2013 ರ ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಸೇರಿದಂತೆ 77 ಪ್ರಕರಣಗಳನ್ನು ಯಾವುದೇ ಕಾರಣಗಳನ್ನು ನೀಡದೆ ಉತ್ತರ ಪ್ರದೇಶ ಸರ್ಕಾರ ಹಿಂಪಡೆದಿದೆ ಎಂದು ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರು ಶಾಸಕರ ವಿರುದ್ಧದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವಂತೆ ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಮನವಿಯನ್ನು ಆಲಿಸಲಿದ್ದಾರೆ.
ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲ ವಿಜಯ್ ಹನ್ಸರಿಯಾ ಅವರು ವಕೀಲ ಸ್ನೇಹಾ ಕಲಿತಾ ಅವರ ಮೂಲಕ ಸಲ್ಲಿಸಿದ ವರದಿಯಲ್ಲಿ 2013 ರ ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದ ಒಟ್ಟು 510 ಪ್ರಕರಣಗಳನ್ನು ಮೀರತ್ ಜಿಲ್ಲೆಯ ಐದು ವಲಯಗಳಲ್ಲಿ 6,869 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ರಾಜ್ಯ ಸರ್ಕಾರ ಹೇಳಿರುವುದಾಗಿ ದಾಖಲಿಸಲಾಗಿದೆ.
ಈ 510 ಪ್ರಕರಣಗಳಲ್ಲಿ, 175 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ, 165 ಪ್ರಕರಣಗಳಲ್ಲಿ ಅಂತಿಮ ವರದಿಗಳನ್ನು ಸಲ್ಲಿಸಲಾಗಿದೆ, 170 ಪ್ರಕರಣಗಳನ್ನು ರದ್ದುಪಡಿಸಲಾಗಿದೆ. ಅದರ ನಂತರ ಸಿಆರ್‌ಪಿಸಿ ಸೆಕ್ಷನ್ 321 ರ ಅಡಿಯಲ್ಲಿ 77 ಪ್ರಕರಣಗಳನ್ನು ರಾಜ್ಯ ಸರ್ಕಾರ ಹಿಂಪಡೆದಿದೆ. ಸಿಆರ್‌ಪಿಸಿ ಸೆಕ್ಷನ್ 321 ರ ಅಡಿಯಲ್ಲಿ ಪ್ರಕರಣವನ್ನು ಹಿಂಪಡೆದಿರುವುದರ ಬಗ್ಗೆ ಸರ್ಕಾರವು ಯಾವುದೇ ಕಾರಣಗಳನ್ನು ನೀಡಿಲ್ಲ. ಬದಲಾಗಿ ಸಂಪೂರ್ಣ ಪರಿಶೀಲನೆಯ ನಂತರ ಆಡಳಿತವು ನಿರ್ದಿಷ್ಟ ಪ್ರಕರಣವನ್ನು ಹಿಂಪಡೆಯುವ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅದು ಹೇಳಿದೆ ಎಂದು ಹನ್ಸಾರಿಯಾ ಕೋರ್ಟಿಗೆ ವರದಿ ಸಲ್ಲಿಸಿದ್ದಾರೆ. ಸೆಕ್ಷನ್ 397 ಅಡಿಯಲ್ಲಿ ದೌರ್ಜನ್ಯದ ಅಪರಾಧಗಳಿಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾದ ಅನೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.
2013 ರ ಮುಜಾಫರ್ ನಗರ ಗಲಭೆಗೆ ಸಂಬಂಧಿಸಿದ ಈ 77 ಪ್ರಕರಣಗಳನ್ನು ಸಿಆರ್‌ಪಿಸಿ ಸೆಕ್ಷನ್ 321 ರ ಅಡಿಯಲ್ಲಿ ಹಿಂತೆಗೆದುಕೊಳ್ಳಲಾಗಿದೆ ಆದರೆ ಸಿಆರ್‌ಪಿಸಿ ಸೆಕ್ಷನ್ 401 ರ ಅಡಿಯಲ್ಲಿ ಪರಿಷ್ಕರಣೆ ಅಧಿಕಾರವನ್ನು ಚಲಾಯಿಸುವ ಮೂಲಕ ಹೈಕೋರ್ಟ್ ಸರ್ಕಾರದ ಈ ಆದೇಶವನ್ನು ಪರಿಶೀಲಿಸಬಹುದು ಎಂದು ಹನ್ಸಾರಿಯಾ ಹೇಳಿದ್ದಾರೆ.
ಎನ್‌ಡಿಟಿವಿ ವರದಿಗಳ ಪ್ರಕಾರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಜೆಪಿಯ ಮೂವರು ಶಾಸಕರಾಗಿರುವ ಸಂಗೀತ ಸೋಮ್, ಸುರೇಶ್ ರಾಣಾ ಮತ್ತು ಕಪಿಲ್ ದೇವ್ ಮತ್ತು ಸಂಸದೆ ಸಾಧ್ವಿ ಪ್ರಾಚಿ ಅವರ ಮೇಲಿನ ಪ್ರಕರಣವನ್ನು ಹಿಂದೆಗೆದುಕೊಳ್ಳಲಾಗಿತ್ತು. ಅದೇ ರೀತಿಯಾಗಿ, ಕರ್ನಾಟಕ ಸರ್ಕಾರ 62 ಪ್ರಕರಣಗಳನ್ನು ಯಾವುದೇ ಕಾರಣ ನೀಡದೆ ಹಿಂಪಡೆದಿದೆ, ತಮಿಳುನಾಡು ನಾಲ್ಕು ಪ್ರಕರಣಗಳನ್ನು ಹಿಂಪಡೆದಿದೆ, ತೆಲಂಗಾಣ 14 ಪ್ರಕರಣಗಳನ್ನು ಹಿಂಪಡೆದಿದೆ ಮತ್ತು ಕೇರಳ 36 ಪ್ರಕರಣಗಳನ್ನು ಹಿಂಪಡೆದಿದೆ ಎಂದು ಅಮಿಕಸ್ ಕ್ಯೂರಿ ಗಮನಸೆಳೆದಿದ್ದಾರೆ.
ಸ್ವತಃ ಸುಪ್ರೀಂ ಕೋರ್ಟ್ ಆಗಸ್ಟ್ 10, 2021 ರಂದು ನೀಡಿದ ಆದೇಶದಲ್ಲಿ, ಹಾಲಿ ಅಥವಾ ಮಾಜಿ ಸಂಸದ/ಶಾಸಕರ ವಿರುದ್ಧ ಯಾವುದೇ ಮೊಕದ್ದಮೆಯನ್ನು ಹೈಕೋರ್ಟ್‌ನ ಅನುಮತಿ ಇಲ್ಲದೆ ಹಿಂಪಡೆಯಬಾರದು ಎಂದು ನಿರ್ದೇಶಿಸಿದೆ ಎಂದು ಹನ್ಸರಿಯಾ ವರದಿ ಸಲ್ಲಿಸಿದ್ದಾರೆ.
“ಸೆಕ್ಷನ್ 321 ಸಿಆರ್‌ಪಿಸಿ ಅಡಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕರಣ ಹಿಂತೆಗೆದುಕೊಳ್ಳುವುದು ಅನುಮತಿಸಲ್ಪಡುತ್ತದೆ ಮತ್ತು ರಾಜಕೀಯ ಕಾರಣಗಳಿಗಾಗಿ ಹಿಂದೆಗೆದುಕೊಳ್ಳಲಾಗದು. ಇಂತಹ ಅರ್ಜಿಗಳನ್ನು ಸಾರ್ವಜನಿಕ ನೀತಿ ಮತ್ತು ನ್ಯಾಯದ ಹಿತದೃಷ್ಟಿಯಿಂದ ಹಿಂದೆಗೆದುಕೊಳ್ಳಬಹುದೇ ಹೊರತು ಕಾನೂನಿನ ಪ್ರಕ್ರಿಯೆಯನ್ನು ತಡೆಯಲು ”ಎಂದು ಅವರು ಹೇಳಿದ್ದಾರೆ.
ರಾಜಕೀಯ ಮತ್ತು ಬಾಹ್ಯ ವಿಚಾರಗಳಿಗಾಗಿ ಪ್ರಾಸಿಕ್ಯೂಷನ್ ಹಿಂತೆಗೆದುಕೊಳ್ಳುವಲ್ಲಿ ರಾಜ್ಯವು ಪದೇ ಪದೇ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯವು ಈಗಾಗಲೇ ನೀಡಲಾದ ಮಾರ್ಗಸೂಚಿಗಳ ಜೊತೆಗೆ ಕೆಲವು ನಿರ್ದೇಶನಗಳನ್ನು ನೀಡಬೇಕು ಎಂದು ತನ್ನ ವರದಿಯಲ್ಲಿ ಅಮಿಕಸ್ ಹೇಳಿದ್ದಾರೆ.
ಸೆಪ್ಟೆಂಬರ್ 16, 2020 ಈ ನ್ಯಾಯಾಲಯದ ಆದೇಶದ ನಂತರ ಸೆಕ್ಷನ್ 321 ಸಿಆರ್‌ಪಿಸಿ ಅಡಿಯಲ್ಲಿ ಹಿಂಪಡೆಯಲಾದ ಎಲ್ಲಾ ಪ್ರಕರಣಗಳನ್ನು ಸಂಬಂಧಿತ ಹೈಕೋರ್ಟ್‌ಗಳು ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಂಡು ಪರಿಶೀಲಿಸಿ ಪರಿಷ್ಕರಿಸಬಹುದು ಎಂದು ಅವರು ಹೇಳಿದ್ದಾರೆ.
ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಮಹತ್ವದ ಆದೇಶದಲ್ಲಿ ಆಗಸ್ಟ್ 10 ರಂದು ಸುಪ್ರೀಂ ಕೋರ್ಟ್ ರಾಜ್ಯ ಪ್ರಾಸಿಕ್ಯೂಟರ್‌ಗಳ ಅಧಿಕಾರವನ್ನು ಮೊಟಕುಗೊಳಿಸಿ ಮತ್ತು ಹೈಕೋರ್ಟ್‌ಗಳ ಪೂರ್ವಾನುಮತಿಯಿಲ್ಲದೆ ಕ್ರಿಮಿನಲ್ ಪ್ರೊಸೀಜರ್ (CrPC) ಅಡಿಯಲ್ಲಿ ಶಾಸಕರ ವಿರುದ್ಧದ ಮೊಕದ್ದಮೆಯನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಆದೇಶಿಸಿತ್ತು. ಕೇಂದ್ರ ಮತ್ತು ಸಿಬಿಐನಂತಹ ಸಂಸ್ಥೆಗಳು ಅಗತ್ಯ ಸ್ಥಿತಿ ವರದಿಗಳನ್ನು ಸಲ್ಲಿಸದಿರುವ ಬಗ್ಗೆ ಅದು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು ಮತ್ತು ರಾಜಕಾರಣಿಗಳ ವಿರುದ್ಧದ ಅಪರಾಧ ಪ್ರಕರಣಗಳ ಮೇಲ್ವಿಚಾರಣೆಗೆ ಉನ್ನತ ನ್ಯಾಯಾಲಯದಲ್ಲಿ ವಿಶೇಷ ಪೀಠವನ್ನು ಸ್ಥಾಪಿಸುವುದಾಗಿ ಹೇಳಿತ್ತು.
ನ್ಯಾಯಾಲಯವು ನೀಡಿದ ಮಾರ್ಗಸೂಚಿಗಳ ಅಡಿಯಲ್ಲಿ, ಸೆಪ್ಟೆಂಬರ್ 16, 2020 ರಿಂದ ಬಾಕಿ ಇರುವ ಅಥವಾ ಈಗಾಗಲೇ ಹಿಂಪಡೆದ ಪ್ರಕರಣಗಳನ್ನು ಪರಿಶೀಲಿಸಲು ಹೈಕೋರ್ಟ್‌ಗಳನ್ನು ಕೋರಲಾಗಿದೆ ಎಂದು ಅದು ಹೇಳಿದೆ.
ಇನ್ನೊಂದು ಪ್ರಮುಖ ನಿರ್ದೇಶನದಲ್ಲಿ, ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಗಳ ನ್ಯಾಯಾಧೀಶರನ್ನು ಮುಂದಿನ ಆದೇಶದವರೆಗೆ ವರ್ಗಾವಣೆ ಮಾಡಬಾರದು ಎಂದು ಅದು ಆದೇಶಿಸಿತ್ತು. ಅಲ್ಲದೆ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳಲು, ವಿಶೇಷ ನ್ಯಾಯಾಲಯಗಳು ಅಥವಾ ಸಿಬಿಐ ನ್ಯಾಯಾಲಯಗಳ ಅಧ್ಯಕ್ಷತೆ ವಹಿಸುವ ಅಧಿಕಾರಿಗಳಿಗೆ ಮುಂದಿನ ಆದೇಶದವರೆಗೆ ಸಂಸದರು ಅಥವಾ ಶಾಸಕರ ವಿಚಾರಣೆಯನ್ನು ಒಳಗೊಂಡಂತೆ ತಮ್ಮ ಪ್ರಸ್ತುತ ಹುದ್ದೆಗಳಲ್ಲಿ ಮುಂದುವರಿಯುವಂತೆ ನಿರ್ದೇಶಿಸುವುದು ಅಗತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.