ಬೆಳಗಾವಿ : ಮಾ.20: ವಿಧಾನಸಭೆ ಚುನಾವಣೆ ಗೆಲ್ಲಲು ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದ ಜನತೆಗೆ ಹಲವು ಗ್ಯಾರಂಟಿಗಳನ್ನು ನೀಡುತ್ತಿದ್ದು, ಸೋಮವಾರ ಯುವ ನಿಧಿ ತನ್ನ 4ನೇ ಗ್ಯಾರಂಟಿಯನ್ನು ಘೋಷಿಸಿದೆ. ಈ ಮೂಲಕ ಚುನಾವಣೆಯಲ್ಲಿ ಯುವಕರ ಮತ ಸೆಳೆಯಲು ಮುಂದಾಗಿದೆ. ಇಂದು ಬೆಳಗಾವಿಯಲ್ಲಿ ನಡೆದ ಯುವ ಕ್ರಾತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನ ʼಯುವನಿಧಿʼ ಎಂಬ 4ನೇ ಗ್ಯಾರಂಟಿಯನ್ನು ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ಯುವಕರನ್ನು ಗಮನದಲ್ಲಿಟ್ಟುಕೊಂಡು ʼಯುವನಿಧಿʼ ಯೋಜನೆ ಘೋಷಿಸಿದ್ದು, ಈ ಯೋಜನೆಯ ಅಡಿ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ ಮೂರು ಸಾವಿರ ರೂಪಾಯಿ ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ 1500 ರೂ. ಭತ್ಯೆ ನೀಡುವುದಾಗಿ ಭರವಸೆ ನೀಡಿದೆ.
ಈ ಹಿಂದೆ ಗೃಹ ಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ, 200 ಯೂನಿಟ್ ಉಚಿತ ವಿದ್ಯುತ್ ಮತ್ತು ಅನ್ನಭಾಗ್ಯ ಯೋಜನೆಯಡಿ ಬಡಕುಟುಂಬದ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು.
ಈ ಯೋಜನೆ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿದ್ದು, 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ ಪದವೀಧರರಿಗೆ 3000 ಆರ್ಥಿಕ ನೆರವು ಹಾಗೂ ನಿರುದ್ಯೋಗಿ ಡಿಪ್ಲೊಮಾ ಪಧವೀಧರರಿಗೆ 1500 ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯನ್ನು ಘೋಷಿಸುತ್ತಿದ್ದೇವೆ. ಯುವ ಶಕ್ತಿಗೆ ಶಕ್ತಿ ತುಂಬಲು ಬದ್ಧವಾಗಿದ್ದೇವೆ ಎಂದು ಹೇಳಿದೆ.