ಜುಲೈ ಅಂತ್ಯದ ವೇಳೆಗೆ 5G ಸ್ಪೆಕ್ಟ್ರಮ್‌ನ ಹರಾಜು ನಡೆಸುವ ಪ್ರಸ್ತಾಪಕ್ಕೆ ಭಾರತ ಸರ್ಕಾರವು ಹಸಿರು ನಿಶಾನೆ ತೋರಿದೆ. ಅಂದಾಜು 750 ದಶಲಕ್ಷ ಇಂಟರ್ನೆಟ್ ಬಳಕೆದಾರರಿರುವ ಈ ದೇಶದಲ್ಲಿ ಇದು ಒಂದು ದೊಡ್ಡ ಇಂಟರ್ನೆಟ್ ಕ್ರಾಂತಿಗೆ ಕಾರಣವಾಗಲಿದೆ ಎನ್ನಲಾಗಿದೆ. 5 ಜಿ ಇಂಟರ್ನೆಟ್ ಸೇವೆಗಳು ಈಗಿರುವ 4G ಗಿಂತ ಸುಮಾರು 10 ಪಟ್ಟು ವೇಗವಾಗಿ ಇರಲಿವೆ ಎಂದು ನಂಬಲಾಗಿದೆ.
ಸುಧಾರಿತ ರಾಷ್ಟ್ರೀಯ ಡಿಜಿಟಲ್ ಸಂಪರ್ಕದ ಅಗತ್ಯದ ಬಗ್ಗೆ ಮಾತನಾಡುತ್ತಾ “ದೇಶದಲ್ಲಿನ 4 ಜಿ ಪರಿಸರ ವ್ಯವಸ್ಥೆಯು ಈಗ 5G ಅಭಿವೃದ್ಧಿಗೆ ಕಾರಣವಾಗುತ್ತಿದೆ” ಎಂದು ಸರ್ಕಾರ ಹೇಳಿದೆ. “ಭಾರತವು 5 ಜಿ ತಂತ್ರಜ್ಞಾನ ಮತ್ತು ಮುಂಬರುವ 6 ಜಿ ತಂತ್ರಜ್ಞಾನದ ಪ್ರಮುಖ ದೇಶವಾಗಿ ಹೊರಹೊಮ್ಮುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
5G ಎಂದರೇನು?
5G ಜಾಗತಿಕ ವೈರ್ಲೆಸ್ ನೆಟ್ವರ್ಕ್ ಆಗಿದ್ದು 2 ಜಿ, 3 ಜಿ, ಮತ್ತು 4 ಜಿ ನೆಟ್ವರ್ಕ್ ಗಳನ್ನು ಹಿಂದಕ್ಕೆ ಸರಿಸಿ ಹೆಚ್ಚಿನ ವೇಗದ ಡಾಟಾವನ್ನು ಒದಗಿಸುವ ತರಂಗಾಂತರವಾಗಿದೆ. ಈ ನೆಟ್ವರ್ಕ್ ಕಡಿಮೆ ತಡೆಗಳಿರುವ, ಹೆಚ್ಚು ವಿಶ್ವಾಸಾರ್ಹವಾದ ನೆಟ್ವರ್ಕ್ ಸಾಮರ್ಥ್ಯ ಮತ್ತು ಲಭ್ಯತೆ ಇರುವ ನೆಟ್ವರ್ಕ್ ಆಗಲಿದೆ ಎಂದು ಯುಎಸ್ ಮೂಲದ ಪತ್ರಿಕೆ ‘ಕ್ವಾಲ್ಕಾಮ್’ ವರದಿ ಮಾಡಿದೆ.
ನೆಕ್ಸ್ಟ್ ಜನರೇಷನ್ ಅನುಭವವನ್ನು ಸಕ್ರಿಯಗೊಳಿಸುವಂತೆ 5G ಯನ್ನು ವಿನ್ಯಾಸಗೊಳಿಸಲಾಗಿದ್ದು ಇದು ಹೊಸ ಹೊಸ ಪ್ರಾಂತ್ಯಗಳಿಗೆ ವ್ಯಾಪಕವಾಗಿ ವಿಸ್ತರಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಯಾವುದೇ ಕಂಪೆನಿ ಅಥವಾ ವ್ಯಕ್ತಿಯು 5 ಜಿ ಅನ್ನು ಹೊಂದಿರದಿದ್ದರೂ, ಮೊಬೈಲ್ ವ್ಯವಸ್ಥೆಯಲ್ಲಿನ ಅನೇಕ ಕಂಪನಿಗಳು ಇದರ ಸಾಕಾರಕ್ಕಾಗಿ ಕೊಡುಗೆ ನೀಡಿದೆ ಎಂದು ಕ್ವಾಲ್ಕಾಮ್ ವರದಿ ಹೇಳುತ್ತದೆ.

4G ಗಿಂತ 5 G ಹೇಗೆ ಉತ್ತಮವಾಗಿದೆ?
5G ಸೇವೆಗಳು 4G ಗಿಂತಲೂ ಗಣನೀಯ ವೇಗವನ್ನು ಹೊಂದಿರುತ್ತದೆ. ಪ್ರತಿ ಸೆಕೆಂಡಿಗೆ ಸರಾಸರಿ 20 ಜಿಬಿಪಿಗಳು ಮತ್ತು 100 + Mbps ಡಾಟಾ ಟ್ರಾನ್ಸ್‌ಫರ್ ಮಾಡುವ ಸಾಮರ್ಥ್ಯವಿರುತ್ತದೆ. ಅಲ್ಲದೆ, ಮಿಷನ್ ಕ್ರಿಟಿಕಲ್ ಕಮ್ಯುನಿಕೇಷನ್ ಮತ್ತು ಬೃಹತ್ ಐಯೋಟ್ (Internet of things) ನಂತಹ ಹೊಸ ಸೇವೆಗಳನ್ನು ಸಹ ನೀಡುವಂತೆ 5G ಅನ್ನು ವಿನ್ಯಾಸಗೊಳಿಸಲಾಗಿದೆ.
ಬಳಕೆದಾರರಿಗೆ ಹೇಗೆ ಪ್ರಯೋಜನಕಾರಿಯಾಗಿದೆ?
5G ಸೇವೆಗಳು ಹೊಸ ಕಾಲದ ವ್ಯವಹಾರಗಳಿಗೆ ಹೊಸ ದೃಷ್ಟಿಕೋನ ನೀಡಬಹುದು, ಉದ್ಯಮಗಳಿಗೆ ಹೆಚ್ಚುವರಿ ಆದಾಯವನ್ನು ಮತ್ತು ನವೀನ ತಂತ್ರಜ್ಞಾನಗಳ ಬಳಕೆಯಿಂದ ಹೊಸ ಉದ್ಯೋಗಗಳನ್ನು ಒದಗಿಸಲಿವೆ ಎನ್ನುತ್ತದೆ ಸರ್ಕಾರ. ಈಗಾಗಲೇ ಬ್ರಾಡ್ಬ್ಯಾಂಡ್ ಸೇವೆಗಳ ಮೂಲಕ ಸರ್ಕಾರವು ಮೊಬೈಲ್ ಬ್ಯಾಂಕಿಂಗ್, ಆನ್ಲೈನ್ ಶಿಕ್ಷಣ, ಟೆಲಿಮೆಡಿಸಿನ್, ಇ-ರೇಷನ್ ಇತ್ಯಾದಿ ಸೌಲಭ್ಯಗಳನ್ನು ಉತ್ತೇಜಿಸಲು ಸಾಧ್ಯವಾಗಿದೆ. ಮತ್ತು ಮುಂಬರುವ 5ಜಿ ಸೇವೆಗಳು ಈ ವಲಯಗಳಿಗೆ ಇನ್ನಷ್ಟು ವೇಗ ನೀಡಲಿದೆ

ಹರಾಜು ಪ್ರಕ್ರಿಯೆ
5 ಜಿ ಸ್ಪೆಕ್ಟ್ರಮ್ ಹರಾಜಿನ ಪ್ರಸ್ತಾಪಿತ ವಿಧಾನವನ್ನು ಸರ್ಕಾರ ಅನೋದಿಸಿದ್ದು 72097.85 MHz ರೇಡಿಯೊ ಅಲೆಗಳನ್ನು ಜುಲೈ ಅಂತ್ಯದ ವೇಳೆಗೆ ಹರಾಜಿಗೆ ಇರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
‘ಖಾಸಗಿ ಕ್ಯಾಪ್ಟಿವ್ ನೆಟ್ವರ್ಕ್ಗಳ’ ಅಭಿವೃದ್ದಿಗೂ ಸರ್ಕಾರ ನಿರ್ಧರಿಸಿದ್ದು ಇವು ಹೊಸ ಯುಗದ ತಂತ್ರಜ್ಞಾನಗಳಾದ ಮೆಷಿನ್ ಟು ಮೆಷಿನ್ ಕಮ್ಯುನಿಕೇಷನ್, Internet Of Things (ಐಒಟಿ), ಕೃತಕ ಬುದ್ಧಿಮತ್ತೆ (AI)ಗಳನ್ನು ಆಟೋಮೇಟಿವ್, ಆರೋಗ್ಯ ಕ್ಷೇತ್ರ, ಕೃಷಿಗಳಿಗೆ ಅನ್ವಯಿಸಲು ಉದ್ದೇಶಿಸಿದೆ. ಜುಲೈಯಲ್ಲಿ 72097.85 MHz ಸ್ಪೆಕ್ಟ್ರಮ್‌ನ್ನು 20 ವರ್ಷಗಳ ಕಾಲಾವಾಧಿಗೆ ಹರಾಜಿಗೆ ಇಡಲಾಗುವುದು. ಈ ಹರಾಜಿನಲ್ಲಿ ಕಡಿಮೆ (600 MHz, 700 MHz, 800 MHz, 900 MHz, 1800 MHz, 2100 MHz, 2300 MHz), ಮಧ್ಯಮ (3300 MHz) ಮತ್ತು ಹೆಚ್ವು (26 GHz) ಫ್ರೀಕ್ವೆನ್ಸಿಯ ಸ್ಪೆಕ್ಟ್ರಮ್ ಇರಲಿದೆ ಎನ್ನಲಾಗಿದೆ.