ಮಂಗಳೂರು ಮತ್ತು ದಾವಣೆಗೆರೆ ಮಹಾನಗರ ಪಾಲಿಕೆಗಳ ಆಡಳಿತ ಪರಿಷತ್ತಿಗೆ ಚುನಾವಣೆ ನಡೆಯುತ್ತಿದೆ. ನವೆಂಬರ್ 12ರಂದು ಮಂಗಳವಾರ ಮತದಾನ ನಡೆದು, ಮತ್ತೆರಡು ದಿನಗಳಲ್ಲಿ ಫಲಿತಾಂಶ ಬರಲಿದೆ. ಮೇಯರ್, ಉಪಮೇಯರ್ ಮೀಸಲು ಪ್ರಕಟದೊಂದಿಗೆ ಹೊಸದಾಗಿ ಚುನಾಯಿತರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆದರೆ, ಕಳೆದ 25 ವರ್ಷಗಳಿಂದ ಬೆಂಗಳೂರಿನ ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಯಾವುದೇ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ನೇಮಕ ಆಗಿಲ್ಲ.
74ನೇ ಸಂವಿಧಾನ ತಿದ್ದುಪಡಿ ಮೂಲಕ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಾಗರಿಕರ ಸಹಭಾಗಿತ್ವ ಬೇಕು ಎನ್ನುವ ಕಾರಣಕ್ಕಾಗಿ ವಾರ್ಡ್ ಸಮಿತಿ ರಚನೆಗೆ ಅವಕಾಶ ನೀಡಲಾಯಿತು. ಸಂವಿಧಾನ ತಿದ್ದುಪಡಿಯಾಗಿ 25 ವರ್ಷ ಕಳೆದರೂ ರಾಜ್ಯದ ಯಾವುದೇ ಪಾಲಿಕೆಯಲ್ಲಿ ಜಾರಿಗೆ ಬಂದಿಲ್ಲ. ಬಿಬಿಎಂಪಿಯ 198 ವಾರ್ಡುಗಳಲ್ಲಿ ಕೇವಲ 62 ವಾರ್ಡುಗಳಲ್ಲಿ ಮಾತ್ರ ವಾರ್ಡ್ ಸಮಿತಿ ಇದೆ. ಅದೂ ಕೂಡ ಎರಡು ವರ್ಷಗಳ ಹಿಂದೆ ರಾಜ್ಯ ಹೈಕೋರ್ಟು ನೀಡಿರುವ ಆದೇಶದ ಮೇರೆಗೆ ವಾರ್ಡ್ ಸಮಿತಿ ರಚಿಸಲಾಗಿತ್ತು. ಬಹುತೇಕ ವಾರ್ಡ್ ಸಮಿತಿಗಳು ಸಭೆ ಕೂಡ ನಡೆಸುತ್ತಿವೆ ಎಂಬುದು ಸ್ವಾಗತಾರ್ಹ ವಿಚಾರ.
ಆದರೆ, ರಾಜ್ಯದಲ್ಲಿ ಯಾವುದೇ ಮಹಾನಗರ ಪಾಲಿಕೆಗಳಲ್ಲಿ ವಾರ್ಡ್ ಸಮಿತಿ ರಚಿಸಲು ಸ್ಥಳೀಯ ಸಂಸ್ಥೆಗಳು ಮುಂದಾಗುತ್ತಿಲ್ಲ. ವಾರ್ಡ್ ಸಮಿತಿಗಳನ್ನು ರಚಿಸುವಂತೆ ಮೇಯರ್ ಹಾಗೂ ಆಯುಕ್ತರಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಜನಪ್ರತಿನಿಧಿಗಳು ತಮ್ಮ ಅಧಿಕಾರ ಮೊಟಕುಗೊಳ್ಳುತ್ತದೆ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶವಿರುವುದಿಲ್ಲ ಎಂಬ ಕಾರಣದಿಂದ ಸಮಿತಿ ರಚಿಸಲು ಮುಂದಾಗುತ್ತಿಲ್ಲ. ಆದರೆ, ವಾರ್ಡ್ ಸಮಿತಿಗಳು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿದೆ ಮತ್ತು ತಮ್ಮ ಅಧಿಕಾರಿವನ್ನು ಮೊಟಕುಗೊಳಿಸುತ್ತದೆ ಎಂಬ ತಪ್ಪು ಅಭಿಪ್ರಾಯ ಚುನಾಯಿತ ಜನಪ್ರತಿನಿಧಿಗಳಲ್ಲಿ ಇದೆ. ವಾರ್ಡ್ ಸಮಿತಿಗಳು ಚುನಾಯಿತ ಪ್ರತಿನಿಧಿಗಳನ್ನು ಕೆಲಸವನ್ನು ಸುಗಮಗೊಳಿಸಲಿದೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ.
ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ವಿಕೇಂದ್ರೀಕರಣ ನಡೆಸಿ ಸಂಪನ್ಮೂಲಗಳ ಅನುಷ್ಠಾನದಲ್ಲಿ ಸ್ಥಳೀಯ ನಾಗರಿಕರಿಗೆ ಹೊಣೆಗಾರಿಕೆ ನೀಡಲು ಸಂವಿಧಾನದ 74ನೇ ತಿದ್ದುಪಡಿ ಪ್ರಕಾರ ವಾರ್ಡ್ ಸಮಿತಿ ರಚಿಸಬೇಕಾಗುತ್ತದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1977ರ ಅಡಿಯಲ್ಲಿ ಪಾಲಿಕೆಯಲ್ಲಿ ಪ್ರತಿ ವಾರ್ಡಿಗೆ 11 ಸದಸ್ಯ ಬಲದ ವಾರ್ಡ್ ಸಮಿತಿ ಇರಬೇಕು. ಇದರಲ್ಲಿ ಕಾರ್ಪೋರೇಟರ್ ಅಧ್ಯಕ್ಷನಾಗಿದ್ದರೆ, ಒಬ್ಬ ಪಾಲಿಕೆ ಅಧಿಕಾರಿ, 3 ಮಹಿಳೆ, 2 ಎಸ್ ಸಿ, ಎಸ್ ಟಿ, ನೋಂದಾಯಿತ ಸಂಸ್ಥೆಗಳಿಂದ ಇಬ್ಬರು ಹಾಗೂ ಜನರಲ್ ಕೆಟಗರಿಯ ಮೂವರು ಜನರು ಸದಸ್ಯರು ಇರುತ್ತಾರೆ. ಈ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಿ ವಾರ್ಡ್ ಅಭಿವೃದ್ಧಿ ಯೋಜನೆ ರೂಪಿಸಬೇಕು. ಸಮಿತಿ ಕೈಗೊಳ್ಳುವ ಪ್ರತಿ ನಿರ್ಣಯವನ್ನು ಪಾಲಿಕೆಯು ಅನುಷ್ಠಾನ ಮಾಡಬೇಕು. ಕೈಗೊಂಡ ನಿರ್ಣಯ ಪಾಲನೆ ಆಗದಿದ್ದರೆ ಪಾಲಿಕೆ ಆಯುಕ್ತರಿಗೆ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.
ರಾಜ್ಯದ ಗ್ರಾಮ ಪಂಚಾಯಿತಿಗಳು ಗ್ರಾಮಸಭೆ ನಡೆಸುವಂತೆ ನಗರ ಪಾಲಿಕೆಯಲ್ಲೂ 2-3 ಬೂತ್ ಒಳಗೊಂಡ ಏರಿಯಾ ಸಭೆ ನಡೆಸಬೇಕು. ವಾರ್ಡ್‌ನ ಪ್ರತಿ ಬೂತಿನ ಮತದಾರರು ಒಳಗೊಂಡ ಸಭೆ ಇದಾಗಿರುತ್ತದೆ. ವಾರ್ಡ್ ಸಮಿತಿ ರಚನೆಯಿಂದ ಮುಖ್ಯವಾಗಿ ಪ್ರತಿಯೊಬ್ಬ ನಾಗರಿಕರೂ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಸಿಗುತ್ತದೆ. ವಾರ್ಡ್‌ಗೆ ಎಷ್ಟು ಅನುದಾನ ದೊರೆತಿದೆ, ಎಲ್ಲೆಲ್ಲಿ ಎಷ್ಟು ಖರ್ಚಾಗಿದೆ, ನೀರಿನ ಕೊರತೆ ನೀಗಿಸಬಹುದು, ಕಾಮಗಾರಿಗಳ ನಿರ್ವಹಣೆ, ಟ್ಯಾಕ್ಸ್ ಸಮಸ್ಯೆ, ಟ್ರೇಡ್ ಲೈಸನ್ಸ್ ತೊಂದರೆ ಇತ್ಯಾದಿ ಪ್ರತಿಯೊಂದು ಮೂಲ ಸೌಲಭ್ಯಗಳ ಮೇಲೆ ನಿಗಾ ವಹಿಸಲು ಅಧಿಕಾರ ಇರುತ್ತದೆ. ಬೆಳಗಾವಿ, ಶಿವಮೊಗ್ಗ. ತುಮಕೂರು, ದಾವಣಗೆರೆ, ಮಂಗಳೂರು ಹೀಗೆ ಯಾವುದೇ ಪಾಲಿಕೆಗಳಲ್ಲಿ ವಾರ್ಡ್ ಸಮಿತಿ ರಚಿಸುವ ಪ್ರಯತ್ನ ಆಗಿಲ್ಲ. ಬಹುತೇಕ ಪಾಲಿಕೆ ವ್ಯಾಪ್ತಿಯ ಪ್ರಜ್ಞಾವಂತ ನಾಗರಿಕರಿಗೆ ಕೂಡ ವಾರ್ಡ್ ಸಮಿತಿಯನ್ನು ರಚಿಸಲೇ ಬೇಕು ಎಂಬ ಹಕ್ಕೊತ್ತಾಯ ಆಂದೋಲನ ಮಾಡಲು ಸಾಧ್ಯವಾಗಿಲ್ಲ.
ತುಮಕೂರು ಮಹಾನಗರಪಾಲಿಕೆ ವಾರ್ಡ್ ಸಮಿತಿಗಳ ಅನುಷ್ಠಾನಕ್ಕಾಗಿ 2019-20ನೇ ಸಾಲಿನ ಮಹಾನಗರ ಪಾಲಿಕೆಯ ಆಯವ್ಯಯದಲ್ಲಿ10 ಲಕ್ಷ ರೂ. ಮೀಸಲಿಡಲಾಗಿದೆ. ಆದರೆ ವಾರ್ಡ್ ಸಮಿತಿ ಮಾತ್ರ ರಚನೆಯಾಗಿಲ್ಲ. ಮಂಗಳೂರಿನಲ್ಲಿ ವಾರ್ಡ್ ಸಮಿತಿ ರಚಿಸಬೇಕೆಂದು ಹತ್ತಿಪ್ಪತ್ತು ಮಂದಿಯ ಒತ್ತಾಯ ಕೇಳಿಬಂದಿದ್ದರೂ ಯಾರೂ ಅದರ ಗೊಡವೆಗೆ ಹೋಗಿಲ್ಲ. ನ್ಯಾಯಾಲಯದ ಮೊರೆ ಹೋಗದೆ ವಾರ್ಡ್ ಸಮಿತಿ ಮಂಗಳೂರಿನಲ್ಲಿ ರಚನೆ ಆಗುವ ಸಾಧ್ಯತೆಯೇ ಇಲ್ಲ.
ರಾಜೀವ್ ಗಾಂಧಿ ಪ್ರಧಾನಿ ಆಗಿದ್ದಾಗ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿಗೆ ಮುಂದಾಗಿದ್ದರು. ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಮ್ಯೂನಿಸ್ಟ್ ಪಕ್ಷಗಳು ಪ್ರಾಬಲ್ಯ ಹೊಂದಿರಲು ಪಂಚಾಯತ್ ರಾಜ್ ವ್ಯವಸ್ಥೆ ಕಾರಣ ಎಂಬುದನ್ನು ಅವರು ಮನಗಂಡಿದ್ದರು. ಆದರೆ, ರಾಜೀವ್ ಗಾಂಧಿ ಆಶಯಗಳನ್ನು ಉಪಯೋಗಿಸಿಕೊಳ್ಳಲು ಅವರ ಪಕ್ಷದವರಿಗೆ ಸಾಧ್ಯ ಆಗಲಿಲ್ಲ. ಪಿ. ವಿ. ನರಸಿಂಹ ರಾವ್ ಅವರ ಅವಧಿಯಲ್ಲಿ ಸಂವಿಧಾನ ತಿದ್ದುಪಡಿಯಾದರೂ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಯೋಜನ ಕಾಂಗ್ರೆಸ್ ಪಡೆಯಲಿಲ್ಲ. ಇದೀಗ ಅದೇ ಪಕ್ಷದವರು ಸಂವಿಧಾನ ತಿದ್ದುಪಡಿ ಅನುಷ್ಠಾನಕ್ಕೂ ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ವಿಪರ್ಯಾಸ. ದಾವಣೆಗೆರೆ ಮತ್ತು ಮಂಗಳೂರಿನಲ್ಲಿ ಪಾಲಿಕೆಗೆ ನಡೆಯುತ್ತಿರುವ ಚುನಾವಣೆಯ ಸಂದರ್ಭದಲ್ಲಿಯಾದರೂ ವಾರ್ಡ್ ಸಮಿತಿ ರಚನೆಯ ವಿಚಾರ ಚರ್ಚೆ ಆಗಲಿ ಎಂಬುದು ಈಗಿರುವ ಆಶಯ.