ಮಧ್ಯಮ ವೇಗಿ ಆವೇಶ್ ಖಾನ್ ಮಾರಕ ದಾಳಿ ಹಾಗೂ ದಿನೇಶ್ ಕಾರ್ತಿಕ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ 82 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದು 5 ಪಂದ್ಯಗಳ ಟಿ-20 ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ.
ರಾಜ್ ಕೋಟ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಗೆ 169 ರನ್ ಸಂಪಾದಿಸಿತು. ಪೈಪೋಟಿಯ ಮೊತ್ತ ಬೆಂಬತ್ತಿದ ದಕ್ಷಿಣ ಆಫ್ರಿಕಾ ತಂಡ 16.5 ಓವರ್ ಗಳಲ್ಲಿ 87 ರನ್ ಗೆ (9 ವಿಕೆಟ್) ಆಲೌಟಾಯಿತು. ಈ ಮೂಲಕ ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯ ನಿರ್ಣಾಯಕ ಪಾತ್ರ ವಹಿಸಲಿದೆ.
ಆವೇಶ್ ಖಾನ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ತಂಡದ ಪರ ರಸ್ಸೆ ವ್ಯಾನ್ ಡರ್ ಡುಸೆನ್ (20), ಕ್ವಿಂಟನ್ ಡಿ ಕಾಕ್ (13) ಮತ್ತು ಮಾರ್ಕೊ ಜಾನ್ಸನ್ (12) ಮಾತ್ರ ಎರಡಂಕಿಯ ಮೊತ್ತ ದಾಖಲಿಸಿದರು.
ಭಾರತದ ಪರ ಆವೇಶ್ ಖಾನ್ ಗೆ 4 ವಿಕೆಟ್ ಪಡೆದರೆ, ಯಜುರ್ವೆಂದ್ರ ಚಾಹಲ್ 2 ವಿಕೆಟ್ ಗಳಿಸಿದರೆ, ಹರ್ಷಲ್ ಪಟೇಲ್ 1 ವಿಕೆಟ್ ಗಳಿಸಿದರು.
ಕಾರ್ತಿಕ್-ಪಾಂಡ್ಯ ನೆರವು
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ 81 ರನ್ ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ 5ನೇ ವಿಕೆಟ್ ಗೆ 65 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು.
ದಿನೇಶ್ ಕಾರ್ತಿಕ್ 27 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 55 ರನ್ ಬಾರಿಸಿದರು. ಹಾರ್ದಿಕ್ ಪಾಂಡ್ಯ 31 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 46 ರನ್ ಗಳಿಸಿದರು.