ಉತ್ತರಾಖಂಡ ಪ್ರವಾಸದಲ್ಲಿರುವ ಕರ್ನಾಟಕದ ಹತ್ತು ಕುಟುಂಬಗಳ ಎಲ್ಲಾ 96 ಜನರು ಸುರಕ್ಷಿತವಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ ಅವರನ್ನು ಕರೆತಂದು ರಕ್ಷಿಸುವ ಕಾರ್ಯ ನಡೆಯುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಉತ್ತರಾಖಂಡ ಸರ್ಕಾರದ ಜೊತೆ ನಿರಂತರವಾದ ಸಂಪರ್ಕದಲ್ಲಿದೆ. ಈ ಉದ್ದೇಶಕ್ಕಾಗಿ ವಿಪತ್ತು ನಿರ್ವಹಣಾ ಇಲಾಖೆ ಸಹಾಯವಾಣಿಯನ್ನು ಕೂಡ ಸ್ಥಾಪಿಸಿದೆ. ಈ ಸಹಾಯವಾಣಿಗೆ ಈಗಾಗಲೇ ಹಲವು ಜನರು ಕರೆ ಮಾಡಿ, ವಿಚಾರಗಳನ್ನು ತಿಳಿಸಿದ್ದಾರೆ. ಎಲ್ಲರ ರಕ್ಷಣೆಗೆ ತಯಾರಿ ನಡೆಯುತ್ತಿದೆ ಎಂದರು.

ಈ ವೇಳೆ ಉತ್ತರಕರ್ನಾಟಕದ ಹಲವು ಭಾಗಗಳಲ್ಲಿ ಉಂಟಾಗುತ್ತಿರುವ ಭೂಕಂಪನದ ಬಗ್ಗೆ ಪ್ರತಿಕ್ರೀಯಿಸಿದ ಕಂದಾಯ ಸಚಿವ ಆರ್ ಅಶೋಕ್ , ಕಲಬುರಗಿ ಜಿಲ್ಲೆಯ ಗಡಿಕೇಶ್ವರದಲ್ಲಿ ಸುಮಾರು 10 ವರ್ಷಗಳಿಂದಲೂ ಭೂಕಂಪನ ನಡೆಯುತ್ತಲೇ ಬಂದಿದೆ. ಆ ಪ್ರದೇಶಕ್ಕೆ ನಾನೇ ಖುದ್ದಾಗಿ ತೆರಳಿ ಪರಿಸ್ಥಿತಿಯ ಬಗ್ಗೆ ಕೂಲಂಕುಷವಾಗಿ ಅವಲೋಕನ ಮಾಡಿದ್ದೇನೆ. ಅಲ್ಲಿನ ಮನೆಗಳಿಗೆ ಹೋಗಿ ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿದ್ದೇನೆ. ತಾತ್ಕಾಲಿಕವಾದ ಶೆಡ್ ವ್ಯವಸ್ಥೆಯನ್ನು ಮಾಡಿದ್ದೇವೆ. ಈ ಪ್ರದೇಶದಲ್ಲಿ ಸುಣ್ಣದ ಅಂಶ ಹೆಚ್ಚಾಗಿರುವುದರಿಂದ ಇಂತಹ ಸಮಸ್ಯೆಗಳು ಕಂಡುಬರುತ್ತಿದೆ ಎಂದರು.

ಮುಂದಿನ ಒಂದು ತಿಂಗಳು ವಿಜ್ಞಾನಿಗಳ ತಂಡ ಸಂಶೋಧನೆ ಮಾಡಿ, ಅಂತಿಮ ವರದಿಯನ್ನು ಸಲ್ಲಿಸಲಿದೆ.ಪರಿಹಾರ ಕಾರ್ಯಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾಡಳಿತದ ಜೊತೆ ನಿರಂತರವಾದ ಸಂಪರ್ಕದಲ್ಲಿದ್ದು, ಜಿಲ್ಲಾಧಿಕಾರಿಗಳ ಖಾತೆಗೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.