ರಾಜ್ಯದಲ್ಲಿ ಸದ್ಯ ಸದ್ದು ಮಾಡ್ತಿರೋ ಕಮೀಷನ್ ದಂಧೆ ದಿನದಿಂದ ದಿನಕ್ಕೆ ಒಂದೊಂದು ಇಲಾಖೆಯನ್ನ ಆವರಿಸಿಕೊಳ್ತಿದೆ. ಲೊಕೋಪಯೋಗಿ, ಬಿಬಿಎಂಪಿ, ತೋಟಗಾರಿಕೆ ಇಲಾಖೆ ಬೆನ್ನಲ್ಲೇ ಇದೀಗ ಶಿಕ್ಷಣ ಇಲಾಖೆಗೂ ಭೂತ ಕಾಲಿಟ್ಟಿದ್ದು, ಸಚಿವರ ರಾಜೀನಾಮೆಗೆ ಒತ್ತಾಯ ಕೇಳಿ ಬರ್ತಿದೆ. ಇನ್ನು ಕಮೀಷನ್ ವಿಚಾರಕ್ಕೆ ಕುರಿತ ದಾಖಲೆಗಳು ಪಿಎಂ ಕಚೇರಿಗೂ ತಲುಪಲಿದೆ. ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಕಮೀಷನ್ ಆರೋಪ, ಪ್ರತ್ಯಾರೋಪ ಕೇಳಿ ಬರ್ತಿದೆ. ಆ ಇಲಾಖೆಯಲ್ಲಿ ಇಷ್ಟು ಕಮೀಷನ್. ಈ ಇಲಾಖೆಯಲ್ಲಿ ಇಷ್ಟು ಪರ್ಸಂಟೇಜ್ ಅಂತೆಲ್ಲಾ ಆರೋಪವನ್ನ ಗುತ್ತಿಗೆದಾರರು ಮಾಡ್ತಿದ್ದಾರೆ. ಆದರೆ ಇದೀಗ ಇಷ್ಟೇ ಇಲಾಖೆ ಅಲ್ಲ ಶಿಕ್ಷಣ ಇಲಾಖೆಯಲ್ಲೂ ಹತ್ರತ್ರ 50 ರಷ್ಟು ಕಮೀಷನ್ ದಂಧೆ ನಡೆಯುತ್ತಿದೆ ಅಂತ ಖಾಸಗಿ ಶಾಲಾ ಆಡಳಿತ ಮಂಡಳಿ ರುಪ್ಸಾ ಗಂಭೀರ ಆರೋಪ ಮಾಡಿದೆ. ನಾಗೇಶ್ ಶಿಕ್ಷಣ ಸಚಿವರಾದ ಬಳಿಕ ಇಲಾಖೆಯಲ್ಲಿ ಭ್ರಷ್ಟಚಾರ ಹೆಚ್ಚಾಗಿದ್ದು, ಇಲಾಖೆಗೆ ಕೆಟ್ಟ ಹೆಸರು ತರೋ ಕೆಲ್ಸ ಮಾಡ್ತಿದ್ದಾರೆ ಅಂತ ರುಪ್ಸಾ ಅಧ್ಯಕ್ಷರು ಆರೋಪ ಮಾಡಿದ್ದು, ಈ ಕುರಿತಂತೆ ಪ್ರಧಾನಿ ಮೋದಿ ಅವ್ರಿಗೆ ಭ್ರಷ್ಟಚಾರದ ಸಮಗ್ರ ವಿವರವನ್ನು ಒಳಗೊಂಡು ಪತ್ರ ಬರೆಯಲಿದ್ದಾರಂತೆ.
ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧ ರುಪ್ಸಾ ಮಾಡಿರುವ ಆರೋಪಗಳೇನು ?
ಶಾಲೆ ಮಾನ್ಯತೆ ನವೀಕರಣ ಮಾಡಲು ಲಕ್ಷಾಂತರ ರೂಪಾಯಿ ಲಂಚ ನೀಡ್ಬೇಕು. ಲಂಚ ಪಡೀಬೇಕು ಅಂತಾನೆ ಹೊಸ ಮಾರ್ಗಗಳ ಅನ್ವೇಷಣೆ ಮಾಡಲಾಗಿದೆ. RTE ಶುಲ್ಕ ಮರುಪಾವತಿ ಮಾಡೋಕೆ 30% ರಿಂದ 50% ವರೆಗೂ ಲಂಚ ಕೊಡಬೇಕು. ಅನ್ಯ ಪಠ್ಯಕ್ರಮ ಅನುಸರಿಸಲು NOC ಪಡೆಯೋಕೆ 15 ಲಕ್ಷದ ವರೆಗೂ ಲಂಚ ಪಡೆಯಲಾಗುತ್ತಿದೆ. ದಾಖಲೆಗಳ ನೆಪದಲ್ಲಿ ತಿಂಗಳಿಗೊಮ್ಮ ಮಾಮೂಲಿ ವಸೂಲಿ ಮಾಡಲಾಗುತ್ತಿದೆ. ವರ್ಷಕ್ಕೊಮ್ಮೆ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಅಂದರೆ ಲಂಚ ಕೊಡಬೇಕು. ಸರ್ಕಾರಿ ಶಾಲೆಗಳನ್ನು ಶಿಕ್ಷಣ ಸಚಿವರು ಮರೆತಿದ್ದಾರೆ. ಮಕ್ಕಳಿಗೆ ಶೂ ಸಾಕ್ಸ್ ನೀಡಿಲ್ಲ, ಸೈಕಲ್ ನೀಡಿಲ್ಲ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ ಸಚಿವರು. ಧಾರ್ಮಿಕ ಸೂಕ್ಷ್ಮ ವಿಚಾರಗಳ ವಿಚಾರದಲ್ಲಿ ವಿದ್ಯಾರ್ಥಿಗಳ ಮನಸ್ಸು ಕಲುಷಿತಗೊಳಿಸಿದ್ದಾರೆ ಎಂದು ರುಪ್ಸಾ ನೇರವಾಗಿ ಶಿಕ್ಷಣ ಸಚಿವ ನಾಗೇಶ್ ಮೇಲೆ ಆರೋಪ ಮಾಡಿದ್ದಾರೆ.

ಹಣಕ್ಕೆ ಡಿಮ್ಯಾಂಡ್ ಇಟ್ಟ ಬಿಇಓ ಆಡಿಯೋ ಬಿಡುಗಡೆ ಮಾಡಿದ ರುಪ್ಸಾ
ಈ ಎಲ್ಲಾ ಆರೋಪಗಳ ಜತೆಗೆ ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಬಿಇಓ ಖಾಸಗಿ ಶಾಲೆ ಆಡಳಿತ ಮಂಡಳಿ ಬಳಿ ಲಂಚ ಕೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದ್ದು, ಶಿಕ್ಷಣ ಇಲಾಖೆಯನ್ನ ಇನ್ನಷ್ಟು ಮುಜುಗರಕ್ಕೀಡುಮಾಡಿದೆ. ಸುಮಾರು ಎಂಟು ಆರೋಪಗಳನ್ನ ಮಾಡಿರೋ ರುಪ್ಸಾ ಸಂಘಟನೆ ಇದೀಗ ಪ್ರಧಾನಿ ಕಚೇರಿಗೆ ದಾಖಲೆಗಳ ಸಮೇತ ದೂರು ನೀಡಲು ಮುಂದಾಗಿದೆ. ಸದ್ಯ ಗುತ್ತಿಗೆದಾರರು ಮಾಡ್ತಿದ್ದ ಆರೋಪವನ್ನ ಸರ್ಕಾರ ತಿರಸ್ಕಾರ ಮಾಡ್ತಾನೇ ಬರ್ತಿದೆ. ಇದೀಗ ಹೊಸ ಇಲಾಖೆಯ ಕಮೀಷನ್ ದಂಧೆ ಸರ್ಕಾರವನ್ನ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ನಾಗೇಶ್ ವಿರುದ್ಧ ಕ್ರಮ ಆಗುತ್ತಾ..? ಇಲ್ಲ ಈ ಕುರಿತಂತೆ ಸ್ಪಷ್ಟನೆ ಕೊಡ್ತಾರಾ ಕಾದು ನೋಡಬೇಕಿದೆ.