ಸ್ಪಿನ್ನರ್ ಗಳ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡ 100 ರನ್ ಗಳಿಗೆ ಪತನಗೊಳ್ಳುವ ಮೂಲಕ ಭಾರತ 88 ರನ್ ಗಳಿಗೆ ವೆಸ್ಟ್ ಇಂಢೀಸ್ ವಿರುದ್ಧ ಜಯಭೇರಿ ಬಾರಿಸಿದೆ. ಈ ಮೂಲಕ 5 ಪಂದ್ಯಗಳ ಟಿ-20 ಸರಣಿಯನ್ನು 4-1ರಿಂದ ವಶಪಡಿಸಿಕೊಂಡಿದೆ.
ಲೌಡ್ರೆಲ್ ಮೈದಾನದಲ್ಲಿ ಭಾನುವಾರ ನಡೆದ 5ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 7 ವಿಕೆಟ್ ಗೆ 188 ರನ್ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ವೆಸ್ಟ್ ಇಂಡೀಸ್ ತಂಡ 15.4 ಓವರ್ ಗಳಲ್ಲಿ 100 ರನ್ ಗೆ ಆಲೌಟಾಯಿತು.
ವೆಸ್ಟ್ ಇಂಡೀಸ್ ಪರ ಏಕಾಂಗಿ ಹೋರಾಟ ನಡೆಸಿದ ಶಿರ್ಮೊನ್ ಹೆಟ್ಮೆಯರ್ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸೇರಿದ 56 ರನ್ ಬಾರಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಬ್ಯಾಟ್ಸ್ ಮನ್ ಗಳು ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ಹೀನಾಯ ಸೋಲುಂಡಿತು.
ಸ್ಪಿನ್ನರ್ ರವಿ ಬಿಶ್ನೋಯಿ 4, ಕುಲದೀಪ್ ಯಾದವ್ ಮತ್ತು ಅಕ್ಸರ್ ಪಟೇಲ್ ತಲಾ 3 ವಿಕೆಟ್ ಪಡೆದರು.

ಇದಕ್ಕೂ ಮುನ್ನ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಶ್ರೇಯಸ್ ಅಯ್ಯರ್ ಬಾರಿಸಿದ ಅರ್ಧಶತಕದ ನೆರವಿನಿಂದ ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕಿತು.
ಲೌಡ್ರಿಲ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತು.
ಶ್ರೇಯಸ್ ಅಯ್ಯರ್ 40 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 64 ರನ್ ಗಳಿಸಿದರು. ಅಲ್ಲದೇ ಇಶಾನ್ ಕಿಶನ್ ಜೊತೆ ಮೊದಲ ವಿಕೆಟ್ ಗೆ 38 ರನ್ ಜೊತೆಯಾಟ ನಿಭಾಯಿಸಿದರೆ, ಎರಡನೇ ವಿಕೆಟ್ ಗೆ ದೀಪಕ್ ಹೂಡಾ ಜೊತೆ (38) 76 ರನ್ ಜೊತೆಯಾಟದ ಮೂಲಕ ಉತ್ತಮ ಮೊತ್ತ ಪೇರಿಸಲು ನೆರವಾದರು.
ವೆಸ್ಟ್ ಇಂಡೀಸ್ ತಂಡದ ಒಡೆಮ್ ಸ್ಮಿತ್ 3 ವಿಕೆಟ್ ಪಡೆದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಈ ಮೂಲಕ ಭಾರತ 200ರ ಮೊತ್ತ ದಾಖಲಿಸುವ ಅವಕಾಶ ಕಳೆದುಕೊಂಡಿತು.