ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಸಿಗುತ್ತಿದೆ. ಫೆಬ್ರವರಿ 3 ರಂದು ಖ್ಯಾತ ಪಾಪ್ ಗಾಯಕಿ ರಿಹಾನಾ ದೆಹಲಿಯ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಸರ್ಕಾರದ ಪರ ನಿಂತವರಿಂದ ವಿರೋಧಗಳು ವ್ಯಕ್ತವಾಗುತ್ತಿದೆ.
ದೆಹಲಿಯಲ್ಲಿ ಅಂತರ್ಜಾಲ ನಿರ್ಬಂಧಿಸಿರುವ ಕುರಿತಂತೆ ಸಿಎನ್ಎನ್ ವರದಿಯನ್ನು ಉಲ್ಲೇಖಿಸಿ, ʼನಾವು ಏಕೆ ಇದರ ಕುರಿತು ಮಾತನಾಡುತ್ತಿಲ್ಲʼ ಎಂದು ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಮಾಡಿದ ಟ್ವೀಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಿಹಾನಾಳ ಒಂದು ಟ್ವೀಟ್‌ಗೆ ಪ್ರತಿಕ್ರಿಯೆಗಳ ಸುರಿಮಳೆಯಾಗಿದೆ. ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಸೆಲಬ್ರಿಟಿಗಳು ಭಾರತದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ರಿಹಾನಾ ಟ್ವೀಟ್ ಮಾಡಿದ ಬೆನ್ನಲೆ ಆಕೆಯ ವೈಯಕ್ತಿಕ ಮಾಹಿತಿ ಮತ್ತು ಆಕೆಯ ಧರ್ಮ ಜಾಲಾಡಲು ಗೂಗಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಇತ್ತ ಟ್ವೀಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಪಾಕ್ ಧ್ವಜ ಹಿಡಿದಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲೆ ಬಿಜೆಪಿ ಯುವ ವಿಭಾಗದ ನಾಯಕ ಅಭಿಷೇಕ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 1300 ಕ್ಕೂ ಹೆಚ್ಚು ಜನರು ಇದನ್ನು ʼಲೈಕ್ʼ ಮಾಡಿದ್ದರು.

ರಿಹಾನಾ ಪಾಕ್ ಧ್ವಜ ಹಿಡಿದಿರುವ ಫೋಟೋ ಫೇಕ್ ಸುದ್ದಿಯೆಂದು ತಿಳಿದು ಬಂದಿದೆ. ಈ ಕುರಿತು ಮಾಹಿತಿಗಾಗಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಜುಲೈ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಕೌನ್ಸಿಲ್ (ಐಸಿಸಿ) ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ ಮೂಲ ಚಿತ್ರ ಸತ್ಯಾಂಶವನ್ನು ತೆರೆದಿಟ್ಟಿದೆ.
2019 ರಲ್ಲಿ ರಿಹಾನಾ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕೆ ಬೆಂಬಲ ಸೂಚಿಸಿ, ವೆಸ್ಟ್ ಇಂಡೀಸ್ ಬಾವುಟ ಹಿಡಿದ ಪೋಟೋವನ್ನು ಜುಲೈ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಕೌನ್ಸಿಲ್ (ಐಸಿಸಿ) ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದೆ. ಮತ್ತು ಜುಲೈ 2, 2109 ರಲ್ಲಿ ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ವರದಿ ಮಾಡಿದೆ.

ಕೃಪೆ: The quint
ಇದೀಗ ಟ್ವಿಟರ್ ಮತ್ತು ಪೇಸ್ಬುಕ್‌ನಲ್ಲಿ ಆಕೆ ಪಾಕಿಸ್ತಾನ ಧ್ವಜ ಹಿಡಿದಿರುವ ಫೋಟೋ ಸದ್ದು ಮಾಡುತ್ತಿದ್ದು, ವೆಸ್ಟ್ ಇಂಡೀಸ್ ಬಾವುಟ ತೆಗೆದು ಪಾಕಿಸ್ತಾನ ಬಾವುಟ ಹಾಕಿ ಚಿತ್ರವನ್ನು ತಿರುಚಲಾಗಿದೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ಈ ಮೇಲಿನ ಎರಡು ಚಿತ್ರಗಳಲ್ಲಿ ಅಕ್ಕಪಕ್ಕದ ಹೋಲಿಕೆ ಒಂದೇ ರೀತಿಯಿದ್ದು, ಧ್ವಜ ಬದಲಾಯಿಸಿರುವುದು ಕಾಣಬಹುದು.
ಕೃಪೆ: The quint