ಎರಡನೇ ಅಲೆ ಭೀಕರತೆ ಈಗಲೂ ಕಣ್ಣೆದುರು ಬಂದರೆ ಭಯದ ಭಾವ ಎಲ್ಲರಲ್ಲೂ. ಹೀಗಾಗಿ ಮೂರನೇ ಅಲೆ ಎಂದರೆ ಎಲ್ಲೆಡೆ ಭೀತಿ ಮನೆ ಮಾಡಿದೆ. ಇದರ ನಡುವೆ ಬಿಬಿಎಂಪಿ ಬೆಂಗಳೂರಿಗರಿಗೆ ಗುಡ್ ನ್ಯೂಸ್‌ವೊಂದನ್ನು ಕೊಟ್ಟು ಅಲ್ಪ ಮಟ್ಟಿಗೆ ರಿಲ್ಯಾಕ್ಸ್ ಮೂಡ್ ನಲ್ಲಿದೆ.
ಬೆಂಗಳೂರಿಗರಿಗೆ ಗುಡ್ ನ್ಯೂಸ್.. ಪಾಲಿಕೆಗೆ ರಿಲೀಫ್.!!
ಒಂದ್ಕಡೆ ಜನರ ನಿರ್ಲಕ್ಷ್ಯದ ಚಾತಿ. ಮತ್ತೊಂದೆಡೆ ಕೊರೋನಾ ಮೂರನೇ ಅಲೆ ಭೀತಿ. ಇದರ ನಡುವೆ ಪಾಲಿಕೆ ನಗರದಲ್ಲಿ ಬರದ ಲಸಿಕೆ ಹಂಚಿಕೆ ಮಾಡ್ತಿದೆ. ಅಪ್ಪಿ ತಪ್ಪಿ ಏನಾದರು ಮೂರನೇ ಅಲೆ ಬಂದು ಬಿಟ್ಟರೆ ಎರಡನೇ ಅಲೆಯಲ್ಲಾದಂಥಾ ಪರಿಸ್ಥಿತಿ ಈ ಬಾರಿ ಆಗಬಾರದು ಎನ್ನುವುದು ಪಾಲಿಕೆಯ ಒಟ್ಟು ಲೆಕ್ಕಾಚಾರ. ಹೀಗಾಗಿ ಬಗೆಬಗೆಯ ಕಸರತ್ತನ್ನು ಕೊರೋನಾ ತಡೆಗಟ್ಟಲು ಬಿಬಿಎಂಪಿ ಮಾಡುತ್ತಿದೆ. ಈ ಎಲ್ಲದರ ಮಧ್ಯೆ ಬಿಬಿಎಂಪಿ ಇತ್ತೀಚೆಗೆ ಸೆರೋ ಎನ್ನುವ ಸರ್ವೇಯೊಂದನ್ನು ಮಾಡಿಸಿತ್ತು. ಒಟ್ಟಾರೆ ಈವರೆಗಿನ ಕೊರೋನಾ ಗ್ರಾಫ್ ಏನು..? ಏನೆಲ್ಲಾ ಬದಲಾವಣೆ ಆಗಿದೆ..? ಇನ್ನೇನು ಮಾಡಬೇಕು ಎಂಬ ನೆಲೆಗಟ್ಟಿಲ್ಲ ತಜ್ಞ ವೈದ್ಯರ ತಂಡವೊಂದನ್ನು ರಚಿಸಿ ಸೆರೋ ಸರ್ವೇಯನ್ನು ಪಾಲಿಕೆ ನಡೆಸಿತ್ತು. ಆ ಸರ್ವೇಯ ಮೊದಲ ಹಂತದ ವರದಿ ಈಗ ಬಿಬಿಎಂಪಿ ಕೈ ಸೇರಿದೆ. ವರದಿಯಲ್ಲಿ ಬೆಂಗಳೂರಿಗರಿಗೆ ಗುಡ್ ನ್ಯೂಸ್ ಇದ್ದರೆ, ಪಾಲಿಕೆ ಈವರೆಗೆ ಮಾಡಿದ ಕೆಲಸಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.
ನಗರದ 75% ಜನರಲ್ಲಿ ಕೊರೋನಾ ಪ್ರತಿರೋಧದ ಶಕ್ತಿ ಉತ್ಪತಿ.!!
ಲಸಿಕೆ ಹೇಗೆ ಕೆಲಸ ಮಾಡುತ್ತಿದೆ.? ಕೊರೋನಾ ಜನರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ.? ಹೀಗೆ ಕೊರೋನಾ ಗ್ರಾಫ್ ತಿಳಿದುಕೊಳ್ಳಲು ಪಾಲಿಕೆ ಈ ಸೆರೋ ಸರ್ವೇಯನ್ನು ನಡೆಸಿತ್ತು. ಈ ಸರ್ವೇಯಲ್ಲಿ ಇದೀಗ ನಗರದ 75% ರಷ್ಟು ಮಂದಿಯಲ್ಲಿ ರೋಗ ನಿರೋಧಕ ಶಕ್ತಿ ಉತ್ಪತಿಯಾಗಿದೆ ಎಂದು ಗೊತ್ತಾಗಿದೆ. ಅಂದರೆ ಸೋಂಕು ತಗುಲಿದರೂ ಸಾವು ನೋವಿನ ಪ್ರಮಾಣ ಕಡಿಮೆ ಇರಲಿದೆ ಎಂದರ್ಥ. ನುರಿತ ವೈದ್ಯರ ತಂಡ ಲಸಿಕೆ ಪಡೆದ 1000 ಮಂದಿ ಹಾಗೂ ಪಡೆಯದ 1000 ಮಂದಿಯನ್ನು ಈ ಸೆರೋ ಅಧ್ಯಯನಕ್ಕೆ ಒಳಪಡಿಸಿದೆ. 18 ವರ್ಷದ ಕೆಳಗಿನ 30% ರಷ್ಟು ಮಂದಿ, 18 ರಿಂದ 44 ವರ್ಷದ 50% ರಷ್ಟು ಮಂದಿ ಹಾಗೂ 45 ವರ್ಷ ಮೇಲ್ಪಟ್ಟ 20% ರಷ್ಟು ಮಂದಿಯನ್ನು ವಯೋಮಿತಿಗೆ ಅನುಗುಣವಾಗಿ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಲಸಿಕೆ ಪಡೆದವರಲ್ಲೂ ಪಡೆಯದವರಲ್ಲೂ 75% ರೋಗ ನಿರೋಧಕ ಶಕ್ತಿ ಉತ್ಪತಿಯಾಗಿರುವುದು ದೃಢ ಪಟ್ಟಿದೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸೆರೋ ಸರ್ವೇ ವರದಿ ಬಿಬಿಎಂಪಿ ಕೈ ಸೇರಿದೆ. ಹಲವು ವಿಚಾರಗಳು ವರದಿಯಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ಬಹಿರಂಗವಾಗಿ ನಾನು ಮಾಹಿತಿ ಕೊಡುವುದಿಲ್ಲ. ಈ ವರದಿ ಆಧರಿಸಿ ಹಲವು ಕೆಲಸ ಮಾಡುವುದಿದೆ. ಈ ಬಗ್ಗೆ ನಿಖರವಾದ ಒಂದು ಸ್ಟಡಿ ಬಿಬಿಎಂಪಿ ಅಧಿಕಾರಿಗಳು ಮಾಡಲಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸೆರೋ ಸರ್ವೇ ನಡೆಸಿದ ತಂಡವೇ ನೀಡಲಿದೆ ಎಂದು ಹೇಳಿದರು.
ಇನ್ನು ನಗರದ ಎಲ್ಲಾ ವಲಯದಿಂದಲೂ ಸರ್ವೇಗೆ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು. ಲಸಿಕೆ ಪಡೆಯದಿದ್ದರೂ ಆಹಾರ ಮತ್ತು ವ್ಯಾಯಾಮದ ಮೊರೆ ಹೋಗಿ ರೋಗನಿರೋಧಕ ಶಕ್ತಿ ಉತ್ಪತಿಯಾಗಿದೆ ಎಂದು ಸರ್ವೇ ವರದಿಯಲ್ಲಿ ಉಲ್ಲೇಖಮಾಡಲಾಗಿದೆ. ಅಂದಹಾಗೆ, ಕಿದ್ವಾಯಿ ಆಸ್ಪತ್ರೆಯ ವೈದ್ಯರ ತಂಡದಿಂದ ಈ ಸೆರೋ ಸರ್ವೇ ಮಾಡಲಾಗಿದೆ. ಈ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಬಿಬಿಎಂಪಿ ಮೂರನೇ ಅಲೆಗೆ ಸಿದ್ಧತೆಯನ್ನು ಇನ್ನು ಮುಂದೆ ಮಾಡಿಕೊಳ್ಳಲಿದೆ.