ಆನೇಕಲ್: ಆನೇಕಲ್ ನಲ್ಲಿ 13 ಮಂದಿ ಬಲಿ ತೆಗೆದುಕೊಂಡಿರುವ ಪಟಾಕಿ ದುರಂತ ನಡೆದ ಅತ್ತಿಬೆಲೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದೊಂದು ಘೋರ ದುರಂತ. ಅಮಾಯಕ ಯುವಕರು ಮೃತಪಟ್ಟಿದ್ದಾರೆ. ಕೆಲವರು ವ್ಯಾಪಾರ ಮಾಡಲು ಬಂದಿದ್ದವರೂ ಇದ್ದರು. 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಸತ್ತವರ ಕುಟುಂಬಕ್ಕೆ ಸರಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಅವರು ಘಟನೆ ಸ್ಥಳದಲ್ಲಿ ಮಾಧ್ಯಮದವರಿಗೆ ಶನಿವಾರ ರಾತ್ರಿ ತಿಳಿಸಿದರು.
ದುರಂತ ಸ್ಥಳದಲ್ಲಿ 20 ಮಂದಿ ಇದ್ದರು. ನಾಲ್ವರು ತಪ್ಪಿಸಿಕೊಂಡಿದ್ದಾರೆ. 13 ಮಂದಿಯ ಶವ ಪತ್ತೆಯಾಗಿದೆ. ಉಳಿದವರು ಏನಾದರೂ ಎಂದು ತನಿಖೆ ನಡೆಸಲಾಗುತ್ತಿದೆ. ಹಿಂದಿನ ಕಟ್ಟಡದಲ್ಲಿ ಏನಾದರೂ ಇದ್ದಾರೆಯೇ? ಬೇರೆ ಎಲ್ಲಾದರೂ ಹೋದರೆ? ಹಿಂದಿನ ಕಟ್ಟಡದಲ್ಲೂ ಪಟಾಕಿಗಳು ಇವೆಯಂತೆ. ಅದೂ ಅಪಾಯಕಾರಿ. ಹೀಗಾಗಿ ಎಚ್ಚರಿಕೆಯಿಂದ ಬಾಗಿಲು ತೆರೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ ಎಂದರು.
ದುರಂತದ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಮಾಲೀಕರು ಮತ್ತಿತರರು ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಅಗ್ನಿ ಅನಾಹುತ ತಡೆವ ನಿಯಮಗಳನ್ನು ಪಾಲಿಲಾಗಿದೆಯೇ? ಲೋಪದೋಷಗಳು ಏನಾದರೂ ಇವೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ.
ಈ ಅನಾಹುತದಿಂದ ಬೆಂಗಳೂರು ಚನ್ನೈ ಎರಡೂ ಕಡೆ ವಾಹನಗಳ ಸಂಚಾರಕ್ಕೆ ತೊಂದರೆ ಆಗಿತ್ತು. ಟ್ರಾಫಿಕ್ ಜಾಮ್ ಆಗಿತ್ತು. ಈಗ ವಾಹನ ದಟ್ಟಣೆ ನಿವಾರಿಸಲಾಗಿದ್ದು, ಸಂಚಾರ ಸುಗಮವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಟಾಕಿ ಅಂಗಡಿಗಳು, ಗೋಡೌನ್ ಗಳಲ್ಲಿ ಅಗ್ನಿ ಅನಾಹುತ ನಿಯಂತ್ರಣ ನಿಯಮಗಳ ಪಾಲನೆ ಬಗ್ಗೆ ಮುಂಜಾಗರೂಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.