ಪಂಜಾಬ್ ಚುನಾವಣೆ ರೋಚಕ ಘಟ್ಟಕ್ಕೇರಿದ್ದು ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂಬುದು ಕುತೂಹಲ ಹೆಚ್ಚಿಸಿದೆ. ಈ ಮಧ್ಯೆ ಚುನಾವಣೆಗೆ ಸ್ಪರ್ಧಿಸುವವರ ಸಂಖ್ಯೆಯಲ್ಲೂ ಪಂಜಾಬ್ ದೇಶದ ಗಮನ ಸೆಳೆದಿದೆ. ಕಳೆದ ವಾರ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಮಾಜಿ ಮುಖ್ಯಮಂತ್ರಿ ಪರಕಾಶ್ ಸಿಂಗ್ ಬಾದಲ್ (94) ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರು ಮತ್ತು ಚುನಾವಣೆಗೆ ಸ್ಪರ್ಧಿಸುತ್ತಿರುವ ಅತಿ ಹಿರಿಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಮಧ್ಯೆ ಪಂಜಾಬ್ ನ ಹೋಶಿಯಾರ್ಪುರದಲ್ಲಿ 80 ವರ್ಷದ ಓಂ ಪ್ರಕಾಶ್ ಜಖು ತಮ್ಮ 20ನೇ ಚುನಾವಣೆಗೆ ಭಾರತ ರಾಷ್ಟ್ರ ಡೆಮಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ವೃತ್ತಿಯಲ್ಲೂ ಚಮ್ಮಾರರಾಗಿರುವ ಇವರು ಜೀವನೋಪಾಯಕ್ಕಾಗಿ ಹೋಶಿಯಾರ್ಪುರದ ಕ್ಲಾಕ್ ಟವರ್ ಬಳಿ ಸಣ್ಣ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾವು ಚುನಾವಣೆ ಸ್ಪರ್ಧಿಸುತ್ತಿರುವ ಕುರಿತು ಮಾತನಾಡಿರುವ ಜಖು, ಉತ್ಸಾಹ ಕುಂದದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ. ನಾನು ನನ್ನ ಜೀವನದ ಅರ್ಧ ಭಾಗ ಚುನಾವಣೆಯಲ್ಲಿ ಹೋರಾಟ ಮಾಡುತ್ತ ಬಂದಿದ್ದೇನೆ. ಕೆಲವರು ಶಾಸಕರು ಸಹ ಆಗಿದ್ದಾರೆ ಎಂದು ಹೇಳಿದ್ದಾರೆ.
ಇದು ನನ್ನ 20ನೇ ಚುನಾವಣೆ ನಾನು ಒಮ್ಮೆಯೂ ಗೆದ್ದಿಲ್ಲ. ಆದರೆ, ನನಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಖುಷಿಯಿದೆ ಎಂದು ಹೆಮ್ಮಯಿಂದ ಹೇಳಿಕೊಳ್ಳುತ್ತಾರೆ. ಈ ಹಿಂದೆ ಬಿಎಸ್ಪಿ ಹಾಗೂ ಲೋಕ್ ಜನಶಕ್ತಿ ಪಕ್ಷದಿಂದ ಸಹ ಜಖು ಸ್ಪರ್ಧಿಸಿದ್ದಾರೆ.