ನಮ್ಮ ‘ಘರ್ ವಾಪಸಿ’ (ಮನೆಗೆ ಮರಳುವುದು) ಆಗಬೇಕೆಂದು ಅಂತಿಂದ್ರೆ, ನಿಮ್ಮ ‘ಲಾ ವಾಪಸಿ’ (ಕಾನೂನು ಹಿಂಪಡೆಯುವುದು) ಆಗಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಜ್ಞಾನ ಭವನದಲ್ಲಿ ಕೃಷಿ ಮಂತ್ರಿ ನರೇಂದ್ರ ಸಿಂಘ್ ತೋಮರ್ ಮತ್ತು ಆಹಾರ ಮಂತ್ರಿ ಪಿಯೂಷ್ ಗೋಯಲ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ರೈತ ಮುಖಂಡರು 8ನೇ ಸುತ್ತಿನ ಮಾತುಕತೆ ನಡೆಸಿದರು. ಈ ಮಾತುಕತೆ ವೇಳೆ ಕೇಂದ್ರ ಸರ್ಕಾರದ ಯಾವುದೇ ಮನವೊಲಿಕೆಯ ಪ್ರಯತ್ನಕ್ಕೆ ಸೋಲದೆ ರೈತರು ಆಡಿದ ಮಾತುಗಳಿವು.
ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಸೇರಿದಂತೆ 41 ರೈತ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಕಾಯ್ದೆಗಳು ರೈತರ ಹಿತ ಕಾಯುತ್ತವೆ. ಸಂಪೂರ್ಣವಾಗಿ ಕಾಯ್ದೆಗಳನ್ನು ಹಿಂಪಡೆಯುವ ಬದಲು ಕಾಯ್ದೆಯಲ್ಲಿರುವ ರೈತರಿಗೆ ಅನುಕೂಲವಾಗುವಂತಹ ಅಂಶಗಳ ಬಗ್ಗೆ ಚರ್ಚಿಸೋಣ. ದೇಶದ ಹಿತವನ್ನು ಗಮನದಲ್ಲಿರಿಸಿಕೊಂಡು ಚರ್ಚಿಸಿ ಎಂದು ಕೃಷಿ ಸಚಿವ ತೋಮರ್ ರೈತರ ಮನವೊಲಿಸುವ ಪ್ರಯತ್ನ ಮಾಡಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಘರ್ ವಾಪ್ಸಿ ಪದ ಪುಂಜವನ್ನು ಬಳಸಿದ ರೈತ ಮುಖಂಡರು, ಸಂಪೂರ್ಣವಾಗಿ ಕಾಯ್ದೆ ಹಿಂಪಡೆದರೆ ಮಾತ್ರ ನಾವು ಮನೆಗೆ ಮರಳುತ್ತೇವೆ. ನಾವೆಲ್ಲಿಯೂ ಹೋಗುವುದಿಲ್ಲ ಇಲ್ಲೇ ಇರುತ್ತೇವೆ. ಚರ್ಚೆ ನಡೆಯಲಿ ಎಂದು ಪಟ್ಟು ಹಿಡಿದರು.
ಸಭೆಯಲ್ಲಿ ರೈತ ಮುಖಂಡರು, ‘ನಾವು ಗೆಲ್ಲುತ್ತೇವೆ ಅಥವಾ ಸಾಯುತ್ತೇವೆ’ ಎಂಬ ಪಂಜಾಬಿ ಘೋಷಣೆಗಳ ಪ್ಲಾಕಾರ್ಡ್‌ಗಳ ಪ್ರದರ್ಶನವನ್ನೂ ಮಾಡಿದರು. ‘ಕೇಂದ್ರ ಸರ್ಕಾರಕ್ಕೆ ಈ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶವಿದ್ದಂತಿಲ್ಲ. ಮಾತುಕತೆಗಳು ಹಲವು ದಿನಗಳಿಂದ ನಡೆಯುತ್ತಲೇ ಇವೆ. ರೈತರಲ್ಲಿ ಇದು ಅಸಹನೆಗೆ ಕಾರಣವಾಗುತ್ತಿದೆ. ಸ್ಪಷ್ಟವಾಗಿ ನಿಮ್ಮ ಉತ್ತರ ತಿಳಿಸಿ ಎಂದು ರೈತರು ಪಟ್ಟು ಹಿಡಿದರು.
ನಮಗೆ ಕಾಯ್ದೆಯಲ್ಲಿ ತಿದ್ದುಪಡಿ ತರುವ ವಿಷಯದಲ್ಲಿ ಆಸಕ್ತಿ ಇಲ್ಲ. ಸಂಪೂರ್ಣವಾಗಿ ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬುದಷ್ಟೇ ನಮ್ಮ ಬೇಡಿಕೆ ಎಂದು ರೈತ ಮುಖಂಡರು ಆಗ್ರಹಿಸಿದರು.

ಸುಮಾರು ಎರಡು ಗಂಟೆಗಳ ಸಭೆಯ ನಂತರ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಕೃಷಿಮಂತ್ರಿ ತೋಮರ್, ಸಭೆಯಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಆಗಲಿಲ್ಲ. ಕಾಯ್ದೆ ಹಿಂಪಡೆಯುವುದಕ್ಕೆ ಹೊರತಾಗಿ ಬೇರೆ ಆಯ್ಕೆಗಳನ್ನು ನೀಡುವಂತೆ ಸರ್ಕಾರ ರೈತ ಮುಖಂಡರಲ್ಲಿ ಕೇಳಿಕೊಂಡಿತು. ಆದರೆ ಅಂತಹ ಆಯ್ಕೆಗಳನ್ನು ರೈತ ಮುಖಂಡರು ಸೂಚಿಸಲಿಲ್ಲ. ಜ. 15ರಂದು ಮುಂದಿನ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಸದ್ಯದ ರೈತರ ಹೋರಾಟವನ್ನು ಹಲವು ಮಾಧ್ಯಮಗಳು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ. ಹೀಗಿರುವಾಗ ಇಂದಿನ ರೈತರ ಹೋರಾಟದ ಕೂಗನ್ನು ಜನರಿಗೆ ತಲುಪಿಸುವ ಜವಾಬ್ದಾರಿ “ಮಾಸ್ ಮೀಡಿಯಾ ಫೌಂಡೇಷನ್” ಹೊತ್ತಿದೆ. ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್ʼ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ ಸಿದ್ಧಪಡಿಸಲಾಗಿದೆ.