ಈ ಶೈಕ್ಷಣಿಕ ವರ್ಷ (2021-22)ಕ್ಕೆ ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಆಸೆಯಿಂದ NEET (National Eligibility cum Entrance Test) ಪರೀಕ್ಷೆಗೆ ದೇಶದೆಲ್ಲೆಡೆ ನೋಂದಾಯಿಸಿಕೊಂಡ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 16.14ಲಕ್ಷ. ಅವರಲ್ಲಿ ಪರೀಕ್ಷೆ ಬರೆದವರು 15.44ಲಕ್ಷ (ಈ ಸಂಖ್ಯೆ 2020ನೇ ಸಾಲಿನಲ್ಲಿ ನೀಟ್ ಪರೀಕ್ಷೆ ಬರೆದವರಿಗಿಂತ 1.77 ಲಕ್ಷ ಹೆಚ್ಚು! ಹೀಗೇಕೆಂದು ಮುಂದೆ ವಿವರಿಸುತ್ತೇನೆ.)
ದೇಶದಲ್ಲಿ ಒಟ್ಟು ಲಭ್ಯವಿರುವ ವೈದ್ಯಕೀಯ ಸೀಟುಗಳ ಸಂಖ್ಯೆ 90,675. (ಇದನ್ನು ಕೇವಲ MBBS ಗೆ ಸೀಮಿತಗೊಳಿಸಿಕೊಂಡು ಹೇಳುತ್ತಿದ್ದೇನೆ. ದಂತ ವೈದ್ಯಕೀಯ, ಆಯುಷ್ ಇತ್ಯಾದಿಗಳನ್ನು ಈ ಚರ್ಚೆಯಿಂದ ಹೊರಗಿರಿಸಿದ್ದೇನೆ.). ನೀಟ್ ಪರೀಕ್ಷೆಯಲ್ಲಿ ಗರಿಷ್ಠ ಸಂಭಾವ್ಯ ಅಂಕ 720. ಅದರಲ್ಲಿ ಪರ್ಸಂಟೈಲ್ ಲೆಕ್ಕಾಚಾರ ಮಾಡಿ, ಈವರ್ಷಕ್ಕೆ 138 ಅಂಕಕ್ಕಿಂತ ಹೆಚ್ಚು ಅಂಕ ಪಡೆದವರನ್ನು ವೈದ್ಯಕೀಯ ಕಲಿಕೆಗೆ ಅರ್ಹರು ಎಂದು ಪ್ರಕಟಿಸಲಾಗಿತ್ತು. ಹಾಗೆ 138 ಕ್ಕಿಂತ ಹೆಚ್ಚು ಅಂಕ ಗಳಿಸಿ, ಅರ್ಹತೆ ಪಡೆದವರು ಕೇವಲ 8.70 ಲಕ್ಷ ಮಂದಿ. ಅಂದರೆ, ಪ್ರತೀ ಸೀಟಿಗೆ ಅಂದಾಜು ಹತ್ತು ಮಂದಿ ಉಮೇದುವಾರರು!
ದೇಶದ ಗಾತ್ರ ಈ ಚರ್ಚೆಯ ವ್ಯಾಪ್ತಿಗೆ ದೊಡ್ಡದಾಗುವುದರಿಂದ ಕರ್ನಾಟಕದ ವ್ಯಾಪ್ತಿಗೆ ಸೀಮಿತಗೊಳಿಸಿಕೊಂಡು ನೋಡೋಣ. ಕರ್ನಾಟಕದಲ್ಲಿ ನೀಟ್ ಪರೀಕ್ಷೆಗೆ ನೋಂದಾಯಿಸಿಕೊಂಡವರು 1.19 ಲಕ್ಷ ಮಂದಿ. ಅವರಲ್ಲಿ ನೀಟ್ ಪರೀಕ್ಷೆಗೆ ಹಾಜರಾದವರು ಸುಮಾರು 89 ಸಾವಿರ ಮಂದಿ. ಇವರಲ್ಲಿ 138ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಅಂದಾಜು 55,000ಮಂದಿ. ಇಷ್ಟು ಮಂದಿಗೆ ಕರ್ನಾಟಕದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳು 9345. ಇದರಲ್ಲಿ ಕರ್ನಾಟಕದಲ್ಲೇ KEA ಮೂಲಕ ಇತ್ಯರ್ಥವಾಗುವ 7411 ಸೀಟುಗಳು ಮತ್ತು ಕೇಂದ್ರ ಸರ್ಕಾರದ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ (MCC)ಮೂಲಕ ಇತ್ಯರ್ಥವಾಗುವ 1934 ಸೀಟುಗಳು ಸೇರಿವೆ. ಈ ಎಲ್ಲ ಸೀಟುಗಳೂ ಹಂಚಿಕೆಯಾಗುವುದು ಮೀಸಲಾತಿ ಸೂತ್ರಗಳ ಅನ್ವಯವೇ.
ಈ ಸೀಟುಗಳಲ್ಲಿ ಕರ್ನಾಟಕದವರಿಗೇ ಸಿಗುವ ಸೀಟುಗಳು ಎಷ್ಟು? ಎಂಬ ಪ್ರಶ್ನೆ ಎತ್ತಿದರೆ, ಆಗ NEET ಯಾಕೆ ಸಮಸ್ಯೆ ಎಂಬುದು ಸಮರ್ಪಕವಾಗಿ ಅನಾವರಣಗೊಳ್ಳುತ್ತದೆ. ಒಟ್ಟು 9345 ಸೀಟುಗಳಲ್ಲಿ, ಕೇಂದ್ರ ಸರ್ಕಾರ ನಿರ್ಧರಿಸುವ 1934 ಸೀಟುಗಳಲ್ಲಿ ರಾಜ್ಯಗಳ ಉಚಿತ ಸೀಟು ಕೋಟಾದ 15% ಮತ್ತು ಡೀಮ್ಡ್ ವಿವಿಗಳ 100% ಸೀಟುಗಳು ಸೇರಿವೆ. ಡೀಮ್ಡ್ ಯೂನಿವರ್ಸಿಟಿ ಸೀಟುಗಳು ಮೆರಿಟ್ ಜೊತೆಗೇ ವಾರ್ಷಿಕ 15 ಲಕ್ಷದಿಂದ 25-30 ಲಕ್ಷ rರೂಪಾಯಿಗಳ ತನಕ ಫೀಸ್ ಹೊಂದಿರುವ ಸೀಟುಗಳು. NRI (694) + ವೈದ್ಯಕೀಯ ವ್ಯಾಪಾರದ ಸೀಟುಗಳು (235) ವಾರ್ಷಿಕ ತಲಾ 35-40ಲಕ್ಷ ರೂ. ಬೆಲೆ ಬಾಳುವಂತಹವು. ಇದಲ್ಲದೇ 2310 ಪ್ರೈವೇಟ್ ಸೀಟುಗಳು ಕೂಡ ವಾರ್ಷಿಕ ಕನಿಷ್ಠ 10 ಲಕ್ಷದಿಂದ 20ಲಕ್ಷ ರೂಪಾಯಿಗಳ ತನಕ ಬೆಲೆ ಬಾಳುವಂತಹವು.
ಹಾಗಾಗಿ, ಅಂತಿಮವಾಗಿ 60,000-1.5ಲಕ್ಷ ರೂ.ಗಳ ಒಳಗೆ ವಾರ್ಷಿಕ ವೆಚ್ಚ ಬರುವ “ಮೆರಿಟ್” ಸೀಟುಗಳು ಕರ್ನಾಟಕದೊಳಗೆ ಲಭ್ಯವಿರುವುದು 4172 ಮಾತ್ರ!! ಅಂದರೆ ಇಲ್ಲೂ ಕೂಡ ದುಡ್ಡು ಇಲ್ಲವೆಂದಾದರೆ ಹತ್ತಕ್ಕೆ ಒಬ್ಬರಿಗೆ ಸೀಟು ಮತ್ತು ದುಡ್ಡು ಇದೆಯೆಂದಾದರೆ ಆರರಲ್ಲಿ ಒಬ್ಬರಿಗೆ ಸೀಟು!
ಕರ್ನಾಟಕದಲ್ಲಿ ವಾರ್ಷಿಕ ಹತ್ತು ಲಕ್ಷ ರೂಪಾಯಿಗಳ ಶಿಕ್ಷಣ ಶುಲ್ಕ ತೆರಬಲ್ಲವರ ಸಂಖ್ಯೆ ಎಷ್ಟು? ಕೇಂದ್ರ ಸರ್ಕಾರದ MCC ಕೌನ್ಸೆಲಿಂಗ್ ಅಂತೂ ದೇವಸ್ಥಾನಗಳಲ್ಲಿ ದುಡ್ಡು ಕೊಟ್ಟರೆ ಸಿಗುವ “ವಿಶೇಷ ದರ್ಶನ” ವ್ಯವಸ್ಥೆ. ಅಲ್ಲಿ ಎರಡು ಲಕ್ಷ ರೂಪಾಯಿಗಳ ಠೇವಣಿ ಇರಿಸಿ ಕೌನ್ಸೆಲಿಂಗಿಗೆ ಹಾಜರಾಗಬೇಕೆಂಬ ಷರತ್ತು ವಿಧಿಸುವ ಮೂಲಕ ಬಹಳಷ್ಟು ಜನರನ್ನು ಮೂಲದಲ್ಲೇ ಬದಿಗೆ ಸರಿಸಲಾಗಿರುತ್ತದೆ. AIIMS, GIPMERನಂತಹ ರಾಷ್ಟ್ರೀಯ ದರ್ಜೆಯ ಶಿಕ್ಷಣ ಸಂಸ್ಥೆಗಳಿಗೆ ಅರ್ಹರಾಗುವ ನಿಜ ಪ್ರತಿಭಾವಂತರನ್ನು ಬಿಟ್ಟರೆ, ಉಳಿದಂತೆ ಅಲ್ಲಿಗೆ ಎಡತಾಕುವವರು ಡೀಮ್ಡ್ ವಿವಿಗಳಲ್ಲಿ ಹಣ ತೆತ್ತು ಸೀಟು ಖರೀದಿಸುವ ತಾಕತ್ತಿರುವವರು ಮಾತ್ರ.
ಒಟ್ಟಿನಲ್ಲಿ, ನನಗೆ ಈ ಕಂತಿನಲ್ಲಿ ಹೇಳಬೇಕಾಗಿರುವುದು – ಕರ್ನಾಟಕದಲ್ಲಿ 55,000 ವೈದ್ಯಕೀಯ ಶಿಕ್ಷಣ ಆಸಕ್ತರಿದ್ದರೆ, ಅವರಿಗೆ ಸರ್ಕಾರ ರೀಸನೆಬಲ್ ಮೊತ್ತದ ಶುಲ್ಕಕ್ಕೆ ಒದಗಿಸುವುದು ಕೇವಲ 4000 ಚಿಲ್ಲರೆ ಸೀಟುಗಳನ್ನು.
ಈ ಕಾರಣಕ್ಕಾಗಿ ರಾಜ್ಯದಲ್ಲಿ ಕನಿಷ್ಠ 15,000 ”ಮೆರಿಟ್” ಸೀಟುಗಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಕ ತುರ್ತಾಗಿ ಲಭ್ಯವಾಗಬೇಕಾಗಿದೆ. ವೈದ್ಯಕೀಯ ಕಾಲೇಜುಗಳನ್ನು ಖಾಸಗಿಯವರಿಗೆ ಕೊಟ್ಟಷ್ಟೂ, ಅದು ದುಡ್ಡಿದ್ದವರಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಆಗುವ ಸಾಧ್ಯತೆಗಳೇ ಹೆಚ್ಚು.
ಇವಿಷ್ಟು ವೈದ್ಯಕೀಯ ಶಿಕ್ಷಣದ ಈವತ್ತಿನ ಅಂಕಿ-ಸಂಖ್ಯೆಗಳು.
(ಇದು ಸರಣಿ ಲೇಖನದ ಮೊದಲನೇ ಭಾಗ)