ಪಂಜಾಬ್ ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಪಿಎಂ ಕೇರ್ಸ್ ಫಂಡ್‌ನಿಂದ ಪಡೆದ ಮತ್ತು ಆಗ್ವಾ ಹೆಲ್ತ್‌ಕೇರ್‌ನಿಂದ ತಯಾರಿಸಲ್ಪಟ್ಟ 80 ವೆಂಟಿಲೇಟರ್‌ಗಳಲ್ಲಿ 71 ವೆಂಟಿಲೇಟರ್‌ಗಳು ವಿವಿಧ ತಾಂತ್ರಿಕ ವೈಫಲ್ಯಗಳಿಂದಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಪ್ರಸ್ತುತ ಆಸ್ಪತ್ರೆಯಲ್ಲಿ 310 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಈಗಾಗಲೇ ಇದ್ದ 39 ವೆಂಟಿಲೇಟರ್‌ಗಳಲ್ಲಿ 2 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಇದೀಗ ಹೊಸದಾಗಿ ಬಂದ ವೆಂಟಲೇಟರ್‌ಗಳೂ ಕಾರ್ಯ ನಿರ್ವಹಿಸದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಅರಿವಳಿಕೆ ತಜ್ಞರು ಮತ್ತು ತೀವ್ರ ನಿಗಾ ವೈದ್ಯರು ಕೇಂದ್ರವು ಕಳುಹಿಸಿದ ವೆಂಟಿಲೇಟರ್‌ಗಳನ್ನು ನಂಬಲಾಗುವುದಿಲ್ಲ ಎಂದು ಹೇಳುತ್ತಾರೆ. ಏಕೆಂದರೆ ಅವುಗಳು ಒಂದು ಅಥವಾ ಎರಡು ಗಂಟೆಗಳ ಕಾಲ ಕಾರ್ಯನಿರ್ವಹಿಸಿ ಆಮೇಲೆ ಹಠಾತ್ತನೆ ನಿಂತುಬಿಡುತ್ತವೆ.
ಪ್ರತಿ ರೋಗಿಯ ಆಮ್ಲಜನಕದ ಅವಶ್ಯಕತೆ ವಿಭಿನ್ನವಾಗಿರುವುದರಿಂದ ವಿವಿಧ ಹಂತಗಳಲ್ಲಿ ಆಮ್ಲಜನಕವನ್ನು ಒದಗಿಸುವುದು ವೆಂಟಿಲೇಟರ್‌ನ ಮುಖ್ಯ ಕಾರ್ಯವಾಗಿದೆ. ಈ ವೆಂಟಿಲೇಟರ್‌ಗಳನ್ನು ಬಳಸಿದ ಅರ್ಧ ಘಂಟೆಯೊಳಗೆ ಒತ್ತಡ ಕಡಿಮೆಯಾಗುತ್ತದೆ ಎಂದು ವೈದ್ಯರು ದೂರಿದ್ದಾರೆ. “ಈ ವೆಂಟಿಲೇಟರ್‌ಗಳನ್ನು ಬಳಸುವಾಗ ನಾವು ಸಾಕಷ್ಟು ಗಮನ ಹರಿಸಬೇಕಾಗುತ್ತದೆ. ಯಾವುದೇ ಸಮಸ್ಯೆಯನ್ನು ತಪ್ಪಿಸಲು ರೋಗಿಯ ಬಳಿ ಇರಬೇಕಾದುದರಿಂದ ಇದು ಒಂದು ಸವಾಲಾಗಿದೆ, ಪ್ರಸ್ತುತ ಸಂದರ್ಭಗಳಲ್ಲಿ ನಿಜವಾಗಿಯೂ ಇದು ಕಷ್ಟಕರವಾಗಿದೆ, ”ಎಂದು ವೈದ್ಯರು ಹೇಳುತ್ತಾರೆ.

ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿಯಾಗಿರುವ ಡಾ.ರಾಜ್ ಬಹದ್ದೂರ್ ಅವರು “ನಾವು ಈ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಿದ್ದೇವೆ. ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಒದಗಿಸಲಾದ ವೆಂಟಿಲೇಟರ್‌ಗಳ ಗುಣಮಟ್ಟ ಗಮನಾರ್ಹವಾಗಿ ಕೆಳಮಟ್ಟದ್ದಾಗಿದೆ. ಅಲ್ಲದೆ ಯಂತ್ರಗಳು ಸಹ ನಿರಂತರವಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾದ್ದರಿಂದ ನಾವು ದುರಸ್ತಿ ಕಾರ್ಯವಿಧಾನವನ್ನು ಹೊಂದುವವರೆಗೆ ರೋಗಿಗಳಿಗೆ ಇವುಗಳನ್ನು ಬಳಸಲಾಗುವುದಿಲ್ಲ ” ಎಂದು ಹೇಳಿದ್ದಾರೆ.
ಈ ವೆಂಟಿಲೇಟರ್‌ಗಳ ದುರಸ್ತಿಗಾಗಿ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರನ್ನು ನೇಮಿಸಿಕೊಳ್ಳಲು ಪಂಜಾಬ್ ಮುಖ್ಯ ಕಾರ್ಯದರ್ಶಿ ಅನುಮೋದನೆ ನೀಡಿದ್ದಾರೆ. “ಅವರು ಮುಂದಿನ 24 ಗಂಟೆಗಳಲ್ಲಿ ಫರೀದ್ಕೋಟ್ ತಲುಪುವ ನಿರೀಕ್ಷೆಯಿದೆ” ಎಂದು ಮೂಲಗಳು ತಿಳಿಸಿವೆ.

“ನಾವು ಈ ವೆಂಟಿಲೇಟರ್‌ಗಳನ್ನು ಒದಗಿಸಿದ ಏಜೆನ್ಸಿಯೊಂದಿಗೆ ದೀರ್ಘಕಾಲೀನ ಸಮಗ್ರ ನಿರ್ವಹಣಾ ಒಪ್ಪಂದವನ್ನು ಬಯಸುತ್ತೇವೆ” ಎಂದು ಡಾ ಬಹದ್ದೂರ್ ಹೇಳಿದರು, ಈ ಎಲ್ಲ ವಿಲಕ್ಷಣಗಳ ಹೊರತಾಗಿಯೂ, ಆಸ್ಪತ್ರೆಯ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ರೋಗಿಗಳನ್ನು ನೋಡಿಕೊಳ್ಳಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.