2018ರಲ್ಲಿ ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ ಮೂವರು ದಲಿತರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ವಿಶೇಷ ನ್ಯಾಯಾಲಯ 27 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ವಿಶೇಷ ನ್ಯಾಯಾಲಯವು ಆಗಸ್ಟ್ 1 ರಂದು ಎಲ್ಲಾ 27 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದ್ದು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಪ್ರಕಟಿಸಲಾಯಿತು. ಅದರಂತೆ ನ್ಯಾಯಾಧೀಶ ಜಿ ಮುತ್ತುಕುಮಾರನ್ ಅವರು ಎಲ್ಲಾ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಮೇ 28, 2018 ರ ರಾತ್ರಿ ಶಿವಗಂಗೈ ಜಿಲ್ಲೆಯ ತಿರುಪ್ಪಚೆಟ್ಟಿ ಸಮೀಪದ ಕಚನಂತಂ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಅರುಮುಗಂ (65), ಷಣ್ಮುಗನಾಥನ್ (31) ಮತ್ತು ಚಂದ್ರಶೇಖರ್ (34) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ದೇವಸ್ಥಾನದ ಉತ್ಸವದಲ್ಲಿ ಹರಕೆ ತೀರಿಸುವ ವಿಚಾರದಲ್ಲಿ ನಡೆದ ವೈಷಮ್ಯದಲ್ಲಿ ಅವರನ್ನು ತೇವರ್ ಸಮುದಾಯದ ಸದಸ್ಯರು ಕಡಿದು ಕೊಂದಿದ್ದಾರೆ. ದಾಳಿಯಲ್ಲಿ ಇನ್ನೂ ಐವರು ದಲಿತರಿಗೆ ಗಾಯಗಳಾಗಿವೆ. ಗಾಯಾಳುಗಳ ಪೈಕಿ ಠಾಣಶೇಖರನ್ (32) ಘಟನೆ ನಡೆದು ಒಂದೂವರೆ ವರ್ಷದ ಬಳಿಕ ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಂಗಾಡು ಗ್ರಾಮದ ಸುಮನ್, ಅರುಣಕುಮಾರ್, ಚಂದ್ರಕುಮಾರ್, ಅಗ್ನಿರಾಜ್, ರಾಜೇಶ್ ಸೇರಿದಂತೆ 33 ಜನರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಾಲ್ವರು ಆರೋಪಿಗಳು ಅಪ್ರಾಪ್ತರಾಗಿದ್ದರೆ ಅವರಲ್ಲಿ ಇಬ್ಬರು ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ತಲೆಮರೆಸಿಕೊಂಡಿದ್ದಾರೆ.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಎಂಟು ಮಂದಿ ದಲಿತರ ಮೇಲೆ ಕ್ರೂರವಾಗಿ ದಾಳಿ ಮಾಡುವ ಎರಡು ದಿನಗಳ ಹಿಂದೆ ಅಗಮುಡಿಯಾರ್ ಸಮುದಾಯದ ಮನೆಯ ಹೊರಗೆ ಫೋನಿನಲ್ಲಿ ದಲಿತ ಯುವಕನೊಬ್ಬ ಜೋರಾಗಿ ಮಾತನಾಡಿರುವುದು ಜಾತಿವಾದಿಗಳ ಕೋಪಕ್ಕೆ ಕಾರಣವಾಗಿದ್ದು, ಇದರ ಮುಂದುವರಿಕೆಯ ಭಾಗವಾಗಿ ದಲಿತರ ತ್ರಿವಳಿ ಕೊಲೆ ನಡೆದಿದೆ ಎಂದು ವರದಿಯಾಗಿದೆ.
ದಿ ವೈರ್ ವರದಿ ಮಾಡಿದಂತೆ, ಗ್ರಾಮದಲ್ಲಿ 36 ಕುಟುಂಬಗಳು ವಾಸಿಸುತ್ತಿದ್ದು, ಅವರಲ್ಲಿ ಒಂದು ಕುಟುಂಬ ಮಾತ್ರ ಅಗಮುಡಿಯರ್ ಸಮುದಾಯಕ್ಕೆ ಸೇರಿದೆ. ಇದರ ಹೊರತಾಗಿಯೂ ಅವರು ಆಗಮುಡಿಯರ್ ಕುಟುಂಬವು ಉಳಿದ 35 ದಲಿತ ಕುಟುಂಬಗಳ ವಿರುದ್ಧ ಪದೇ ಪದೇ ತಾರತಮ್ಯವನ್ನು ಮಾಡುತ್ತಿತ್ತು. ದಲಿತ ಗ್ರಾಮಸ್ಥರಲ್ಲಿ ಪದವೀಧರರು, ಪೋಲೀಸರು, ಸರ್ಕಾರಿ ನೌಕರರು-ಆರ್ಥಿಕ ಅಭಿವೃದ್ಧಿ ಹೊಂದಿದ ಕುಟುಂಬ ಇರುವುದನ್ನು ಅರಗಿಸಿಕೊಳ್ಳಲು ಆಗಮುಡಿಯರ ಜಾತಿವಾದಿ ಮನಸ್ಥಿತಿಗೆ ಸಾಧ್ಯವಾಗಿರಲಿಲ್ಲ ಎಂದು ಕೆಲವು ಹಳ್ಳಿಗರು ಆಗ ದಿ ವೈರ್ಗೆ ಹೇಳಿದ್ದಾರೆ. ಕೊಲೆಯಾದ ಮೂವರಲ್ಲಿ ಒಬ್ಬರಾದ ಆರುಮುಗಂ ಅವರ ಪುತ್ರ ಪ್ರಭಾಕರ್ ಎಂಬಾತನನ್ನು ಸುಮನ್ ಮತ್ತು ಅರುಣಕುಮಾರ್ ಫೋನ್ ಕರೆ ಬಗ್ಗೆ ನಿಂದಿಸಿದ್ದರು. ಪ್ರಭಾಕರ್ ಒಬ್ಬ ಸೈನಿಕ, ಆತ ತನ್ನ ಮದುವೆಗಾಗಿ ಊರಿಗೆ ಬಂದಿದ್ದ ಎಂದು ವರದಿಯಾಗಿದೆ. ಮೇ 26 ರಂದು ನಿಂದನೆ ಮತ್ತು ದೈಹಿಕ ಹಲ್ಲೆಯ ನಂತರ ಅವರು ಪೊಲೀಸ್ ದೂರು ದಾಖಲಿಸಿದ್ದರು, ಆದರೆ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದರು ಎಂದು ಅವರು ಆ ಸಮಯದಲ್ಲಿ ಆರೋಪಿಸಿದರು. ದಾಳಿಯ ರಾತ್ರಿ, ಪ್ರಭಾಕರ್ ಆ ರಾತ್ರಿ ಅಲ್ಲಿಗೆ ಬಾರದ ಕಾರಣ, ಬದಲಾಗಿ ಪ್ರಭಾಕರನ್ ತಂದೆ ಆರುಮುಗಂ ಅವರನ್ನು ಟಾರ್ಗೆಟ್ ಮಾಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.