. ಡೀಲರ್ ಕಮಿಷನ್ ಸೇರಿದಂತೆ ಕೇಂದ್ರ ಸರ್ಕಾರ 27.90 ರೂಪಾಯಿ ಹಾಗೂ ರಾಜ್ಯ ಸರ್ಕಾರ 20.62 ರೂಪಾಯಿ ತೆರಿಗೆ ಹಾಕುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ತೆರಿಗೆ ವಿನಾಯ್ತಿ ನೀಡಿ, 60 ರೂಪಾಯಿಯಲ್ಲಿ ಸಾರ್ವಜನಿಕರಿಗೆ ಪೆಟ್ರೋಲ್ ಹಾಗೂ ಡಿಸೇಲ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ಇದೀಗ ಮಲ್ಲಿಕಾರ್ಜುನ ಖರ್ಗೆ ಮಾಡಿರುವ ಆರೋಪ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಒಂದಂತು ನಿಜ. ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ.





