ರಾಜ್ಯದಲ್ಲಿ ನಿನ್ನೆ (ಬುಧವಾರ) 282 ಹೊಸ ಕರೋನಾ ಕೇಸ್ ಗಳು ಪತ್ತೆಯಾಗಿದ್ದು, 13 ಮಂದಿ ಮೃತಪಟ್ಟಿದ್ದಾರೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಶೂನ್ಯ ಕೋವಿಡ್ ಸೋಂಕು ವರದಿಯಾಗಿದ್ದು, ಬುಧವಾರ 17 ಜಿಲ್ಲೆಗಳಲ್ಲಿ ತಲಾ 1 ಪ್ರಕರಣಗಳು ಕಂಡುಬಂದಿವೆ. ರಾಜ್ಯದ ಒಟ್ಟು 29,86,835 ಕೇಸ್ ಗಳಲ್ಲಿ 38,037 ಮಂದಿ ಮೃತ ಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ದಾಖಲೆಗಳು ಹೇಳುತ್ತಿವೆ.
ಬಾಗಲಕೋಟೆ, ಬೀದರ್, ಚಾಮರಾಜನಗರ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ ಮತ್ತು ಯಾದಗಿರಿಯಲ್ಲಿ ಒಬ್ಬ ವ್ಯಕ್ತಿಗೂ ಸೋಂಕು ತಗುಲಿಲ್ಲ. ಇದರಿಂದ ಯಾರೂ ಮೃತಪಟ್ಟಿಲ್ಲ ಎಂಬುವುದು ವರದಿಯಾಗಿದೆ.
ಒಂದೇ ದಿನದಲ್ಲಿ 349 ಜನರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಒಟ್ಟು 29,40,339 ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,430 ಇದ್ದು, ಬೆಂಗಳೂರು ನಗರದಲ್ಲಿ 142 ಹೊಸ ಕೇಸ್ ಗಳು ಹಾಗೂ 6 ಮಂದಿ ಸಾವನ್ನಪ್ಪಿದ್ದಾರೆ.
ಇನ್ನುಳಿದಂತೆ ಕೆಲವು ಜಿಲ್ಲೆಗಳಲ್ಲಿ ಹೊಸ ಕೊರೋನಾ ಕೇಸ್ ಗಳು ಕಂಡುಬಂದಿವೆ. ಅವುಗಳಲ್ಲಿ ಕೊಡಗಿನಲ್ಲಿ 31, ದಕ್ಷಿಣಕನ್ನಡ, ಮೈಸೂರು, ಹಾಸನಗಳಲ್ಲಿ ತಲಾ 28 ಕೇಸ್ ಗಳು ಪತ್ತೆಯಾಗಿವೆ. ಇದೀಗ ಪಾಸಿಟಿವಿಟಿ ದರ 0.24 ಇದ್ದು, ಸಾವಿನ ಪ್ರಮಾಣ 4.6 ಪ್ರಮಾಣದಲ್ಲಿದೆ.
ಎವೈ 4.2 ರೂಪಾಂತರಿ ಬಗ್ಗೆ ಆತಂಕ ಬೇಡ – ಆರೋಗ್ಯ ಇಲಾಖೆ
ಎವೈ 4.2 ಬಗ್ಗೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಈ ವರೆಗೂ ಇಬ್ಬರು ಎವೈ 4.2 ಸೋಂಕಿತರು ಪತ್ತೆಯಾಗಿದ್ದು, ಇಬ್ಬರೂ ಕೂಡ ಚಿಕಿತ್ಸೆ ಬಳಿಕ ಗುಣಮುಖರಾಗಿದ್ದಾರೆ ಎಂದು ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ತಜ್ಞರು ಇದು ಲಾಕ್ಡೌನ್ ರೀತಿಯ ಪರಿಸ್ಥಿತಿಯನ್ನು ಸಮರ್ಥಿಸುವುದಿಲ್ಲ ಮತ್ತು ಕರ್ನಾಟಕದ ಜನರು ಭಯಪಡುವ ಅಗತ್ಯವಿಲ್ಲ. ಆತ್ಮತೃಪ್ತಿಗೆ ಅವಕಾಶ ನೀಡಬಾರದು ಎಂದೂ ಅವರು ಒತ್ತಿ ಹೇಳಿದರು.