ಜೈಪುರ: ಭಾರತೀಯ ಆಭರಣ ವ್ಯಾಪಾರಿಯೊಬ್ಬಾತ ವಿದೇಶಿ ಮಹಿಳೆಗೆ ಭಾರೀ ಪ್ರಮಾಣದಲ್ಲಿ ವಂಚಿಸಿರುವ ಆರೋಪವೊಂದು ಕೇಳಿ ಬಂದಿದೆ.
ಜೈಪುರದ ಜ್ಯೂವೆಲ್ಲರಿ ಶಾಪ್ ನಲ್ಲಿ ಆಭರಣ ಖರೀದಿಸಿದ ಅಮೆರಿಕ ಮಹಿಳೆಗೆ ಭಾರೀ ಮೋಸವಾಗಿದೆ. ಇಡೀ ದೇಶವೇ ತಲೆ ತಗ್ಗಿಸಬೇಕಾಗಿರುವಂತಹ ಮೋಸ ಇದಾಗಿದೆ. ವಿದೇಶಿ ಮಹಿಳೆ 300 ರೂ. ಆಭರಣಗಳಿಗೆ ಬರೋಬ್ಬರಿ 6 ಕೋಟಿ ರೂ. ನೀಡಿ ಮೋಸ ಹೋಗಿದ್ದಾರೆ. ಮೋಸ ಹೋಗಿರುವುದು ದೃಢವಾಗುತ್ತಿದ್ದಂತೆ ಈ ಹಿನ್ನೆಲೆಯಲ್ಲಿ ಅಮೆರಿಕ ರಾಯಭಾರಿ ಸಹಾಯದೊಂದಿಗೆ ಜ್ಯೂವೆಲ್ಲಿ ಶಾಪ್ ಮಾಲೀಕನ ವಿರುದ್ದ ದೂರು ದಾಖಲಿಸಿದ್ದಾರೆ.
ಅಮೆರಿಕ ಮೂಲದ ಮಹಿಳೆ ಚೆರಿಶ್ ಭಾರತಕ್ಕೆ ಆಗಮಿಸಿದ್ದರು. ಕೆಲವು ವರ್ಷಗಳ ಹಿಂದೆ ಇನ್ ಸ್ಟಾಗ್ರಾಂ ಮೂಲಕ ಜೈಪುರದ ಜ ಜೋಹ್ರಿ ಬಜಾರ್ ನಲ್ಲಿರುವ ಜ್ಯೂವೆಲ್ಲಿರಿ ಮಾಲೀಕನ ಪರಿಚಯವಾಗಿದೆ. ಹೀಗಾಗಿ ಅವರು ಆಭರಣ ಖರೀದಿಸಿದ್ದಾರೆ. ಆದರೆ, ಆ ವಂಚಕ 300 ರೂ. ನಕಲಿ ಆಭರಣ ನೀಡಿ, 6 ಕೋಟಿ ರೂ. ಪೀಕಿದ್ದಾನೆ.
ಬೆಳ್ಳಿಯ ಆಭರಣಗಳಿಗೆ ಚಿನ್ನದ ಕೋಟಿಂಗ್, ನಕಲಿ ಮುತ್ತುಗಳ ಆಭರಣಗಳನ್ನೂ ಈತ ಅಮೆರಿಕ ಮಹಿಳೆಗೆ ಮಾರಾಟ ಮಾಡಿದ್ದಾನೆ. ಒಟ್ಟು 6 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ವಿದೇಶಿ ಮಹಿಳೆ ಖರೀದಿಸಿದ್ದಾರೆ. ವಿದೇಶಿ ಮಹಿಳೆಗೆ ತಾನು ಖರೀದಿಸಿರುವುದು ನಕಲಿ ಆಭರಣ ಎನ್ನುವುದು ಪ್ರದರ್ಶನವೊಂದರಲ್ಲಿ ಇವುಗನ್ನೆಲ್ಲ ಇಟ್ಟಾಗ ಅರಿವಾಗಿದೆ. ನಂತರ ಭಾರತಕ್ಕೆ ಬಂದು ಪ್ರಶ್ನಿಸಿ, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೊಂದೆಡೆ ಜ್ಯೂವೆಲ್ಲರಿ ಮಾಲೀಕನೂ ಮಹಿಳೆ ವಿರುದ್ಧ ದೂರು ನೀಡಿದ್ದಾನೆ. ಮಹಿಳೆ ಸುಳ್ಳು ಹೇಳಿ ವ್ಯಾಪರಕ್ಕೆ ಧಕ್ಕೆ ತರುತ್ತಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ. ಆನಂತರ ಮಹಿಳೆ ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ದೂರು ಸಲ್ಲಿಸಿದ್ದಾರೆ.
ತನಿಖೆ ಕೈಗೊಂಡಿರುವ ಪೊಲೀಸರು ಆಭರಣಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಅಂಗಡಿ ಮಾಲೀಕ ನಾಪತ್ತೆಯಾಗಿದ್ದಾನೆ.