ಉಕ್ರೇನ್ ಗಡಿಯಲ್ಲಿ ಯುದ್ಧ ಸಾಧ್ಯತೆ ಕ್ಷೀಣಿಸುತ್ತಿದೆ ಎಂಬ ವಿಶ್ವಾಸ ಮೂಡುತ್ತಿರುವ ಹೊತ್ತಿಗೆ ರಷ್ಯಾ ಯುದ್ಧ ಘೋಷಣೆ ಮಾಡಿದೆ. ವಾಯುದಾಳಿ ಆರಂಭಿಸಿದೆ. ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಗುರುತಿಸುವ ಮೂಲಕ ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗಲು ಕಾರಣವಾಗಿತ್ತು. ಈ ಬೆಳವಣಿಗೆ ರಷ್ಯಾವು ಉಕ್ರೇನ್ ವಿರುದ್ಧ ತೆರೆಮರೆಯಲ್ಲಿ ಯುದ್ಧ ಘೋಷಿಸಿದಂತಾಗಿತ್ತು. ಫೆಬ್ರವರಿ 24ರಂದು ಅಧಿಕೃತವಾಗಿ ಯುದ್ಧ ಆರಂಭಿಸಿಯೇ ಬಿಟ್ಟಿದೆ. ಉಕ್ರೇನ್ ನ್ಯಾಟೋ ಕೂಟವನ್ನು ಸೇರುತ್ತದೆ ಎಂಬ ಕಾರಣಕ್ಕೆ ರಷ್ಯಾ ಉಕ್ರೇನ್ ಮೇಲೆ ಮುಗಿಬಿದ್ದಿದೆ. ನ್ಯಾಟೋ ಕೂಟಕ್ಕೆ ಉಕ್ರೇನ್ ಸೇರಿಸಿಕೊಳ್ಳಬಾರದು ಎಂದು ನ್ಯಾಟೋ ಸದಸ್ಯ ರಾಷ್ಟ್ರಗಳಿಗೂ ರಷ್ಯಾ ಅಧ್ಯಕ್ಷ ವ್ಲದಿಮಿರ್ ಪುಟಿನ್ ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ನ್ಯಾಟೋ ಕೂಟಗಳು ಉಕ್ರೇನ್ ಸೇರಿಸಿಕೊಳ್ಳುವ ಬಗ್ಗೆ ಒಲವು ಹೊಂದಿವೆ. ಉಕ್ರೇನ್ ನ್ಯಾಟೋ ಕೂಟಕ್ಕೆ ಸೇರಿದರೆ ರಷ್ಯಾ ಸುತ್ತಮುತ್ತಲಲ್ಲಿ ಶತ್ರುಗಳು ಹುಟ್ಟಿಕೊಳ್ಳುತ್ತಾರೆಂಬ ಭಾವನೆ ರಷ್ಯಾಗಿದೆ. ಇದು ಸಮಸ್ಯೆಯ ಮೂಲ. ಈ ಸಮಸ್ಯೆಯನ್ನು ಮೂಲದಲ್ಲೇ ಚಿವುಟುವುದು ಪುಟಿನ್ ತಂತ್ರ.
ರಷ್ಯಾ ವಿರುದ್ಧ ಒಗ್ಗೂಡುತ್ತಿರುವ ಯೂರೋಪ್
ಉಕ್ರೇನ್ನಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ಚೀನಾ ಕಳವಳ ವ್ಯಕ್ತಪಡಿಸಿತ್ತು. ಎಲ್ಲರೂ ಸಂಯಮದಿಂದ ವರ್ತಿಸುವಂತೆ ಕರೆ ನೀಡಿತ್ತು. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮಂಗಳವಾರ ಅಮೆರಿಕ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರೊಂದಿಗೆ ದೂರವಾಣಿ ಮೂಲಕ ಉಕ್ರೇನ್ ಪರಿಸ್ಥಿತಿ ಕುರಿತು ಚರ್ಚಿಸಿದ್ದಾಗಿ ತಿಳಿಸಿದ್ದರು. ಎಲ್ಲಾ ರಾಷ್ಟ್ರಗಳೂ “ಸಂಯಮವನ್ನು” ಪಾಲಿಸಲು ಕರೆ ನೀಡಿ, ಯಾವುದೇ ದೇಶದ ಕಾನೂನುಬದ್ಧ ಭದ್ರತಾ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದಿದ್ದರು. “ಚೀನಾ ಎಲ್ಲಾ ದೇಶಗಳೊಂದಿಗೆ ಸಂಪರ್ಕವನ್ನು ಮುಂದುವರಿಸುತ್ತದೆ” ಎಂದು ವಾಂಗ್ ಹೇಳಿದ್ದರು. ಈಗ ದಾಳಿ ನಡೆದ ನಂತರ ವಿಶ್ವಸಂಸ್ಥೆ ತುರ್ತುಸಭೆಯಲ್ಲಿ ಸಹ ಚೀನಾ ರಷ್ಯಾ ನಡೆಯನ್ನು ಆಕ್ಷೇಪಿಸಿದೆ. ಚೀನಾ ಮತ್ತು ರಷ್ಯಾ ದೇಶಗಳು ಉಕ್ರೇನ್ ಸಂಘರ್ಷದ ಸಮಯದಲ್ಲಿ ಮತ್ತೆ ಒಗ್ಗೂಡುತ್ತಿರುವುದು ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ. ಈ ಕಾರಣಕ್ಕಾಗಿಯೇ ಬಹುತೇಕ ರಾಷ್ಟ್ರಗಳು ಉಕ್ರೇನ್ ಪರವಾಗಿವೆ.

ಭಾರತದ ಮೇಲಾಗುವ ಪರಿಣಾಮಗಳೇನು?
ಉಕ್ರೇನ್ ಮೇಲೆ ರಷ್ಯಾವು ಸೇನಾ ಕಾರ್ಯಚರಣೆ ನಡೆಸಿದರೆ ಭಾರತೀದ ಮೇಲಾಗುವ ಪರಿಣಾಮಗಳು ಬಹು ಆಯಾಮಗಳಲ್ಲಾಗುತ್ತವೆ. ಏಕೆಂದರೆ ಯುದ್ಧದ ಸಂದರ್ಭದಲ್ಲಿ ಕಚ್ಚಾ ತೈಲ ಬೆಲೆಗಳು ತ್ವರಿತವಾಗಿ ಜಿಗಿಯುತ್ತವೆ. ಹಾಗೆಯೇ ಡಾಲರ್ ಮತ್ತು ಚಿನ್ನದ ಬೆಲೆಯೂ ಏರುತ್ತವೆ. ಅದಕ್ಕೆ ವ್ಯತಿರಿಕ್ತವಾಗಿ ದೇಶೀಯ ಕರೆನ್ಸಿ ಮೌಲ್ಯ ಕುಸಿಯುತ್ತದೆ. ಜತೆಗೆ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿ ಹೂಡಿಕೆದಾರರಿಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗುತ್ತದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿತೆಂದು ತಿಳಿದ ತಕ್ಷಣವೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ತ್ವರಿತವಾಗಿ ಜಿಗಿದಿದೆ. ಫೆಬ್ರವರಿ 24ರಂದು ಬ್ರೆಂಟ್ ಕಚ್ಚಾ ತೈಲ ಶೇ.5 ರಷ್ಟು ಏರಿಕೆಯಾಗಿದ್ದು ಪ್ರತಿ ಬ್ಯಾರೆಲ್ಲಿಗೆ 102 ಡಾಲರ್ ದಾಟಿ ವಹಿವಾಟಾಗುತ್ತಿದೆ. 2014ರಿಂದೀಚೆಗೆ ಇದು ಅತ್ಯಂತ ಗರಿಷ್ಠ ದರವಾಗಿದೆ. ಪರಿಸ್ಥಿತಿ ಮುಂದುವರೆದರೆ 110 ಡಾಲರ್ ಗಡಿದಾಟಬಹುದು. ಕಚ್ಚಾ ತೈಲ ದರ ಏರುತ್ತಿದ್ದಂತೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರುವುದರಿಂದ ಸಾರಿಗೆ ಸೌಲಭ್ಯಗಳು ಮತ್ತು ಪೂರಕವಾದ ಸೇವೆಗಳ ದರವೂ ಜಿಗಿಯುತ್ತದೆ. ಜನರು ಬೆಲೆ ಏರಿಕೆಯಿಂದ ತತ್ತರಿಸಬೇಕಾಗುತ್ತದೆ.
ಷೇರುಪೇಟೆಯಲ್ಲಿ ಹೂಡಿಕೆದಾರಿಗೆ ಭಾರಿ ನಷ್ಟ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಿಂದ ಭಾರತೀಯ ಷೇರುಪೇಟೆ ಕುಸಿತದ ಹಾದಿಯಲ್ಲಿ ಸಾಗಿದೆ. ಕಳೆದ ಐದು ‘ವಹಿವಾಟು ದಿನ’ಗಳಲ್ಲಿ ಹೂಡಿಕೆದಾರರ 9.2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ನಾಶವಾಗಿದೆ. ಪುಟಿನ್ ಅವರು ಪ್ರತ್ಯೇಕತಾ ವಾದಿಗಳ ಹಿಡಿತದಲ್ಲಿರುವ ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಘೋಷಿಸಿದ ಸುದ್ದಿಯಿಂದಾಗಿ ಮಂಗಳವಾರ ಷೇರುಪೇಟೆಯಲ್ಲಿ ರಕ್ತದೋಕುಳಿಯಾಗಿತ್ತು. ಬಹುತೇಕ ಸೂಚ್ಯಂಕಗಳು ಶೇ.2ರಿಂದ 4ರಷ್ಟು ಕುಸಿದಿವೆ. ಗುರುವಾರ ಯುದ್ಧ ಘೋಷಣೆ ಆದ ಕೂಡಲೇ ಸೆನ್ಸೆಕ್ಸ್ 1800 ನಿಫ್ಟಿ 550 ಅಂಶ ಕುಸಿದಿವೆ. ಈ ಕುಸಿತದಿಂದ ಸುಮಾರು 6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸಂಪತ್ತು ನಾಶವಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೂ ಪೇಟೆಯಲ್ಲಿ ಅಸ್ಥಿರತೆ ತಲೆದೋರಲಿದ್ದು, ಹೂಡಿಕೆದಾರರು ಮತ್ತಷ್ಟು ನಷ್ಟ ಅನುಭವಿಸಲಿದ್ದಾರೆ. ಈ ಸಮಸ್ಯೆ ಭಾರತೀಯ ಹೂಡಿಕೆದಾರರಿಗೆ ಮಾತ್ರವಲ್ಲ ಜಾಗತಿಕ ಷೇರುಪೇಟೆಗಳೆಲ್ಲವೂ ಕುಸಿತದ ಹಾದಿಯಲ್ಲೇ ಇವೆ.

ಭಾರತದ ರಫ್ತು ವ್ಯಾಪಾರದ ಮೇಲಾಗುವ ಪರಿಣಾಮಗಳು
ಭಾರತ ಮತ್ತು ಉಕ್ರೇನ್ ನಡುವೆ ವ್ಯಾಪಾರ ವಹಿವಾಟು ಸಂಬಂಧ ಉತ್ತಮವಾಗಿಯೇ ಇದೆ. ಉಕ್ರೇನ್ ದೇಶಕ್ಕೆ ಔಷಧಗಳನ್ನು ರಫ್ತು ಮಾಡುವ ಮೂರನೇ ದೊಡ್ಡ ದೇಶ ಭಾರತ. ಇದಕ್ಕೆ ಪ್ರತಿಯಾಗಿ ಭಾರತವು ಉಕ್ರೇನ್ ದೇಶದಿಂದ ಸೂರ್ಯಕಾಂತಿ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರ ಜತೆಗೆ ರಾಸಾಯನಿಕ, ಉಕ್ಕು, ಕಬ್ಬಿಣ, ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈಗ ಯುದ್ಧ ಘೋಷಣೆ ಆಗಿರುವುದರಿಂದ ಸಹಜವಾಗಿಯೇ ವ್ಯಾಪಾರ ವಹಿವಾಟು ತಾತ್ಕಾಲಿಕವಾಗಿ ಸ್ಥಗಿತವಾಗುತ್ತದೆ. ಭಾರತವು ಯೂರೋಪ್ ದೇಶಗಳಿಗೆ ಮಾಡುವ ರಫ್ತು ಉತ್ಪನ್ನಗಳ ಮೇಲೂ ಇದರ ವ್ಯತಿರಿಕ್ತ ಪರಿಣಾಮವಾಗುತ್ತದೆ. ಔಷಧ, ರಿಯಾಕ್ಟರ್, ಬಾಯ್ಲರ್, ಮೆಕ್ಯಾನಿಕಲ್ ಅಪ್ಲೆಯನ್ಸ್, ಕಾಫೀ, ಟೀ, ಸಾಂಬಾರ ವಸ್ತುಗಳನ್ನು ಯೂರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದೆ. ಒಂದು ವೇಳೆ ಉಕ್ರೇನ್ ಬೆಂಬಲಿಸಿ ಯೂರೋಪ್ ರಾಷ್ಟ್ರಗಳು ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ಯುದ್ಧದಲ್ಲಿ ಭಾಗಿಯಾದರೆ ಈ ಸರಕುಗಳ ರಫ್ತಿನ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ರಷ್ಯಾವನ್ನು ಬೆಂಬಲಿಸುವ ಚೀನದ ತಂತ್ರಗಾರಿಕೆ
ಚೀನಾ ಮತ್ತು ರಷ್ಯಾ ನಡುವೆ ಸುಧೀರ್ಘ ಕಾಲದ ವ್ಯಾಪಾರ ವಹಿವಾಟು ಒಪ್ಪಂದಗಳಾಗಿವೆ. ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಚೀನಾ ಆಮದು ಮಾಡಿಕೊಳ್ಳುತ್ತಿದೆ. ಈ ವಹಿವಾಟು ಒಪ್ಪಂದ ಮೊತ್ತ 117 ಬಿಲಿಯನ್ ಡಾಲರ್ (8,77,500 ಕೋಟಿ ರೂ.). ಅಮೆರಿಕ ಆರ್ಥಿಕ ನಿಷೇಧ ಹೇರಿ, ನಾರ್ಡ್ ಸ್ಟ್ರೀಮ್ 2 ಅನಿಲ ಪೈಪ್ ಲೈನ್ ಮೂಲಕ ಯೂರೋಪ್ ರಾಷ್ಟ್ರಗಳಿಗೆ ರಷ್ಯಾದ ಅನಿಲ ಸರಬರಾಜು ಸ್ಥಗಿತಗೊಂಡರೂ ಚೀನಾದೊಂದಿಗಿನ ಒಪ್ಪಂದವು ಆಗಬಹುದಾದ ನಷ್ಟದ ಹೊರೆಯನ್ನು ತಗ್ಗಿಸುತ್ತದೆ. ಆರ್ಥಿಕ ನಿರ್ಬಂಧದ ಪರಿಣಾಮಗಳೂ ಹೆಚ್ಚಿಗೆ ಇರುವುದಿಲ್ಲ. ಈ ಕಾರಣದಿಂದಾಗಿಯೇ ರಷ್ಯಾದ ಸುತ್ತಮುತ್ತಲಲ್ಲಿ ನ್ಯಾಟೋ ಕೂಟ ವಿಸ್ತರಣೆಯ ವಿರುದ್ಧವಾಗಿ ಚೀನಾ ದನಿ ಎತ್ತಿದೆ.













