ಈ ಬಾರಿ ಬಹಳ ಅದ್ದೂರಿಯಾಗಿ ದಸರಾ ಹಬ್ಬವನ್ನು ಆಚರಿಸಲಾಗಿದೆ. ಬೆಲೆ ಏರಿಕೆ ನಡುವೆಯೂ ಜನರು ಭರ್ಜರಿಯಾಗಿ ಖರೀದಿಗೆ ಇಳಿದಿದ್ದರು. ಇದೀಗ ಹಬ್ಬದ ಹಿನ್ನೆಲೆ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ತುಂಬಿಕೊಂಡಿದೆ. ನಾಡ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಲ್ಲಿ ಸುಮಾರು 500 ಟನ್ ನಷ್ಟು ಕಸ ಉತ್ಪತಿಯಾಗಿದೆ. ಹೀಗಿದ್ರೂ ಬಿಬಿಎಂಪಿ ತ್ಯಾಜ್ಯ ತೆರವು ಮಾಡದೆ ನಿರ್ಲಕ್ಷ್ಯವಹಿಸಿದೆ.
ಹಬ್ಬ ಕಳೆದು ದಿನ ಒಂದಾದರೂ ಕಸ ತೆರವು ಮಾಡದೆ ಬಿಬಿಎಂಪಿ ನಿರ್ಲಕ್ಷ್ಯ
ಕೋವಿಡ್ ಬಳಿಕ ಈ ಬಾರಿ ವಿಜೃಂಭಣೆಯಿಂದ ನಾಡ ಹಬ್ಬ ದಸರಾ ಆಚರಣೆ ಮಾಡಲಾಗಿದೆ. ನಾಡಿನೆಲ್ಲಡೆ ದಸರಾ ಸಂಭ್ರಮ ಈ ಬಾರಿ ಅತೀವವಾಗಿ ಮನೆಮಾಡಿತ್ತು. ಸಾಮಾಗ್ರಿಗಳ ಬೆಲೆ ಗಗನ ಮುಟ್ಟಿದ್ದರೂ ಜನರು ತಮ್ಮ ಇತಿಮಿಯೊಳಗೆ ಖರೀದಿಗೆ ಇಳಿದಿದ್ದರು. ಅದರಲ್ಲೂ ಬೆಂಗಳೂರಿನ ಮಾರುಕಟ್ಟೆಗಳು ಜನ ಜಂಗುಳಿಯಿಂದ ತುಂಬಿ ಹೋಗಿದ್ದವು. ದಸರಾ ಆಚರಣೆ ಹಾಗೂ ಅದಕ್ಕೂ ಮೊದಲಿನ ಎರಡು ದಿನ, ಒಟ್ಟಾರೆ ಮೂರು ದಿನಗಳ ಕಾಲ ನಗರದಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿದೆ. ಪರಿಣಾಮ ಇಂದು ಇಡೀ ಬೆಂಗಳೂರು ತ್ಯಾಜ್ಯ ತುಂಬಿ ಗಬ್ಬೆದ್ದು ನಾರುತ್ತಿತ್ತು. ಕೆಆರ್ ಮಾರ್ಕೆಟ್, ಮಲ್ಲೇಶ್ವರ ಮಾರ್ಕೆಟ್, ಹೆಬ್ಬಾಳ ಹೂವಿನ ಮಾರ್ಕೆಟ್ ಸೇರಿದಂತೆ ನಗರದ ಹಲವು ಮಾರ್ಕೆಟ್ ಗಳು ತ್ಯಾಜ್ಯದಿಂದ ತುಂಬಿ ಹೋಗಿದ್ದವು.
ಮೂರು ದಿನದಲ್ಲಿ ಬೆಂಗಳೂರಲ್ಲಿ 500 ಟನ್ ಕಸ ಉತ್ಪತ್ತಿ
ಹೌದು, ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಬರೋಬ್ಬರಿ 500 ಟನ್ ಕಸ ಉತ್ಪತ್ತಿಯಾಗಿ ರಸ್ತೆ ಬದಿಗಳಲ್ಲಿ, ಮಾರ್ಕೆಟ್ ಗಳಲ್ಲಿ ತೆರವಾಗದೆ ಹಾಗೇ ಉಳಿದಿದೆ. ಇದನ್ನು ಮಾಡಬೇಕಿರುವ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಡೀ ನಗರವೇ ಇಂದ ಗಬ್ಬೆದ್ದು ನಾರುತ್ತಿತ್ತು. ಅದರಲ್ಲೂ ನಗರದ ಕೆಆರ್ ಮಾರ್ಕೆಟ್ ನಲ್ಲಿ ಟನ್ ಗಟ್ಟಲೆ ಕಸ ಬಿದ್ದಿದ್ದು, ಜನರು ಅದರ ದುರ್ನಾತವನ್ನು ಸಹಿಸಿಕೊಂಡೇ ಓಡಾಡುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಮಂದಿ ಬಂದು ಹೋಗುವ ಕೆಆರ ಮಾರ್ಕೆಟ್ ಇಂದು ಅಕ್ಷರಶಃ ಗಾರ್ಬೇಜ್ ನಿಂದ ತುಂಬಿ ಸಾರ್ವಜನಿಕರು ಅದರ ಮೇಲೆಯೇ ಓಡಾಡುತ್ತಿದ್ದರು.
200 ಟನ್ ಕಸ ವಿಲೇವಾರಿ ಆಗದೆ ದುರ್ನಾತ
ಇನ್ನು ನಿನ್ನೆ ಒಂದೇ ದಿನ ಬೆಂಗಳೂರಲ್ಲಿ ಬರೋಬ್ಬರಿ 200 ಟನ್ ಕಸ ಉತ್ಪತ್ತಿಯಾಗಿದೆಯಂತೆ. ಪ್ರತಿ ಬಾರಿ ಹಬ್ಬದ ಸಮಯದಲ್ಲಿ ಇದು ನಿರೀಕ್ಷಿತವೇ ಆಗಿದ್ದರೂ ಇದಕ್ಕೆ ಪೂರಕವಾಗಿ ಬಿಬಿಎಂಪಿ ಅಧಿಕಾರಿಗಳು ಸಿದ್ಧಗೊಳ್ಳಬೇಕಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ತುಂಬೆಲ್ಲಾ ಕಸದ ರಾಶಿ ಹಾಗೆಯೇ ಬಿದ್ದಿದೆ. ಕೆಆರ್ ಮಾರ್ಕೆಟ್ ಸೇರಿದಂತೆ ಇನ್ನೂ ಹಲವೆಡೆ ಕಸ ತೆರವಾಗದೆ ಜನರು ಮೂಗಿ ಮುಚ್ಚಿಕೊಂಡು ಓಡಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
ಬಿಬಿಎಂಪಿ ಅಧಿಕಾರಿಗಳು ತೋರಿರುವ ಈ ನಿರ್ಲಕ್ಷ್ಯ ಮತ್ತೊಂದು ಸುತ್ತಿಗೆ ಬೆಂಗಳೂರು ಮಾನ ಹರಾಜು ಆಗುವ ಸಾಧ್ಯತೆಗಳಿವೆ. ಅಕಸ್ಮಾತ್ ಇಂದು ಮಳೆಯಾಗಿದ್ದರೆ ಬೆಂಗಳೂರು ಸಂಪೂರ್ಣ ಕೊಚ್ಚೆಯಲ್ಲಿ ಮಿಂದೇಳುವಂತಹಾ ಪರಿಸ್ಥಿತಿ ಎದುರಾಗುತ್ತಿತ್ತು. ಈಗಲಾದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ತ್ಯಾಜ್ಯ ವಿಲೇವಾರಿ ಮಾಡಿ ಬೆಂಗಳೂರಿನ ಅಂದ ಕಾಪಾಡಬೇಕಿದೆ.