ಅಲಿಯಾ ವಿಶ್ವವಿದ್ಯಾಲಯದ (Aliah University) ವಿದ್ಯಾರ್ಥಿ ಅನಿಸ್ ಖಾನ್ (Anis Khan) ಸಾವಿನ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ವಿಶೇಷ ತನಿಖಾ ತಂಡ (Special Investigation Team, SIT) ರಚಿಸುವಂತೆ ಸೂಚಿಸಿದ್ದಾರೆ. ಈ ಕುರಿತು ಇಂದು ಸಭೆ ನಡೆಯಲಿದ್ದು, ಪೊಲೀಸ್ ಮಹಾನಿರ್ದೇಶಕರು (Director-General of Police) ಅಧ್ಯಕ್ಷತೆ ವಹಿಸಲಿದ್ದಾರೆ.
ಶುಕ್ರವಾರ ರಾತ್ರಿ ಹೌರಾದ ಅಮ್ಟಾ ಪ್ರದೇಶದ ತನ್ನ ಮನೆಯ ಹೊರಗೆ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದ. ತಮ್ಮ ಮಗನನ್ನು ಹುಡುಕಲು ಬಂದ ನಾಲ್ವರು ಪೊಲೀಸ್ ಅಧಿಕಾರಿಗಳು ಆತನನ್ನು ಮನೆಯ ಮೇಲೆ ಕರೆದುಕೊಂಡು ಹೋಗಿ ಕಟ್ಟಡದ ಮೇಲ್ಛಾವಣಿಯಿಂದ ಎಸೆದಿದ್ದಾರೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಹೌರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ (West Bengal Chief Minister Mamata Banerjee), “ಡಿಜಿ ಅಧ್ಯಕ್ಷತೆಯಲ್ಲಿ ಎಸ್‌ಐಟಿ ರಚಿಸಲು ಸೂಚಿಸಿದ್ದೇನೆ. 15 ದಿನಗಳಲ್ಲಿ ವರದಿ ನೀಡಲಿದ್ದಾರೆ. ಕೂಲಂಕುಷವಾಗಿ ತನಿಖೆ ನಡೆಸಲಾಗುವುದು ಮತ್ತು ತಪ್ಪಿತಸ್ಥರನ್ನು ಶಿಕ್ಷಿಗೆ ಒಳಪಡಿಸಲಾಗುವುದು.ಈ ವಿಚಾರದಲ್ಲಿ ಜನರು ತಪ್ಪು ಮಾಹಿತಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ.
ಅನೀಸ್ ಖಾನ್ ಹತ್ಯೆ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳ ಪೊಲೀಸರು ವಿಶೇಷ ತನಿಖಾ ತಂಡ ರಚಿದ್ದು, ಎಡಿಜಿ ಸಿಐಡಿ ಜ್ಞಾನವಂತ್ ಸಿಂಗ್ ಮತ್ತು ಡಿಐಜಿ ಸಿಐಡಿ (DIG , CID ) ವಿಶೇಷ ಮೀರಜ್ ಖಾಲಿದ್ (Miraz Kalid) ಎಸ್‌ಐಟಿಯ ಮುಖ್ಯಸ್ಥರಾಗಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧ ಹೋರಾಡಿದ್ದ ವಿದ್ಯಾರ್ಥಿ
ಹೌರಾ ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವಿದ್ಯಾರ್ಥಿ ಮುಖಂಡ ಅನೀಶ್ ಖಾನ್ ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ. ಅವರ ನಿಗೂಢ ಸಾವು ಖಂಡಿಸಿ ಸಿಪಿಎಂನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಪಶ್ಚಿಮ ಬಂಗಾಳದಾತ್ಯಂತ ಪ್ರತಿಭಟನೆ ನಡೆಸಲು ಮುಂದಾಗಿತ್ತು.
ಆಡಳಿತಾರೂಢ ಟಿಎಂಸಿಯ ಮುಖಂಡರೊಬ್ಬರು ಹತ್ಯೆಗೆ ಸಂಚು ರೂಪಿಸಿರುವುದಾಗಿ ಆರೋಪಿಸಿ ಕಾಂಗ್ರೆಸ್, ಸಿಪಿಎಂ ಮತ್ತು ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿವೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿಹಾಕಿದೆ.





