ಬೆಂಗಳೂರು: ಇದೇ ವರ್ಷದ ಜನವರಿ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 249 ಮಕ್ಕಳು ಕಾಣೆಯಾಗಿದ್ದಾರೆ. ತಿಂಗಳೊಂದರಲ್ಲೆ ಈ ಮಟ್ಟಿಗೆ ಮಕ್ಕಳು ಕಾಣೆಯಾಗುತ್ತಿರುವುದಕ್ಕೆ ಗೃಹ ಇಲಾಖೆಯ ನಿಷ್ಕ್ರಿಯತೆಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಕಾಣೆಯಾಗುತ್ತಿರುವ ಮತ್ತು ಅಪಹರಣವಾಗುತ್ತಿರುವ ಮಕ್ಕಳ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ. ನಮ್ಮ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಂಡಿರುವ ಕುಸಿತದ ಸಂಕೇತವಿದಲ್ಲವೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.
2018ರಿಂದ 2022ರ ಅಂತ್ಯದವರೆಗೆ 9,223 ಮಕ್ಕಳು ಕಾಣೆಯಾಗಿದ್ದಾರೆ ಎಂಬ ಮಾಹಿತಿ ಗೃಹ ಸಚಿವರೇ ವಿಧಾನ ಪರಿಷತ್ತಿಗೆ ನೀಡಿರುವ ಮಾಹಿತಿಯಲ್ಲಿ ಬಹಿರಂಗಪಡಿಸಿದ್ದಾರೆ. ನಾಪತ್ತು ತಡೆಗೆ ಹಲವು ಕ್ರಮಗಳಿದ್ದರೂ, ಈ ಪ್ರಮಾಣದಲ್ಲಿ ಮಕ್ಕಳು ನಾಪತ್ತೆಯಾಗಿರುವುದು ನಮ್ಮೀಡಿ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂದು ಕಿಡಿ ಕಾರಿದ್ದಾರೆ.
ಆರಗ ಜ್ಞಾನೇಂದ್ರ ಅವರೆ, ನೀವು ಈ ರಾಜ್ಯ ಕಂಡ ಅತ್ಯಂತ ದುರ್ಬಲ ಗೃಹ ಸಚಿವ ಎಂಬ ಕುಖ್ಯಾತಿಗೆ ಸಾಕ್ಷಿಯಾಗಿ ಈ ಬೆಳವಣಿಗೆಯು ಗಣನೆಗೆ ಬರುತ್ತದೆ. ಕಾಣೆಯಾದವರಲ್ಲಿ ಬಾಲಕಿಯರ ಪ್ರಮಾಣವೆ ಹೆಚ್ಚಿದೆ. 69% ಬಾಲಕಿಯರು, 30.25% ಬಾಲಕರು ಕಾಣೆಯಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ. ಕಾಣೆಯಾದವರಲ್ಲಿ ಇನ್ನೂ 11.5 ರಷ್ಟು ಪ್ರಮಾಣದ ಮಕ್ಕಳು ಪತ್ತೆಯಾಗಿಲ್ಲ. ಈ ಪ್ರಕರಣಗಳ ಸ್ಥಿತಿ-ಗತಿ ಏನು? ಕಳ್ಳಸಾಗಣೆ ತಡೆ ಘಟಕಗಳು ಮಂಪರಿನಲ್ಲಿವೆಯೆ? ಎಂದು ಕಿಡಿಕಾರಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 4,180 ಮಕ್ಕಳು ನಾಪತ್ತೆಯಾಗಿದ್ದಾರೆ ಇಲ್ಲವಾ ಅಪಹರಣಕ್ಕೆ ಒಳಗಾಗಿದ್ದಾರೆ. ಇದು ಒಟ್ಟು ಪ್ರಕರಣಗಳ 45.3 ರಷ್ಟಾಗುತ್ತದೆ. ವಿಶ್ವದ ಸಿಲಿಕಾನ್ ನಗರದಲ್ಲೇ ಈ ಪರಿಸ್ಥಿತಿ ಇರುವುದು ನಾಚಿಕೆಗೇಡಿನ ವಿಷಯ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಆಡಳಿತದ ಮೇಲೆ ಹಿಡಿತವಿಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗುಡುಗಿದ್ದಾರೆ.