ನಿರೀಕ್ಷಿಸಿದಂತೆ ರಷ್ಯಾ ಉಕ್ರೇನ್ ಮೇಲೆ ವಾಯು ದಾಳಿ ನಡೆಸಿದೆ. ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಕೇಂದ್ರೀಕರಿಸಿ ಮತ್ತು ದೇಶದ ರಕ್ಷಣಾ ವ್ಯವಸ್ಥೆಯನ್ನು ಕೇಂದ್ರೀಕರಿಸಿ ದಾಳಿ ನಡೆಸಲಾಗಿದೆ.
ರಷ್ಯಾ ದಾಳಿಯ ಪರಿಣಾಮ ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಕಚ್ಚಾ ತೈಲದರ ಪ್ರತಿ ಬ್ಯಾರೆಲ್ಲಿಗೆ ನೂರು ಡಾಲರ್ ಗಡಿದಾಟಿದೆ. ಭಾರತೀಯ ಷೇರುಪೇಟೆಯಲ್ಲಿ ರಕ್ತದೋಕುಳಿ ನಡೆದಿದ್ದು, ಬಹುತೇಕ ಎಲ್ಲಾ ಸೂಚ್ಯಂಕಗಳು ಶೇ.3-5ರಷ್ಟು ಕುಸಿತ ದಾಖಲಿಸಿವೆ. ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಚಿನ್ನದ ದರವೂ ಜಿಗಿದಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭಿಸಿದ್ದಾಗಿ ಘೋಷಿಸಿದ್ದಾರೆ. ರಷ್ಯಾದ ಕ್ರಮದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ದೇಶದ ಯಾವುದೇ ಪ್ರಯತ್ನವು ಹಿಂದೆಂದೂ ನೋಡಿರದ ಪರಿಣಾಮಗಳಿಗೆ ಕಾರಣವಾಗಬಹುದು ಎಂದೂ ಅವರು ಇತರ ದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪುಟಿನ್ ಘೋಷಣೆ ಮಾಡುತ್ತಿದ್ದಂತೆ ರಷ್ಯಾ ವಾಯುಪಡೆ ದಾಳಿ ಆರಂಭಿಸಿತು. ಉಕ್ರೇನ್‌ನ ಕೈವ್, ಖಾರ್ಕಿವ್ ಮತ್ತು ಇತರ ಪ್ರದೇಶಗಳಲ್ಲಿ ದೊಡ್ಡ ಸ್ಫೋಟಗಳು ಕೇಳಿಬಂದವು.
ಪುಟಿನ್ ಅವರ ಆಕ್ರಮಣಶೀಲ ದಾಳಿದಿಂದ ದೇಶವು ತನ್ನನ್ನು ತಾನು ರಕ್ಷಿಸಿಕೊಳ್ಳಲಿದೆ ಎಂದು ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದ್ದಾರೆ. ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಮತ್ತು ಗೆಲ್ಲುತ್ತದೆ ಎಂದೂ ತಿಳಿಸಿದ್ದಾರೆ.
ಕೆಲವೇ ಗಂಟೆಗಳಲ್ಲಿ ರಷ್ಯಾ ಉಕ್ರೇನ್ ಅನ್ನು ಆಕ್ರಮಿಸಲಿದೆ ಎಂದು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಪುಟಿನ್ ಪಡೆ ಆಕ್ರಮಣ ನಡೆಸಿದೆ.

ಉಕ್ರೇನಿನ ಆಕ್ರಮಣವನ್ನು ಹಿಮ್ಮೆಟ್ಟಿಸಲು ಪ್ರತ್ಯೇಕತಾವಾದಿಗಳು ಕ್ರೆಮ್ಲಿನ್‌ಗೆ ಸಹಾಯವನ್ನು ಕೇಳಿದ್ದಾರೆ ಎಂದು ರಷ್ಯಾ ಹೇಳಿತ್ತು. ಆದಾದ ನಂತರ ದಾಳಿ ನಡೆದಿದೆ. ಇತ್ತೀಚೆಗಷ್ಟೇ ರಷ್ಯಾ ಪೂರ್ವ ನಗರ ಡೊನೆಟ್ಸ್ಕ್ ಸೇರಿದಂತೆ ಎರಡು ಪ್ರದೇಶಗಳನ್ನು ಸ್ವತಂತ್ರ ಪ್ರದೇಶಗಳೆಂದು ಘೋಷಿಸಿತ್ತು. ನಂತರ ಅಲ್ಲಿ ಶಾಂತಿ ಪಾಲನೆಯ ಹೆಸರಿನಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿದ್ದರಿಂದ ಗಡಿಯಲ್ಲಿ ಉದ್ವಿಘ್ನತೆ ಹೆಚ್ಚಾಗಿತ್ತು.
ಈ ನಡುವೆ ಉಕ್ರೇನ್ ತನ್ನ ವಿಮಾನ ನಿಲ್ದಾಣಗಳನ್ನು ಮುಚ್ಚಿದೆ. ತನ್ನ ವಾಯುಪ್ರದೇಶದಲ್ಲಿ ಹಾರಾಟ ನಡೆದಂತೆ ಎಚ್ಚರಿಕೆ ನೀಡಿದೆ.
ವಿಶ್ವಸಂಸ್ಥೆ ತುರ್ತು ಸಭೆ: ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ತುರ್ತು ಸಭೆ ಕರೆದಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ದೇಶಗಳ ರಾಜತಾಂತ್ರಿಕರು ರಷ್ಯಾ ನಡೆಯನ್ನು ಖಂಡಿಸಿದ್ದಾರೆ. ‘ಉಕ್ರೇನ್, ನೀವು ಒಬ್ಬಂಟಿಯಾಗಿಲ್ಲ’ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಈ ನಡುವೆ, ವಿಶ್ವಸಂಸ್ಥೆಯಲ್ಲಿ ಸದಾ ರಷ್ಯಾವನ್ನು ಬೆಂಬಲಿಸುತ್ತಿದ್ದ ಚೀನಾ ಕೂಡಾ ವಿಶ್ವಸಂಸ್ಥೆ ಸಭೆಯಲ್ಲಿ ದೇಶಗಳ ಸಾರ್ವಭೌಮತ್ವ ಮತ್ತು ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಗಳನ್ನು ಗೌರವಿಸುವ ವಿಶ್ವ ಸಂಸ್ಥೆಯ ದೀರ್ಘಕಾಲದ ತತ್ವದ ಪರವಾಗಿ ಮಾತನಾಡಿದ್ದು, ರಷ್ಯಾ ನಡೆಯನ್ನು ಪರೋಕ್ಷವಾಗಿ ಖಂಡಿಸಿದೆ.
ವಾಪಾಸಾದ ಭಾರತೀಯ ವಿಮಾನ
ಉಕ್ರೇನ್ ನಲ್ಲಿ ಉಳಿದಿರುವ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಕರೆತರಲು ಹೊರಟಿದ್ದ ಏರ್ ಇಂಡಿಯಾ ವಿಮಾನ ನೋಟಮ್ (ವಿಮಾನ ಇಳಿಯದಂತೆ ನೀಡುವ ಸೂಚನೆ) ಸೂಚನೆ ಹಿನ್ನೆಲೆಯಲ್ಲಿ ದೆಹಲಿಗೆ ವಾಪಾಸು ಹಿಂದಿರುಗಿದೆ. ಇದಕ್ಕೂ ಮೊದಲು ವಿದ್ಯಾರ್ಥಿಗಳು ಮತ್ತು ನಾಗರಿರನ್ನು ಹೊತ್ತಿದ್ದ ಮತ್ತೊಂದು ವಿಶೇಷ ವಿಮಾನ ಸುರಕ್ಷಿತವಾಗಿ ದೆಹಲಿಗೆ ಬಂದಿಳಿದಿತ್ತು.
ರಷ್ಯಾ ಯುದ್ಧತಂತ್ರ:
ರಷ್ಯಾ ದಾಳಿಯ ಆರಂಭದಲ್ಲೇ ಉಕ್ರೇನಿನ ವಾಯುಪಡೆ ಗುರಿಯಾಗಿಸಿ ದಾಳಿ ಮಾಡಿದೆ. ಇದು ಅತ್ಯಂತ ಆಕ್ರಮಣಶೀಲ ಯುದ್ಧತಂತ್ರ. ಉಕ್ರೇನಿನ ಸೇನೆಯನ್ನು ಕೇಂದ್ರವಾಗಿರಿಸಿ ದಾಳಿ ಮುಂದುವರೆಸಲಾಗಿದೆ. ಈ ತಂತ್ರದಿಂದ ಭೂಸೇನೆ ಚಲನೆಯನ್ನು ನಿಯಂತ್ರಿಸುವುದಲ್ಲದೇ, ಗಡಿ ಭಾಗ ತಲುಪಲು ಅವಕಾಶ ನೀಡದಂತೆ ಸಂಪರ್ಕವನ್ನೇ ಕಡಿದು ಹಾಕುವ ಪ್ರಯತ್ನವಾಗಿದೆ.



