ಹುಬ್ಬಳ್ಳಿ: ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಐತಿಹಾಸಿಕ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರು ಭಾಗಿಯಾಗಿದ್ದಾರೆ. ಸಮಾರಂಭಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ರುಚಿ, ಶುಚಿಯಾದ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಶಿಸ್ತುಬದ್ಧವಾಗಿ ಆಹಾರ ವಿತರಣೆಗೆ ವ್ಯವಸ್ಥೆಗೆ ವ್ಯಾಪಕ ಸಿದ್ಧತೆ ಮಾಡಲಾಗಿತ್ತು. ರುಚಿಕರವಾದ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಶಿಸ್ತುಬದ್ಧವಾಗಿ ವಿತರಣೆ ಮಾಡಲಾಯಿತು.ಭಾರೀ ಜನಸಂದಣಿ ಇದ್ದರೂ ಸಹ ಬೆಳಗ್ಗೆ 30 ಸಾವಿರಕ್ಕೂ ಅಧಿಕ ಜನರಿಗೆ ಉಪಹಾರ ವಿತರಿಸಲಾಯಿತು.

ಇದನ್ನೂ ಓದಿ: ಹುಬ್ಬಳ್ಳಿ ಸಿಎಂ ಕಾರ್ಯಕ್ರಮದಲ್ಲಿ ಭಾರೀ ಅವಘಡ: ಕಟೌಟ್ ಕುಸಿದು ಮೂವರಿಗೆ ಗಾಯ
ಊಟ, ಉಪಹಾರ ವಿತರಣೆಗೆ ಒಟ್ಟು 124 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು. ಬೆಳಗಿನ ಉಪಹಾರವಾಗಿ 30,000 ಜನರಿಗೆ ಉಪ್ಪಿಟ್ಟು ವಿತರಣೆ ಮಾಡಲಾಗಿದೆ. ನಂತರ ಮಧ್ಯಾಹ್ನದ ಊಟವಾಗಿ ಪಲಾವ್, ಮೊಸರನ್ನ, ಮೈಸೂರು ಪಾಕ್ ನೀಡಲಾಯಿತು.

ಒಟ್ಟು 1.50 ಲಕ್ಷಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೇ 2 ಲಕ್ಷ ಜನರಿಗೆ ವಾಟರ್ ಬಾಟಲ್ ವ್ಯವಸ್ಥೆ ಮಾಡಲಾಗಿತ್ತು. ಉಪಹಾರ, ಊಟದ ಸಿದ್ಧತೆಗಾಗಿ 300 ಜನ, ಊಟದ ವಿತರಣೆಗಾಗಿ 200 ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಯಕ್ಕೆ 150 ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಊಟದ ನಂತರ ಜನರಿಗೆ ಕೈ ತೊಳೆಯುವ ವ್ಯವಸ್ಥೆಗೆ 20 ನೀರಿನ ಟ್ಯಾಂಕರ್‌ಗಳನ್ನು ನಿಲ್ಲಿಸಲಾಗಿತ್ತು.

ಆಹಾರ ವಿತರಣೆಯಲ್ಲಿ ಶುದ್ಧತೆ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಅಡಿಗೆ ತಯಾರಿಕೆ, ಊಟ ಬಡಾವಣೆ ಮತ್ತು ಸ್ವಚ್ಛತಾ ಕಾರ್ಯಗಳು ವಿವಿಧ ವಿಭಾಗದ ಕಾರ್ಮಿಕರ ಸಮನ್ವಯದಿಂದ ನಡೆದವು. ಜನಸಂದಣಿ ಹೆಚ್ಚಿದ್ದರೂ ಸಹ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು. ಬೃಹತ್ ಕಾರ್ಯಕ್ರಮದಲ್ಲಿ ರುಚಿಕರವಾದ ಊಟದ ವ್ಯವಸ್ಥೆ ಮಾಡಿರುವ ಆಯೋಜಕರನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.












