ಮೆಟ್ರೋ ಸೇವೆ ಉದ್ಘಾಟಿಸಲು ಹಾಗೂ ಇತರ ಯೋಜನೆಗಳನ್ನು ಅನಾವರಣಗೊಳಿಸಲು ರವಿವಾರ ಪುಣೆಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಎನ್‌ಸಿಪಿ ಹಿರಿಯ ನಾಯಕ ಶರದ್ ಪವಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ಅವರು ಉದ್ಘಾಟಿಸಲಿರುವ ಮೆಟ್ರೋ ಸೇವೆಯ ಕೆಲಸ ಅಪೂರ್ಣವಾಗಿದೆ ಎಂದು ಹೇಳಿದ ಪವಾರ್, ಈ ಸಂದರ್ಭ ಯುದ್ಧಗ್ರಸ್ತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸುವತ್ತ ಹೆಚ್ಚು ಗಮನ ಹರಿಸಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಪವಾರ್, ‘‘ಪುಣೆಯಲ್ಲಿ ಮುಖ್ಯ ಯೋಜನೆಗಳು ಅಪೂರ್ಣವಾಗಿದೆ. ಅದರಲ್ಲಿ ಪ್ರಮುಖವಾದುದನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದಾರೆ. ಇದಕ್ಕಿಂತ ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ರಕ್ಷಿಸುವುದು ಹೆಚ್ಚು ಮುಖ್ಯವಾದುದು. ಇದರ ಬಗ್ಗೆ ಕೇಂದ್ರದ ಆಡಳಿತಾರೂಢ ಪಕ್ಷ ಗಂಭೀರವಾಗಿ ಚಿಂತಿಸಬೇಕು ಎಂಬುದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಸಂಕಷ್ಟದ ಕುರಿತು ಮಾತನಾಡಿದ ಪವಾರ್, ರಶ್ಯ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ಹಲವು ವಿದ್ಯಾರ್ಥಿಗಳು ಸಂತ್ರಸ್ತರಾಗಿದ್ದಾರೆ, ಅಲ್ಲಿ ಸಿಲುಕಿದ ವಿದ್ಯಾರ್ಥಿಗಳೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ. ಉಕ್ರೇನ್ ಗಡಿ ದಾಟುವಂತೆ ರಾಯಭಾರ ಕಚೇರಿ ಅವರಿಗೆ ತಿಳಿಸಿದೆ. ಅದು ವಿದ್ಯಾರ್ಥಿಗಳು ಇರುವ ಸ್ಥಳದಿಂದ 5 ಗಂಟೆ ಕಾಲ್ನಡಿಗೆಯ ದೂರದಲ್ಲಿದೆ ಎಂದು ತಿಳಿಸಿದ್ದಾರೆ.
‘ವಿದ್ಯಾರ್ಥಿಗಳು ನಡೆಯಲು ಸಿದ್ಧ. ಆದರೆ, ತೀವ್ರ ಚಳಿ, ಬಾಂಬ್, ಗುಂಡಿನ ದಾಳಿ ತೀವ್ರ ಆತಂಕಕಾರಿ ವಿಚಾರ, ಅಲ್ಲಿ ಭಯಗ್ರಸ್ತ ವಾತಾವಾರಣ ಇದೆ. ಆಡಳಿತಾರೂಢ ಪಕ್ಷ ಈ ಬಗ್ಗೆ ಗಮನಹರಿಸೇಕು. ಪ್ರಧಾನಿ ಅವರು ಅಪೂರ್ಣಗೊಂಡಿರುವ ಪ್ರಮುಖ ಯೋಜನೆಯನ್ನು ಉದ್ಘಾಟಿಸುತ್ತಿದ್ದಾರೆ. ಆದರೆ, ಇದಕ್ಕಿಂತ ಉಕ್ರೇನಿನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವುದು ಬಹಳ ಮುಖ್ಯವಾದುದು’ ಎಂದು ಶರದ್ ಪವಾರ್ ಹೇಳಿದ್ದಾರೆ.
ರಷ್ಯಾದ ಆಕ್ರಮಣದ ವಿರುದ್ಧ ಭಾರತದ ನಿಲುವಿನಿಂದ ಉಕ್ರೇನಿಯನ್ನರು ಸಂತೋಷವಾಗಿಲ್ಲ, ಇದರಿಂದ ಈ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಉಕ್ರೇನ್‌ನ ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ ಎಂದು ಪವಾರ್ ಹೇಳಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ, ಮೆಟ್ರೋ ಅಧಿಕಾರಿಗಳು ಪ್ರಧಾನಿ ಮೋದಿ ಅವರು ಉದ್ಘಾಟಿಸುವ ಮಾರ್ಗವನ್ನು ನನಗೆ ತೋರಿಸಿದರು. ನಾನು ಸುಮಾರು ಒಂದು ತಿಂಗಳ ಹಿಂದೆ ಇದೇ ಮಾರ್ಗದಲ್ಲಿ ಪ್ರಯಾಣಿಸಿದ್ದೆ. ಕೆಲಸ ಅಪೂರ್ಣವಾಗಿರುವುದನ್ನು ನಾನು ನೋಡಿದೆ. ಪ್ರಧಾನಿ ಮೋದಿ ಭೇಟಿಗೆ ನನಗೆ ಯಾವುದೇ ಆಕ್ಷೇಪವಿಲ್ಲ. ಮೆಟ್ರೋ ಕಾಮಗಾರಿ ಅಪೂರ್ಣವಾಗಿದೆ, ಆದರೂ ಉದ್ಘಾಟನೆ ಮಾಡಲಾಗುವುದು ಎಂದು ಪವಾರ್ ಹೇಳಿದ್ದಾರೆ.
ವಿಶ್ವಸಂಸ್ಥೆಯ ಮತದಾನದ ವೇಳೆ ಗೈರುಹಾಜರಾಗುವ ಮೂಲಕ ಭಾರತದ ನಿಲುವಿನ ಬಗ್ಗೆ ಪ್ರಶ್ನಿಸಿದಾಗ ಪವಾರ್ ಅವರು, “ನಮ್ಮ ವಿದೇಶಾಂಗ ನೀತಿಯ ಪ್ರಕಾರ, ಸಂಘರ್ಷ ಅಥವಾ ಯುದ್ಧದ ಸಮಯದಲ್ಲಿ ನಾವು ಯಾರ ಪರವಾಗಿಯೂ ತೆಗೆದುಕೊಳ್ಳಬೇಕಾಗಿಲ್ಲ. ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಅವರು ಈ ನಿಲುವಿಗೆ ಬದ್ಧರಾಗಿದ್ದರು. ಈಗ ನಾವು ಮತದಾನದ ವೇಳೆ ಗೈರುಹಾಜರಾಗಿದ್ದೇವೆ. ಹಾಗಾಗಿ ಯಾವುದೇ ಕಾಮೆಂಟ್ ಮಾಡುವುದು ವಿಷಯವಲ್ಲ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಭಾರತದ ವಿವಿಧ ವಿಷಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಪವಾರ್ ಹೇಳಿದ್ದಾರೆ.