ವಿಜಯನಗರ (ಕೊಟ್ಟೂರು): ಇಡೀ ರಾಜ್ಯವನ್ನೇ ದಂಗುಬಡಿಸಿದ್ದ ಕೊಟ್ಟೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಈಗ ಆಘಾತಕಾರಿ ‘ಮರ್ಯಾದಾ ಹತ್ಯೆ’ಯ (Honor Killing) ಆಯಾಮ ಲಭಿಸಿದೆ. ಕೇವಲ ಹಣಕ್ಕಾಗಿ ಮಾತ್ರವಲ್ಲದೆ, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವ ವಿಷಯವೇ ಈ ಬರ್ಬರ ಹತ್ಯಾಕಾಂಡಕ್ಕೆ ಪ್ರಮುಖ ಕಾರಣ ಎಂದು ಪೊಲೀಸ್ ವಿಚಾರಣೆಯಲ್ಲಿ ಬಹಿರಂಗವಾಗಿದೆ.

ಹತ್ಯೆಗೆ ಸ್ಕೆಚ್ ಹಾಕಿದ್ದು ಯಾಕೆ?
ಪಿಯುಸಿ ಓದುತ್ತಿದ್ದ ಅಕ್ಷಯ್ ತಂಗಿ ಅಮೃತಾ, ಅನ್ಯ ಕೋಮಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ನಾಲ್ಕು ತಿಂಗಳ ಹಿಂದೆಯೇ ಈ ವಿಚಾರ ತಿಳಿದಿದ್ದ ಅಕ್ಷಯ್ ಆಕೆಗೆ ಬೆದರಿಕೆ ಹಾಕಿದ್ದ. ಆದರೆ, ಜನವರಿ 26ರಂದು ತಾಯಿ ಜಯಲಕ್ಷ್ಮಿ, “ಅಮೃತಾ ಮೂರು ತಿಂಗಳ ಗರ್ಭಿಣಿ” ಎಂಬ ಸತ್ಯವನ್ನು ಮಗನಿಗೆ ತಿಳಿಸಿದ್ದರು. ತಕ್ಷಣವೇ ಗರ್ಭಪಾತ ಮಾಡಿಸೋಣ ಎಂದು ಅಕ್ಷಯ್ ಹಠ ಹಿಡಿದಿದ್ದನಾದರೂ, ಆಕೆ ಅದಕ್ಕೆ ಒಪ್ಪಿರಲಿಲ್ಲ. “ಊರವರ ಮುಂದೆ ಮರ್ಯಾದೆ ಹೋಗುತ್ತದೆ, ಇವರನ್ನು ಬಿಟ್ಟರೆ ನನಗೆ ಉಳಿಗಾಲವಿಲ್ಲ” ಎಂದು ನಿರ್ಧರಿಸಿದ ಅಕ್ಷಯ್, ಇಡೀ ಕುಟುಂಬವನ್ನೇ ಮುಗಿಸಲು ಸಂಚು ರೂಪಿಸಿದ್ದನು.

ಮೊದಲೇ ಬೆಟ್ಟಿಂಗ್ ಹಾಗೂ ಮಾದಕ ವಸ್ತುಗಳಿಂದಾಗಿ ತಲೆಕೆಡಿಸಿಕೊಂಡಿದ್ದ ಅಕ್ಷಯ್ ತಂಗಿ ವಿಚಾರ ಕೇಳಿ ಸೈಕೊಪಾತ್ ನಂತೆ ಆಗಿದ್ದ ಎನ್ನಲಾಗಿದೆ. ಕ್ರಿಕೆಟ್ ಬೆಟ್ಟಿಂಗ್ ಮತ್ತು ಗಾಂಜಾ ಚಟಕ್ಕಾಗಿ ಸುಮಾರು 50 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಅಕ್ಷಯ್, ಮನೆ ಮಾರಾಟದ ಹಣಕ್ಕಾಗಿ ಕುಟುಂಬದವರ ಮೇಲೆ ಒತ್ತಡ ಹೇರುತ್ತಿದ್ದ ಎಂದು ಈ ಹಿಂದೆ ವರದಿಯಾಗಿತ್ತು

ಜನವರಿ 26ರಂದು ಒಂದೇ ದಿನದಲ್ಲಿ ಮುಗಿದ ಮೂರು ಜೀವಗಳು ಅಂತ್ಯ ಅತ್ಯಂತ ಯೋಜಿತವಾಗಿ ಅಕ್ಷಯ್ ಒಬ್ಬೊಬ್ಬರನ್ನೇ ಹತ್ಯೆ ಮಾಡಿದ್ದಾನೆ. ಮೊದಲ ಹತ್ಯೆ (ತಾಯಿ): ಮನೆಯಲ್ಲಿ ಯಾರೂ ಇಲ್ಲದ ವೇಳೆ ತಾಯಿಯನ್ನು ಕೊಲೆಗೈದ ಈತ, ಕೂಡಲೇ ಸ್ನಾನ ಮಾಡಿಸಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ.
ತಂಗಿಗೆ ನೀಡಿದ ‘ಡೆಡ್ಲಿ ಗಿಫ್ಟ್’
ತಾಯಿಯನ್ನು ಕೊಂದ ಬಳಿಕ ಹೊರಗಿದ್ದ ತಂಗಿ ಅಮೃತಾಗೆ ಫೋನ್ ಮಾಡಿದ ಅಕ್ಷಯ್, “ನಿನಗೊಂದು ಸರ್ಪ್ರೈಸ್ ಗಿಫ್ಟ್ ತಂದಿದ್ದೀನಿ, ಬೇಗ ಮನೆಗೆ ಬಾ” ಎಂದು ನಂಬಿಸಿ ಕರೆಸಿಕೊಂಡಿದ್ದಾನೆ. ಮನೆಗೆ ಓಡಿ ಬಂದ ತಂಗಿಗೆ ಅಣ್ಣ ತೋರಿಸಿದ್ದು ಬಣ್ಣದ ಕಾಗದ ಸುತ್ತಿದ್ದ ಉಡುಗೊರೆಯನ್ನಲ್ಲ, ಬದಲಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆತ್ತ ತಾಯಿಯ ಶವವನ್ನು! ಭಯದಿಂದ ನಡುಗುತ್ತಿದ್ದ ಗರ್ಭಿಣಿ ತಂಗಿಗೆ, “ಬಯಪಡಬೇಡ, ನಿನ್ನನ್ನೂ ಅಮ್ಮನ ಹತ್ತಿರಕ್ಕೇ ಕಳಿಸುತ್ತೇನೆ” ಎಂದು ಹೇಳುತ್ತಾ ಆಕೆಯ ಕುತ್ತಿಗೆಯನ್ನೂ ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾನೆ.

ತಂದೆಯ ಅಂತ್ಯ
ಅಲ್ಲಿಗೆ ಈತನ ರಕ್ತದ ದಾಹ ತೀರಲಿಲ್ಲ. ರಾತ್ರಿ ಮನೆಗೆ ಮರಳಿದ ತಂದೆ ಭೀಮರಾಜ್ ಸೋಫಾದ ಮೇಲೆ ಕುಳಿತಿದ್ದಾಗ ಅವರ ಮೇಲೂ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಇಷ್ಟೆಲ್ಲಾ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸಲು ಈತ ಮಾಡಿದ ಸಂಚು ಮನುಕುಲವೇ ತಲೆತಗ್ಗಿಸುವಂತದ್ದು. ಮನೆಯ ಹಾಲ್‌ನಲ್ಲೇ ಸುಮಾರು 4 ಅಡಿ ಆಳದ ಗುಂಡಿ ತೋಡಿ ಮೂವರ ಶವಗಳನ್ನು ತುೂರಿಸಲು ಯತ್ನಿಸಿದ್ದಾನೆ. ತಂದೆಯ ಕಾಲುಗಳು ಗುಂಡಿಗೆ ಸರಿಯಾಗಿ ಹಿಡಿಯುತ್ತಿಲ್ಲ ಎಂಬ ಕಾರಣಕ್ಕೆ ಕೊಡಲಿಯಿಂದ ಕಾಲುಗಳನ್ನೇ ಕತ್ತರಿಸಿ ಗುಂಡಿಯಲ್ಲಿ ಹಾಕಿ ಮಣ್ಣು ಮುಚ್ಚಿ, ಮೇಲೆ ಟೈಲ್ಸ್ ಜೋಡಿಸಿ ಯಾರೂ ಪತ್ತೆ ಮಾಡದಂತೆ ನಾಟಕವಾಡಿದ್ದಾನೆ.
ಇದನ್ನೂ ಓದಿ: Union Budget 2026: ಇನ್ಮುಂದೆ ಬೈಕ್ ಅಪಘಾತ ಪರಿಹಾರ ವಿಮೆ ಹಣಕ್ಕೆ ತೆರಿಗೆ ಇಲ್ಲ
ರಾತ್ರಿಯಿಡೀ ಟಿವಿ ನೋಡುತ್ತಾ ಕುಳಿತಿದ್ದ ಹಂತಕ!
ಮೂವರನ್ನೂ ಕೊಂದ ಬಳಿಕ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದ ಈ ಕ್ರೂರಿ, ರಾತ್ರಿಯಿಡೀ ಶವಗಳ ಪಕ್ಕದಲ್ಲೇ ಕುಳಿತು ಟಿವಿ ನೋಡಿದ್ದಾನೆ. ಮರುದಿನ (ಜ. 27) ಮನೆಯ ಹಾಲ್‌ನಲ್ಲೇ ಗುಂಡಿ ತೋಡಿ ಮೂವರ ಶವಗಳನ್ನು ಹೂತುಹಾಕಿದ್ದಾನೆ. ತಂದೆಯ ಶವ ಗುಂಡಿಗೆ ಹಿಡಿಯದಿದ್ದಾಗ ಕೊಡಲಿಯಿಂದ ಅವರ ಕಾಲುಗಳನ್ನೇ ಕತ್ತರಿಸಿ ತುೂರಿಸಿದ ಈತನ ಪೈಶಾಚಿಕತೆ ಮೃಗಗಳನ್ನೂ ಮೀರಿಸುವಂತದ್ದು.

ಬೆಂಗಳೂರಿನಲ್ಲಿ ‘ಮಿಸ್ಸಿಂಗ್ ಡ್ರಾಮಾ’
ಹತ್ಯೆಯ ನಂತರ ತನ್ನ ಸೋದರಮಾವ ವಸಂತ್‌ನನ್ನು ಸಂಪರ್ಕಿಸಿದ್ದ ಅಕ್ಷಯ್, ಆತನ ಸಲಹೆಯಂತೆ ಬೆಂಗಳೂರಿಗೆ ಬಂದು ನಾಟಕವಾಡಿದ್ದಾನೆ. ತಂದೆಗೆ ಎದೆನೋವಿನ ಸಮಸ್ಯೆಯಿದ್ದ ಕಾರಣ, ಜಯದೇವ ಆಸ್ಪತ್ರೆಯ ಬಳಿ ಬಂದು ಫೋಟೋ ತೆಗೆದುಕೊಂಡು, ಮೊಬೈಲ್‌ಗಳನ್ನು ಅಲ್ಲಿನ ಡಸ್ಟ್‌ಬಿನ್‌ಗೆ ಎಸೆದಿದ್ದ. ಬಳಿಕ ತಿಲಕನಗರ ಪೊಲೀಸ್ ಠಾಣೆಗೆ ಬಂದು “ನನ್ನ ಕುಟುಂಬ ಕಾಣೆಯಾಗಿದೆ” ಎಂದು ದೂರು ನೀಡಿದ್ದ. ಆದರೆ ವಿಚಾರಣೆ ವೇಳೆ ಪೊಲೀಸರಿಗೆ ಈತನ ವರ್ತನೆಯಲ್ಲಿ ಸಂಶಯ ಕಂಡುಬಂದಾಗ ಅಸಲಿ ಸತ್ಯ ಬಯಲಾಗಿದೆ.

ಸದ್ಯ, ಎಸ್‌ಪಿ ಜಾಹ್ನವಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಅಕ್ಷಯ್‌ನನ್ನು ಬಂಧಿಸಲಾಗಿದೆ. ತಂಗಿ ಅಮೃತಾಳ ಮರಣೋತ್ತರ ಪರೀಕ್ಷೆಯಲ್ಲಿ ಗರ್ಭಿಣಿ ಎಂದು ಸಾಬೀತಾದರೆ, ಅಕ್ಷಯ್ ಮೇಲೆ ‘ಭ್ರೂಣ ಹತ್ಯೆ’ ಪ್ರಕರಣವೂ ಸೇರ್ಪಡೆಯಾಗಲಿದೆ. ಎಫ್‌ಐಆರ್‌ನಲ್ಲಿ ಅಕ್ಷಯ್‌ನೊಂದಿಗೆ ಮತ್ತೊಬ್ಬನ ಹೆಸರು (ಸೋದರಮಾವ ಅಥವಾ ಸಹಚರ) ಉಲ್ಲೇಖವಾಗಿದ್ದು, ತನಿಖೆ ಚುರುಕುಗೊಂಡಿದೆ ಎಂದು ವರದಿಯಾಗಿದೆ.
ವಿಶೇಷ ವರದಿ-ಶಿವಕುಮಾರ್











