ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ರದ್ದು ನೀತಿ ಮತ್ತು ದೋಷಪೂರಿತ ಸರಕು ಮತ್ತು ಸೇವಾ ತೆರಿಗೆಯಿಂದಾಗಿ (ಜಿಎಸ್ ಟಿ) ದೇಶದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿರುವ ನಡುವೆಯೇ ಕೇಂದ್ರ ವಾಣಿಜ್ಯ ಹಾಗೂ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಅವರು ಜಾಗತಿಕ ದೈತ್ಯ ಕಂಪೆನಿ ಅಮೆಜಾನ್ ಸಂಸ್ಥೆಯ ಬಗ್ಗೆ ಆಡಿರುವ ಮಾತುಗಳು ಸರ್ಕಾರದ ದ್ವೇಷದ ನೀತಿ ಹಾಗೂ ಆದ್ಯತೆಯನ್ನು ಪರಿಚಯಿಸಿದೆ. ಸರ್ಕಾರದ ನೀತಿ-ನಿರ್ಧಾರಗಳು ಗಾಯದ ಮೇಲೆ ಬರೆ ಎಳೆಯುವಂತಿದ್ದು, ಅಸಂಖ್ಯಾತ ಯುವಕ-ಯುವತಿಯರ ಭವಿಷ್ಯದ ಜೊತೆ ಚೆಲ್ಲಾಟ ಮುಂದುವರಿಸಿದೆ.
ಕಳೆದ ವಾರ ಮೂರು ದಿನಗಳ ಭಾರತ ಭೇಟಿ ಕೈಗೊಂಡಿದ್ದ ಅಮೆಜಾನ್ ಮುಖ್ಯಸ್ಥ ಹಾಗೂ ಜಗತ್ತಿನ ಕೆಲವೇ ಕೆಲವು ಕೋಟ್ಯಾಧಿಪತಿಗಳಲ್ಲಿ ಒಬ್ಬರಾದ ಜೆಫ್ ಬಿಜೋಸ್ ಅವರು ಭಾರತದಲ್ಲಿ 7,100 ಕೋಟಿ ರುಪಾಯಿ ಬಂಡವಾಳ ಹೂಡುವುದರ ಜೊತೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಮಾತನಾಡಿದ್ದ ಸಚಿವ ಪೀಯೂಷ್ ಗೋಯೆಲ್ ಅವರು “ಅಮೆಜಾನ್ ಹೂಡಿಕೆಯಿಂದ ಭಾರತಕ್ಕೆ ಯಾವುದೇ ಪ್ರಯೋಜನ ಆಗದು” ಎಂದು ಹೇಳಿ ಆನಂತರ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ಸರಿಯಾಗಿ ವರದಿ ಮಾಡಿಲ್ಲ ಎಂದು ಹೇಳುವ ಮೂಲಕ ನುಣಿಚಿಕೊಳ್ಳುವ ಯತ್ನ ಮಾಡಿದ್ದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸ್ಥಾನ ಪಡೆಯಬಲ್ಲ ಪಟ್ಟಿಯಲ್ಲಿರುವ ಗೋಯೆಲ್ ಅವರು ಸರ್ಕಾರದಲ್ಲಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ನೀಲಿಗಣ್ಣಿನ ನಾಯಕ. ಇಂಥ ಪ್ರಮುಖ ಸ್ಥಾನದಲ್ಲಿರುವ ಗೋಯೆಲ್ ಹೀಗೇಕೆ ಮಾತನಾಡಿದರು ಎಂಬುದಕ್ಕೆ ಕಾರಣವಿಲ್ಲದಿಲ್ಲ. ಮೋದಿ ಸರ್ಕಾರ ಕಳೆದ ಕೆಲವು ತಿಂಗಳಲ್ಲಿ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಕೈಗೊಂಡಿರುವ ಅಪಾಯಕಾರಿ ತೀರ್ಮಾನಗಳಾದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಹಾಗೂ ಮುಸ್ಲಿಮೇತರ ಆರು ಧರ್ಮಗಳ ಜನರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ (ಸಿಎಎ) ಪೌರತ್ವ ಕಲ್ಪಿಸುವ ನಿರ್ಧಾರಗಳನ್ನು ವಿದೇಶಿ ಮಾಧ್ಯಮಗಳು ಕಟುವಾಗಿ ಟೀಕಿಸಿವೆ. ವಿಶೇಷವಾಗಿ ಜೆಫ್ ಬಿಜೋಸ್ ಒಡೆತನದ ಪ್ರಸಿದ್ಧ ಅಂತಾರಾಷ್ಟ್ರೀಯ ಪತ್ರಿಕೆಯಾದ ‘ವಾಷಿಂಗ್ ಟನ್ ಪೋಸ್ಟ್’ ಮೋದಿ ಸರ್ಕಾರದ ವಿವಾದಾತ್ಮಕ ತೀರ್ಮಾನಗಳನ್ನು ಕಟುವಾಗಿ ಟೀಕಿಸಿದ್ದಲ್ಲದೇ ಭಾರತದ ಪತ್ರಕರ್ತೆಯರಾದ ರಾಣಾ ಆಯೂಬ್ ಹಾಗೂ ಬರ್ಕಾ ದತ್ ಅವರಿಗೆ ಪತ್ರಿಕೆಯಲ್ಲಿ ಭಾರತದ ವಿದ್ಯಮಾನಗಳ ಬಗ್ಗೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಇದರಿಂದ ಜಗತ್ತಿನ ದೃಷ್ಟಿಯಲ್ಲಿ ಮೋದಿ ನೇತೃತ್ವದ ಭಾರತದ ವರ್ಚಸ್ಸಿಗೆ ಭಾರಿ ಧಕ್ಕೆಯಾಗಿದೆ.
ಇದರಿಂದ ಕೆರಳಿದ್ದ ಕೇಂದ್ರ ಸರ್ಕಾರವು ಭಾರತ ಭೇಟಿ ಕೈಗೊಂಡಿದ್ದ ಜೆಫ್ ಬಿಜೋಸ್ ಅವರನ್ನು ಪ್ರಧಾನಿ ಅಥವಾ ಸಂಪುಟದ ಯಾವೊಬ್ಬ ಸದಸ್ಯರೂ ಭೇಟಿ ಮಾಡುವ ಪ್ರಯತ್ನ ಮಾಡಲಿಲ್ಲ. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಬಿಜೋಸ್ ತಮ್ಮ ಉದ್ಯಮ ಕೇಂದ್ರಿತ ಹೇಳಿಕೆಗಳ ಮೂಲಕ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಅಮೆರಿಕಾಕ್ಕೆ ತೆರಳಿದ್ದಾರೆ.
ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ ಗೆ ಏರಿಸುವ ಮೂಲಕ ವಿಶಿಷ್ಟ ಸಾಧನೆ ಮಾಡುವ ಮಾತುಗಳನ್ನು ಬಿಜೆಪಿಯ ಎಲ್ಲಾ ನಾಯಕರು ಆಡುತ್ತಿದ್ದಾರೆ. 2014ರ ಲೋಕಸಭಾ ಚುನಾವಣೆಗೂ ಮುನ್ನ ಮೋದಿಯವರು ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಘೋಷಿಸಿದ್ದರು. 60ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿರುವ ನರೇಂದ್ರ ಮೋದಿಯವರು ಭಾರತವು ಉದ್ಯಮಕ್ಕೆ ಪ್ರಶಸ್ತ ಸ್ಥಳವಾಗಿದ್ದು, ಹೂಡಿಕೆ ಮಾಡಲು ಮುಂದಾಗುವಂತೆ ಉದ್ಯಮಿಗಳಿಗೆ ಪಂಥಾಹ್ವಾನ ನೀಡಿದ್ದಾರೆ. ಕ್ಲಿಷ್ಟಕರವಾದ ಉದ್ಯಮ ನೀತಿಗಳನ್ನು ಸರಳಗೊಳಿಸಲಾಗಿದ್ದು, ಉದ್ಯಮ ಪೂರಕವಾಗಿ ಏಕಗವಾಕ್ಷಿ ನೀತಿ ಜಾರಿಗೆ ತರಲಾಗಿದೆ ಎಂದು ಹೇಳುತ್ತಾ ಬಂದಿದ್ದಾರೆ. ಇಂಥ ಸಂದರ್ಭದಲ್ಲಿ 7,100 ಕೋಟಿ ರುಪಾಯಿ ಹೂಡಿಕೆ ಹಾಗೂ 10 ಲಕ್ಷ ಉದ್ಯೋಗ ಸೃಷ್ಟಿಸುವ ಬಿಜೋಸ್ ಅವರನ್ನು ಮೋದಿ ಸರ್ಕಾರವು ನಿರ್ಲಕ್ಷಿಸಿರುವುದಕ್ಕೆ ಕಾರಣವೇನಿದೆ?
ಬಿಜೋಸ್ ಭಾರತ ಭೇಟಿಯ ಸಂದರ್ಭದಲ್ಲಿ ಬಿಜೆಪಿಯ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ವಿಜಯ್ ಚೌತೈವಾಲೆ ಅವರು ಬಿಜೋಸ್ ಒಡೆತನದ ವಾಷಿಂಗ್ ಪೋಸ್ಟ್ ಪೂರ್ವಾಗ್ರಹಪೀಡಿತವಾಗಿ ಭಾರತದ ನೀತಿ ನಿರ್ಧಾರಗಳನ್ನು ಕಟುವಾಗಿ ಟೀಕಿಸುತ್ತಿದೆ. ಈ ಮೂಲಕ ಭಾರತದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದೆ. “ನಿಮ್ಮ ಸಂಪಾದಕೀಯ ಮಂಡಳಿಗೆ ಸಲಹೆ ನೀಡಿ. ಇಲ್ಲವಾದಲ್ಲಿ ನಿಮ್ಮ ಸಮಯ ಮತ್ತು ಹಣ ಎರಡೂ ವ್ಯರ್ಥ” ಎಂದು ವಿಜಯ್ ಅವರು ಬಿಜೋಸ್ ಗೆ ಟ್ವೀಟ್ ಮೂಲಕ ಸಲಹೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಾಷಿಂಗ್ ಟನ್ ಪೋಸ್ಟ್ ಪತ್ರಿಕೆಯ ಜಾಗತಿಕ ವಿದ್ಯಮಾನಗಳ ಹಿರಿಯ ಸಂಪಾದಕ ಎಲಿ ಲುಪೇಜ್ ಅವರು “ಪತ್ರಿಕೆ ಏನು ಬರೆಯಬೇಕು ಮತ್ತು ಬರೆಯಬಾರದು ಎಂಬುದನ್ನು ಬಿಜೋಸ್ ಹೇಳುವುದಿಲ್ಲ.
ಸರ್ಕಾರವನ್ನು ಓಲೈಸುವುದು ಸ್ವತಂತ್ರ ಪತ್ರಿಕೋದ್ಯಮವಲ್ಲ. ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಕ್ಕೆ ಪೂರಕವಾಗಿ ವರದಿಗಾರರು ಹಾಗೂ ಲೇಖಕರು ಕೆಲಸ ಮಾಡುತ್ತಿದ್ದಾರೆ” ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. ಆನಂತರ ಲುಪೇಜ್ ಹಾಗೂ ವಿಜಯ್ ನಡುವೆ ಟ್ವಿಟರ್ ಕದನ ನಡೆದಿದೆ. ಇದರ ಅರ್ಥ ಸರಳವಾಗಿದೆ. ಕಟುಟೀಕೆಯನ್ನು ಮೋದಿ ಸರ್ಕಾರ ಸಹಿಸುವುದಿಲ್ಲ ಎನ್ನುವುದೇ ಆಗಿದೆ. ಇದಕ್ಕಾಗಿ ಜಗತ್ತಿನ ಪ್ರತಿಷ್ಠಿತ ಉದ್ಯಮಿಯನ್ನು ಮೋದಿ ಸರ್ಕಾರ ನೆಪಮಾತ್ರಕ್ಕೂ ಮಾತನಾಡಿಸುವ ಯತ್ನ ಮಾಡಲಿಲ್ಲ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.
ಟೀಕೆ-ಟಿಪ್ಪಣಿಯನ್ನು ಮೋದಿ ಸರ್ಕಾರ ಸಹಿಸುವುದಿಲ್ಲ ಎನ್ನುವುದಕ್ಕೆ ಇತ್ತೀಚೆಗೆ ಹಲವು ಉದಾಹರಣೆಗಳು ಕಾಣಸಿಗುತ್ತವೆ. ಬಜಾಜ್ ಆಟೊ ಮುಖ್ಯಸ್ಥ ರಾಹುಲ್ ಬಜಾಜ್ ಅವರು “ಭಾರತದಲ್ಲಿ ಭಯದ ವಾತಾವರಣವಿದ್ದು, ಮೋದಿ ಸರ್ಕಾರ ಟೀಕೆಯನ್ನು ಸಹಿಸುವುದಿಲ್ಲ ಎಂಬ ಭಾವನೆ ನಮ್ಮಲ್ಲಿದೆ” ಎಂದು ಹೇಳಿದ್ದರು. ಇದಕ್ಕೂ ಮುನ್ನ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಷಾ, ಪಿರಮಾಲ್ ಸಮೂಹದ ಅಧ್ಯಕ್ಷ ಅಜಯ್ ಪಿರಮಾಲ್ ಅವರು “ಸರ್ಕಾರ ಹಾಗೂ ಕೈಗಾರಿಕಾ ಕ್ಷೇತ್ರದ ನಡುವೆ ಅಗತ್ಯವಾಗಿ ಇರಬೇಕಾದ ಸಂಬಂಧವಿಲ್ಲ” ಎನ್ನುವ ಮೂಲಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಬಿಜೆಪಿ ನಾಯಕರು ಉದ್ಯಮಿಗಳ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.
ಇತ್ತೀಚೆಗೆ ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯಾ ನಾದೆಲ್ಲಾ ಅವರು ಸಿಎಎ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಆಗಲೂ ಬಿಜೆಪಿ ನಾಯಕರು ನಾದೆಲ್ಲಾ ಅವರ ವಿರುದ್ಧ ಪ್ರತಿದಾಳಿ ನಡೆಸಿದ್ದರಲ್ಲದೇ ಸಿಎಎ ಬಗ್ಗೆ ನಾದೆಲ್ಲಾ ಅವರಿಗೆ ಮಾಹಿತಿ ಇಲ್ಲ ಎಂದು ವ್ಯಂಗ್ಯದ ಮೂಲಕ ದಾಳಿ ನಡೆಸಿದ್ದರು. ನೋಬೆಲ್ ವಿಜೇತರಾದ ಅಮರ್ತ್ಯ ಸೇನ್, ಅಭಿಜಿತ್ ಬ್ಯಾನರ್ಜಿ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ರಘುರಾಜ್ ಅವರು ಭಾರತದ ಆರ್ಥಿಕ ನೀತಿ ಹಾಗೂ ಮೋದಿ ಸರ್ಕಾರದ ವಿಭಜನಕಾರಿ ನೀತಿ-ನಿರ್ಧಾರಗಳು ದೇಶದ ಆರ್ಥಿಕತೆಯ ಮೇಲೆ ಉಂಟುಮಾಡಬಹುದಾದ ದುಷ್ಪರಿಣಾಮದ ಬಗ್ಗೆ ನಿರಂತವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದ್ಯಾವುದಕ್ಕೂ ಮೋದಿ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ಟೀಕಾಕಾರನ್ನು ರಾಷ್ಟ್ರವಿರೋಧಿಗಳು, ಪಿತೂರಿದಾರರು, ಎಡಪಕ್ಷ ಬೆಂಬಲಿತರು ಹಾಗೂ ಮೋದಿ ವಿರೋಧಿಗಳು ಎಂದು ಬಿಂಬಿಸುವ ಕೆಲಸವನ್ನು ನಿರಂತವಾಗಿ ಮಾಡುತ್ತಿದೆ.
ಕಳೆದ ಮೂರು ಮಾಸಿಕದಲ್ಲಿ ಭಾರತದ ಜಿಡಿಪಿ ಕುಸಿತದ ಹಾದಿ ಹಿಡಿದಿದೆ. ನಿರುದ್ಯೋಗ ಮಟ್ಟವು ಕಳೆದ 45 ವರ್ಷಗಳಲ್ಲೇ ಅಧಿಕ ಎಂದು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತಿವೆ. ನಿರುದ್ಯೋಗ ಹೆಚ್ಚಳ, ಅಗತ್ಯ ಉತ್ಪನ್ನಗಳು ದುಬಾರಿಯ ಹಾದಿ ಹಿಡಿದಿವೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜಕೀಯದ ಹೊರತಾಗಿ ಉದ್ಯಮಿಗಳು, ತಜ್ಞರ ಸಲಹೆ-ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದ ಮೋದಿ ಸರ್ಕಾರವು ದ್ವೇಷ ಹಾಗೂ ಪ್ರತೀಕಾರಕ್ಕೆ ಇಳಿದಿರುವುದು ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ.