ದೇಶದ ಶೇ.5ರಷ್ಟು ಜನರು ಮಾತ್ರ ಕಾರು ಬಳಸುತ್ತಿದ್ದು, ಶೇ.95ರಷ್ಟು ಜನರು ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ ಮಾಡುವುದಿಲ್ಲ ಎಂದು ಉತ್ತರ ಪ್ರದೇಶ ಸಚಿವ ಉಪೇಂದ್ರ ತಿವಾರಿ ನೀಡಿರುವ ಹೇಳಿಕಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ದೇಶದ 95% ಜನರಿಗೆ ಬಿಜೆಪಿಯ ಅಗತ್ಯವಿಲ್ಲ ಎಂದು ಟೀಕಿಸಿದ್ದಾರೆ.
ತಲಾ ಆದಾಯವನ್ನು ಪರಿಗಣಿಸಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಹೆಚ್ಚಿಸಿಲ್ಲ ಎಂದು ತಿವಾರಿ ಗುರುವಾರ ಹೇಳಿದ್ದರು ಮತ್ತು ದೇಶದ 95% ಜನರಿಗೆ ಪೆಟ್ರೋಲ್ ಮತ್ತು ಡೀಸಲ್‌ನ ಅಗತ್ಯವಿಲ್ಲ ಎಂದು ಹೇಳಿದ್ದರು. ಸಚಿವ ತಿವಾರಿ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ʻಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಿಗೆ ಸಂಬಂಧಿಸಿದಂತೆ, ಈಗ ಬೆರಳೆಣಿಕೆಯಷ್ಟು ಜನರು ನಾಲ್ಕು ಚಕ್ರದ ವಾಹನಗಳನ್ನು ಬಳಸುತ್ತಾರೆ ಮತ್ತವರಿಗೆ ಮಾತ್ರ ಪೆಟ್ರೋಲ್ ಅಗತ್ಯವಿದೆ. ಪ್ರಸ್ತುತ ಸಮಾಜದಲ್ಲಿ 95 ಪ್ರತಿಶತ ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ ಎಂದು ಸಚಿವ ಉಪೇಂದ್ರ ತಿವಾರಿ ಹೇಳಿದ್ದಾರೆ. ಈಗ 95% ಜನರಿಗು ಕೂಡ ಬಿಜೆಪಿಯ ಅಗತ್ಯವಿಲ್ಲ ಏಕೆಂದರೆ ಜನರು ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಿರ್ಧರಿಸಿದ್ದಾರೆ ʼ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚಿಗೆ ಲಖೀಂಪುರ್ ಖೇರಿ ಘಟನೆಯನ್ನು ಉಲ್ಲೇಖಿಸಿರುವ ಅಖಿಲೇಶ್, ನಾಲ್ವರು ರೈತರನ್ನು ಬಲಿ ಪಡೆದ ಮಹಿಂದ್ರಾ ಥಾರ್‌ಗೆ ಡೀಸಲ್‌ನ ಅಗತ್ಯವಿದೆಯೇ? ಎಂದು ಸಚಿವ ತಿವಾರಿಯನ್ನುತೀವ್ರ ತರಾಟಗೆ ತೆಗೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಜಲೌನ್‌ನಲ್ಲಿ ಇತ್ತೀಚಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಉಪೇಂದ್ರ ತಿವಾರಿ, ಈ ದೇಶದಲ್ಲಿ ಕೇವಲ ಶೇ.5ರಷ್ಟು ಜನರು ಮಾತ್ರ ಕಾರು ಬಳಸುತ್ತಾರೆ. ಅವರಿಗೆ ಮಾತ್ರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಂಬಂಧಪಟ್ಟಿರುತ್ತದೆ. ಆದರೆ, ಈ ದೇಶದ ಶೇ.95ರಷ್ಟು ಜನ ಸ್ವಂತ ವಾಹನ ಬಳಸದೇ ಇರುವುದರಿಂದ ಅವರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸಂಬಂಧ ಪಟ್ಟಿರುವುದಿಲ್ಲ ಎಂದು ಹೇಳಿದ್ದರು.
೨೦೧೪ ರಲ್ಲಿದ್ದ ದೇಶದ ಜನರ ತಲಾ ಆದಾಯಕ್ಕೆ ಹೋಲಿಸಿದರೆ, ಮೋದಿಜಿ ಮತ್ತು ಯೋಗಿಜಿ ಸರ್ಕಾರಗಳು ರಚನೆಯಾದ ನಂತರ ತಲಾ ಆದಾಯವು ದ್ವಿಗುಣಗೊಂಡಿದೆ. ವಾಸ್ತವದಲ್ಲಿ ಇಂಧನ ದರ ಅಷ್ಟೇನು ಏರಿಕೆಯಾಗಿಲ್ಲ ಎಂದು ತಿಳಿಯುತ್ತದೆ ಎಂಬುವುದಾಗಿ ತಿವಾರಿ ಪ್ರತಿಪಾದಿಸಿದ್ದರು. ಹಾಗೆಯೇ ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ದರ ಗರಿಷ್ಠ ಮಟ್ಟ ತಲುಪಿದೆ ಎಂಬ ಬಾಲಿಶ ಹೇಳಿಕೆಯನ್ನು ವಿಪಕ್ಷಗಳು ಜನರ ಬಳಿ ಹಬ್ಬಿಸಬಾರದು ಇದರಿಂದ ವಿಪಕ್ಷಗಳಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.