
ಧರ್ಮಸ್ಥಳಗ್ರಾಮದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ (Mass burials) ಆರೋಪದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಐ.ಟಿ ಟೀಮ್ (SIT) ನಿನ್ನೆಯಿಂದ (ಜು.29) ತನಿಖೆಯನ್ನು ತೀವ್ರಗೊಳಿಸಿದ್ದು, ಅನಾಮಿಕ ದೂರುದಾರರನ್ನು ಹಲವು ಸ್ಥಳಕ್ಕೆ ಕರೆತಂದಿದ್ದ ಅಧಿಕಾರಿಗಳು ಆತ ಗುರುತು ಮಾಡಿದ 13 ಸ್ಥಳಗಳ ಪೈಕಿ ಮೊದಲ ಪಾಯಿಂಟ್ ನಲ್ಲಿ ಉತ್ಖನನ ನಡೆಸಿದ್ದರು.

ಸುಮಾರು 15 ಅಡಿ ಅಗಲ..8 ಅಡಿ ಆಳವಾಗಿ ಭೂಮಿ ಅಗೆದು ಕಳೆಬರಕ್ಕಾಗಿ ಹುಡುಕಾಟ ನಡೆಸಿದ ಹೊರತಾಗಿಯೂ ಮೊದಲ ಸ್ಥಳದಲ್ಲಿ ಏನೇನೂ ಪತ್ತೆಯಾಗಲಿಲ್ಲ. ನಿನ್ನೆ ಕಾರ್ಯಾಚರಣೆ ಅಷ್ಟಕ್ಕೆ ಸೀಮಿತವಾಗಿತ್ತು.ಇಂದು (ಜು .30) ಎಸ್‌ಐಟಿ ಅಧಿಕಾರಿಗಳು ಉಳಿದ ಶವಗಳನ್ನ ಹೂತಿಟ್ಟ ಸ್ಥಳಗಳಲ್ಲಿ ಉತ್ಖನನ ಆರಂಭಿಸಿದ್ದಾರೆ.

ಇಂದು ಕಾರ್ಯಾಚರಣೆ ನಡೆಯುವ ಸ್ಥಳಗಳಿಗೆ ಜೆ .ಸಿ.ಬಿ ತಲುಪಲು ಸಾಧ್ಯವಿಲ್ಲ ಮತ್ತು ಅರಣ್ಯ ಪ್ರದೇಶದಲ್ಲಿ ಜೆ.ಸಿ.ಬಿ ತರಲು ನಿಷೇಧವಿದೆ. ಹೀಗಾಗಿ 12 ಕಾರ್ಮಿಕರು ಹಾರೆ, ಗುದ್ದಲಿ, ಬಟ್ಟೆ, ಪ್ಲಾಸ್ಟಿಕ್ ಕವರ್ ಜೊತೆ ಬಂದಿರೋ ಅಧಿಕಾರಿಗಳು ಮಣ್ಣು ಅಗೆಯುವ ಕೆಲಸ ಆರಂಭಿಸಿದ್ದಾರೆ.ಉಳಿದ 12 ಸ್ಥಳಗಳ ಪೈಕಿ ಇಂದು 3-4 ಸ್ಥಳಗಳಲ್ಲಿ ಮಣ್ಣು ಅಗೆದು ಪರಿಶೀಲಸಲಾಗುತ್ತದೆ.

ಈ ನಡುವೆ ನಿನ್ನೆಯಿಂದಲೂ ಮಳೆ ಮುಂದುವರೆದಿದ್ದು, ಅದರ ಮಧ್ಯೆಯೇ ಕಾರ್ಯಾಚರಣೆ ಸಾಗುತ್ತಿದೆ.ಒಟ್ಟು 3 ತಂಡಗಳಾಗಿ ಕಾರ್ಮಿಕರು ಕೆಲಸ ಆರಂಭಿಸಿದ್ದಾರೆ. ದೂರುದಾರ ತೋರಿಸಿರುವ ಸ್ಥಳಗಳಲ್ಲಿ ಅಗೆಯುವ ಕೆಲಸ ಆರಂಭವಾಗಿದೆ. ಇಂದಾದರೂ ಈ ವ್ಯಕ್ತಿ ಆರೋಪ ಮಾಡಿರುವಂತೆಯೇ ಆ ಸ್ಥಳಗಳಲ್ಲಿ ಕಳೆಬರ ಸಿಗಲಿದ್ಯಾ ಎಂಬುದನ್ನು ಕಾಡು ನೋಡಬೇಕಿದೆ.