2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಮುಂದಾಗಿದೆ. ಈ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷಗಳು ಇರುವಾಗಲೇ ಬಿಜೆಪಿಯೊಂದಿಗೆ ಮೈತ್ರಿಯಾಗಿ ಭಾರೀ ತಯಾರಿ ನಡೆಸುತ್ತಿದೆ. ಇತ್ತೀಚೆಗೆ ಲೋಕಸಭಾ ಉಪಚುನಾವಣೆಯಲ್ಲೂ ಈ ಮೈತ್ರಿ ಇತ್ತಾದರೂ ಮುಂದಿನ ಚುನಾವಣೆಗೆ ಮಾತ್ರ ತುಂಬಾ ಗಂಭೀರವಾಗಿ ಕೆಲಸ ಮಾಡಲಿದೆ. ಹೀಗೆಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಮತ್ತು ಆಂಧ್ರ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಘೋಷಿಸಿದ್ದಾರೆ.
ಆಂಧ್ರದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಗೆ ಪರ್ಯಾಯವಾಗಿ ತೃತೀಯ ರಾಜಕೀಯ ಶಕ್ತಿ ಉದಯಕ್ಕೆ ಇದು ನಾಂದಿ ಹಾಡಿದಂತಾಗಿದೆ. 2024ರಲ್ಲಿ ಅಧಿಕಾರ ಹಿಡಿಯುವ ದೂರದೃಷ್ಟಿಯಿಂದ ಈಗಲೇ ಮೈತ್ರಿಯನ್ನು ಅಣಿಗೊಳಿಸಲಾಗಿದೆ ಎನ್ನಲಾಗಿದೆ.
ಜಾತೀಯ, ವಂಶಪಾರಂಪರ್ಯ ಮತ್ತು ಭ್ರಷ್ಟ ಶಕ್ತಿಯನ್ನು ಅಂತ್ಯಗೊಳಿಸಲು ಜನಸೇನಾ ಮತ್ತು ಬಿಜೆಪಿ ಮೈತ್ರಿಕೂಟ ಕಟಿಬದ್ಧವಾಗಿದೆ. ಮುಂದಿನ ರಾಜಕೀಯ ನಡೆಗಳನ್ನಿರಿಸುವ ಸಲುವಾಗಿ ಎರಡೂ ಪಕ್ಷಗಳ ಜಂಟಿಯಾಗಿ ಸಮನ್ವಯ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
ಮುಂಬರುವ ಎಲ್ಲಾ ಚುನಾವಣೆಗಳಿಂದ ಹಿಡಿದು 2024ರ ವಿಧಾನಸಭಾ ಚುನಾವಣೆಯವರೆಗೂ ನಮ್ಮ ಮೈತ್ರಿಕೂಟವು ಒಟ್ಟಿಗೆ ಹೋರಾಡಲಿದೆ. ರಾಜ್ಯವನ್ನು ರಕ್ಷಿಸುವುದೇ ನಮ್ಮ ಗುರಿ. ಕಳೆದ ಬಾರಿಯ ಮೈತ್ರಿಯೂ ಸಂವಹನದ ಕೊರತೆಯಿಂದ ಮುರಿದುಬಿದ್ದಿತ್ತು. ಈ ಬಾರಿ ತಿಂಗಳುಗಟ್ಟಲೆ ಸುದೀರ್ಘ ಸಮಾಲೋಚನೆಗಳನ್ನು ನಡೆಸಿ ಮತ್ತೊಮ್ಮೆ ಮೈತ್ರಿ ರಚನೆ ಮಾಡಲಾಗಿದೆ. ಇನ್ನೊಮ್ಮೆ ಹೀಗಾಗುವುದಿಲ್ಲ ಎಂದು ಎರಡು ಪಕ್ಷದ ವರಿಷ್ಠರು ಭರವಸೆ ನೀಡಿದ್ದಾರೆ.
ಯಾವುದೇ ಭಿನ್ನಾಭಿಪ್ರಾಯ ಸೃಷ್ಟಿಯಾಗದಂತೆ ಪ್ರಬುದ್ಧತೆ ತೋರಲು ಎರಡೂ ಪಕ್ಷಗಳ ನಾಯಕರು ನಿರ್ಧರಿಸಿದ್ದೇವೆ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿಯೇ ತೀರ್ಮಾನಿಸಿದ್ದೇವೆ ಎಂದು ಆಂಧ್ರ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಹಿತದೃಷ್ಟಿಯಿಂದ ಬಿಜೆಪಿಯೊಂದಿಗೆ ಜನಸೇನಾ ಬೇಷರತ್ ಆಗಿ ಕೈಜೋಡಿಸಿದೆ. ನಾವು ಕೂಡ ಟಿಡಿಪಿಯತ್ತ ಕಣ್ಣೆತ್ತಿ ನೋಡದಿರಲು ನಿರ್ಧರಿಸಿದೆ. ಟಿಡಿಪಿ ಜೊತೆ ಯಾವುದೇ ಕಾರಣಕ್ಕೂ ಮರುಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸೋಮು ವೀರರಾಜು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ-ಜನಸೇನಾ ಮೈತ್ರಿಗೆ ತೀವ್ರ ಸೋಲಾಗಿತ್ತು. ಅದೊಂದು ರೀತಿ ನಮ್ಮ ಪಾಲಿಗೆ ಪ್ರಯೋಗ ಶಾಲೆಯಾಗಿತ್ತು. ಇದರ ಅನುಭವದ ಆಧಾರದ ಮೇರೆಗೆ ನಾವು ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿಕೊಳ್ಳುತ್ತಿದ್ದೇವೆ ಎಂದರು.
ಇನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಸೇನಾ ಪಕ್ಷ ಒಂದು ಸ್ಥಾನವನ್ನಷ್ಟೇ ಗೆಲ್ಲಲು ಶಕ್ಯವಾದರೂ ಹಲವು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುವಲ್ಲಿ ಸಫಲಗೊಂಡಿತ್ತು. ಮುಂದಿನ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ಜೊತೆಗಿನ ಜನಸೇನಾ ಮೈತ್ರಿಯು ಭಾರೀ ಕುತೂಹಲ ಮೂಡಿಸಿರುವುದಂತೂ ನಿಜ.